ವಿಮಾನದ ಚಕ್ರದ ಸಂಧಿಯಲ್ಲಿ ಮೃತದೇಹ

ಲಂಡನ್‌: ಗ್ಯಾಂಬಿಯಾದಿಂದ ಬ್ರಿಟನ್​ಗೆ ಬಂದ ವಿಮಾನವೊಂದರ ಚಕ್ರದ ಸಂಧಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಗ್ಯಾಂಬಿಯಾ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ರಾಜಧಾನಿ ಬಂಜುಲ್​ನಿಂದ ಲಂಡನ್​ನ ಗ್ಯಾಟ್​​ವಿಕ್ ವಿಮಾನ ನಿಲ್ದಾಣಕ್ಕೆ  ತೆರಳಿದ್ದ ಟಿಯುಐ ಏರ್​ವೇಸ್​ನ ವಿಮಾನದ ಚಕ್ರದ ಸಂಧಿಯಲ್ಲಿ ಅಪರಿಚಿತ ಕಪ್ಪು ವರ್ಣೀಯ ವ್ಯಕ್ತಿಯ ಮೃತದೇಹ  ಪತ್ತೆಯಾಗಿದೆ.

ಯಾವುದೇ ದಾಖಲೆಗಳಾಗಲೀ, ಹೆಸರು, ವಯಸ್ಸು, ರಾಷ್ಟ್ರೀಯತೆ ಇತ್ಯಾದಿ ವಿವರಗಳನ್ನು ತಿಳಿಯುವುದಕ್ಕೆ ಸಂಬಂಧಿಸಿದ ಯಾವುದೇ ಕುರುಹು ಇರಲಿಲ್ಲ. ಮೃತ ವ್ಯಕ್ತಿ ಗ್ಯಾಂಬಿಯಾ ಪ್ರಜೆಯೇ ಅಥವಾ ಬೇರೆ ದೇಶದವರೇ ಎಂಬ ವಿಚಾರ ದಲ್ಲಿ ಸ್ಪಷ್ಟತೆ ಇಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗುರುತು ಪತ್ತೆಗಾಗಿ ಮೃತದೇಹದ ಡಿಎನ್​ಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಗ್ಯಾಂಬಿಯಾ ಅಧಿಕಾರಿಗಳು ಬ್ರಿಟಿಷ್ ಪೊಲೀಸರ ಜತೆ ಸಂಪರ್ಕದಲ್ಲಿದ್ದಾರೆ. ಗುರುತು ಪತ್ತೆಗಾಗಿ ಮೃತದೇಹದ ಡಿಎನ್​ಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಗ್ಯಾಂಬಿಯಾ ಸರ್ಕಾರದ ವಕ್ತಾರ ಎಬ್ರಿಮಾ ಜಿ. ಸಂಕರೆ ತಿಳಿಸಿದ್ದಾರೆ.

ಬ್ರಿಟನ್​ ಪೊಲೀಸರ ಜತೆ ಸಂಪರ್ಕದಲ್ಲಿರುವುದರೊಂದಿಗೆ ಗ್ಯಾಂಬಿಯಾ ಪೊಲೀಸರೂ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ದುರದೃಷ್ಟಕರ ಘಟನೆ ಬಗ್ಗೆ ಸಾರ್ವಜನಿಕರಿಗೆ ಶೀಘ್ರದಲ್ಲೇ ವಿವರಗಳನ್ನು ಒದಗಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಆಫ್ರಿಕಾ ದೇಶಗಳಿಂದ ಯುರೋಪ್​ ದೇಶಗಳಿಗೆ ಬಂದ ವಿಮಾನಗಳಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆಗಳು ಈ ಹಿಂದೆಯೂ ವರದಿಯಾಗಿದ್ದವು. ಈ ವರ್ಷದ ಆರಂಭದಲ್ಲಿ ಕೀನ್ಯಾದಿಂದ ಆ್ಯಮ್​ಸಟರ್​ಡ್ಯಾಂಗೆ ಬಂದ ಸರಕು ಸಾಗಣೆ ವಿಮಾನದ ಮುಂಭಾಗದ ಚಕ್ರದ ಸಂಧಿಯಲ್ಲಿ ಮೃತದೇಹ ಪತ್ತೆಯಾಗಿತ್ತು. 2019ರಲ್ಲಿಯೂ ಇಂಥದ್ದೇ ಪ್ರಕರಣವೊಂದು ವರದಿಯಾಗಿತ್ತು.

 
 
 
 
 
 
 
 
 
 
 

Leave a Reply