ಸಿಎಂ ಆದ ಬಳಿಕ ಬಸವರಾಜ ಬೊಮ್ಮಾಯಿ ಮೊದಲ ಬಾರಿ ದೆಹಲಿ ಭೇಟಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ದೆಹಲಿಗೆ ತೆರಳಿದ್ದಾರೆ. ಸಚಿವ ಸ್ಥಾನಕ್ಕಾಗಿ ಲಾಬಿ ಹೆಚ್ಚಾಗಿರುವಂತೆಯೇ ಸಿಎಂ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆ 6.10ಕ್ಕೆ ಇರುವ ಏರ್‌ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದಾರೆ. ಸಿಎಂ ಬೊಮ್ಮಾಯಿ ಜತೆ ಸಂಸದ ಜಿ.ಎಂ.ಸಿದ್ದೇಶ್ವರ್ ಕೂಡ ತೆರಳಿದ್ದಾರೆ. ತಮ್ಮನ್ನು ಸಿಎಂ ಆಗಿ ಆಯ್ಕೆ ಮಾಡಿರೋ ಬಿಜೆಪಿ ವರಿಷ್ಠ ನಾಯಕರಿಗೆ ಬೊಮ್ಮಾಯಿ ಧನ್ಯವಾದ ತಿಳಿಸಲು ದೆಹಲಿಗೆ ತೆರಳಿದ್ದಾರಂತೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಿ ಕೃತಜ್ಞತೆಯನ್ನು ತಿಳಿಸಲಿದ್ದಾರೆ. ಈ ವೇಳೆ ಅವರು ನೂತನ ಸಚಿವ ಸಂಪುಟ ರಚನೆ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.

ದೆಹಲಿ ಪ್ರವಾಸದ ಕುರಿತು ಈಗಾಗಲೇ ಪ್ರತಿಕ್ರಿಯೆ ನೀಡಿರುವ ಸಿಎಂ ನಾನು ದೆಹಲಿಗೆ ಭೇಟಿ ನೀಡಿ ಪ್ರಧಾನಿ, ಗೃಹ ಸಚಿವರು ಹಾಗೂ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಿದ್ದೇನೆ. ವರಿಷ್ಠರಿಗೆ ಧನ್ಯವಾದ ಹೇಳಿದ ಬಳಿಕ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಲಿದ್ದೇವೆ ಅಂತಾ ಪ್ರಮಾಣವಚನ ಸ್ವೀಕರಿಸಿದ ದಿನ ಮಾಹಿತಿ ನೀಡಿದ್ದರು. ಆದರೆ ಸಂಪುಟದ ಬಗ್ಗೆ ಚರ್ಚೆ ನಡೆದರೂ ಈ ಭೇಟಿಯಲ್ಲೇ ಆಗಲ್ಲ ಇನ್ನೊಂದು ಭೇಟಿಯಲ್ಲಿ ಆಗುತ್ತೆ ಅಂತಾ ಸ್ಪಷ್ಟಪಡಿಸಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ದೆಹಲಿಯ ಅಶೋಕ ಹೊಟೇಲ್ನಲ್ಲಿ ಸಂಸದರ ಸಭೆಯನ್ನು ಕರೆದಿದ್ದಾರೆ. ಸಂಸತ್ತಿನಲ್ಲಿ ರಾಜ್ಯದ ವಿಷಯಗಳನ್ನು ಚರ್ಚಿಸುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯದ ನೀರಾವರಿ ಯೋಜನೆ ಸೇರಿದಂತೆ ಉಳಿದ ವಿಚಾರಗಳ ಕುರಿತು ಇದೇ ವೇಳೆ ಸಿಎಂ ಚರ್ಚೆ ನಡೆಸಲಿದ್ದಾರೆ. ರಾಜ್ಯದ ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ.

 

 

 
 
 
 
 
 
 
 
 
 
 

Leave a Reply