ಅಂತೂ ಇಂತೂ ಕಮಲವಂತೆ.. ಭಾರತೀಯ ಮೂಲವಂತೆ …
ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಹುರಿಯಾಳು ಕಮಲಾ ಹ್ಯಾರಿಸ್ ತೀವ್ರ ಪೈಪೋಟಿ.
ಅಮೇರಿಕಾದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಕಾವೇರುತ್ತಿದೆ. ನಿಗದಿಯಾದಂತೆ ನವೆಂಬರ್ನಲ್ಲಿ ಚುನಾವಣೆ ನಡೆಯಬೇಕು. ಕರೊನಾ ಕಾರಣಕ್ಕೆ ಚುನಾವಣೆ ಮುಂದೂಡುವುದು ಲೇಸು ಎಂದು ಸ್ವತಃ ಟ್ರಂಪ್ ಸೇರಿ ಅನೇಕರು ಹೇಳುತ್ತಿ ದ್ದರೂ ಅಖಾಡ ರಂಗೇರುತ್ತಿದೆ.
ಅಮೇರಿಕಾದಲ್ಲಿ ಸುಮಾರು 30 ಲಕ್ಷ ಭಾರತೀಯರು ಇದ್ದಾರೆ. ಈ ಪೈಕಿ ಸರಿಸುಮಾರು 20 ಲಕ್ಷ ಮಂದಿ ಮತ ಚಲಾಯಿಸ ಬಹುದು ಎಂದು ವಿಶ್ಲೇಷಕರು ಅಂದಾಜಿಸುತ್ತ್ತಾರೆ. ಹೀಗಾಗಿ ಇವರನ್ನು ಓಲೈಸಲು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಎರಡೂ ಪಕ್ಷಗಳವರು ಪೈಪೋಟಿ ನಡೆಸುತ್ತಿದ್ದಾರೆ ಅಧ್ಯಕ್ಷೀಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್ ಹಾಗೂ ಜೊ ಬಿಡೆನ್ ಹಾಗೂ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಹುರಿಯಾಳು ಕಮಲಾ ಹ್ಯಾರಿಸ್, ಟ್ರಂಪ್ ಪ್ರಚಾರಾಂದೋಲನದ ಮುಂಚೂಣಿಯಲ್ಲಿರುವ ನಿಕ್ಕಿ ಹ್ಯಾಲೆ ಹೀಗೆ ಎಲ್ಲ ಪ್ರಮುಖರೂ ಭಾರತೀಯರತ್ತ ವಿಶೇಷ ಗಮನಹರಿಸಿದ್ದಾರೆ. ಅಮೆರಿಕ ಇತಿಹಾಸದಲ್ಲಿ ಉಪಾಧ್ಯಕ್ಷ ಸ್ಥಾನದ ಸ್ಪರ್ಧೆಗೆ ಪ್ರಮುಖ ರಾಜಕೀಯ ಮನ್ನಣೆ ಪಡೆದ ಪ್ರಥಮ ಕಪ್ಪು ವರ್ಣೀಯ ಮತ್ತು ಭಾರತೀಯ ಮೂಲದವರು ಎಂಬ ಹೆಗ್ಗಳಿಕೆ ಕಮಲಾ ಅವರದು. ಅವರ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈ ಮೂಲದವರು. ಜಮೈಕಾ ಮೂಲದ ಡೊನಾಲ್ಡ್ ಹ್ಯಾರಿಸ್ ರವರ ಪರಿಚಯ ವಿವಾಹ ಆಗುವವರೆಗೂ ಮುಟ್ಟಿತು. ಕಮಲಾ ಚಿಕ್ಕವರಿರುವಾಗಲೇ ತಂದೆ-ತಾಯಿ ವಿಚ್ಛೇದನ ಪಡೆದುಕೊಂಡರು. ಹೀಗಾಗಿ ಕಮಲಾ ಮತ್ತು ಸೋದರಿ ಮಾಯಾ ಇಬ್ಬರೂ ತಾಯಿಯ ಆಶ್ರಯದಲ್ಲೇ ಬೆಳೆದರು. ಅಜ್ಜ ಪಿ.ವಿ.ಗೋಪಾಲನ್ ಹಾಗೂ ಅಜ್ಜಿ ರಾಜನಮ್ ಅವರು ತಮ್ಮ ಜೀವನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ ಎಂದು ಕಮಲಾ ಹೇಳಿತ್ತಿರುತ್ತಾರೆ. ಚೆನ್ನೈ ಸಮುದ್ರ ಬೀಚಿನಲ್ಲಿ ಸುತ್ತಾಡಿದ ನೆನಪುಗಳನ್ನೂ ಹಂಚಿಕೊಂಡಿದ್ದಾರೆ. ಚೆನ್ನೈನ ಇಡ್ಲಿ ರುಚಿಯನ್ನೂ ಹೊಗಳುತ್ತಾರೆ. ಕಮಲಾ 2004ರಲ್ಲಿ ಸ್ಯಾನ್ಫ್ರಾನ್ಸಿಸ್ಕೋದ ಡಿಸ್ಟ್ರಿಕ್ಟ್ ಅಟಾರ್ನಿ ಆದರು.
