ಸ್ವಚ್ಛತಾ ಸಿಬ್ಬಂದಿ ಹಲ್ಲೆ ಪ್ರಕರಣ:ಪರವಾನಿಗೆ ರದ್ದು

 ಉಡುಪಿ: ಕಸ ವಿಲೇವಾರಿ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಉಡುಪಿ ನಗರಸಭೆ ತೀಕ್ಷ್ಣ ನಿರ್ಧಾರ ತೆಗೆದುಕೊಂಡಿದ್ದು, ಭಾನುವಾರ ನಡೆದ ತುರ್ತು ಖಂಡನಾ ನಿರ್ಣಯ ಸಭೆಯಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಆಸ್ಮಾ ಕ್ಯಾಸೆಟ್ ಕಾರ್ನರ್ ಅಂಗಡಿಯ ವ್ಯಾಪಾರ ಪರವಾನಿಗೆ ರದ್ದು ಗೊಳಿಸಲಾಗಿದೆ.

 

ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಗುತ್ತಿಗೆ ನೌಕರರ ರಕ್ಷಣೆಗೆ ಆಡಳಿತ ಬದ್ಧವಾಗಿದ್ದು, ಕೆಲವರು ಅನಗತ್ಯವಾಗಿ ನಗರಸಭೆ ವಿರುದ್ಧ ಪೌರಕಾರ್ಮಿಕರನ್ನು ಎತ್ತಿಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ದುವರ್ತನೆ ತೋರಿಸಿದರೆ ಯಾವುದೇ ಪಕ್ಷಭೇದ ವಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಇದರಲ್ಲಿ ಯಾವುದೇ ಸಂಶಯಬೇಡ. ನಗರಸಭಾ ಸದಸ್ಯರಾಗಲೀ, ಪಕ್ಷದ ಪದಾಧಿಕಾರಿಗಳಾಗಲೀ ಅಥವಾ ನನ್ನ ಮನೆಯವರೇ ಆಗಿದ್ದರೂ ಕಠಿಣಕ್ರಮ ಜರುಗಿಸಲಾಗುವುದು. ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷದ ಸದಸ್ಯರು ಬೀದಿಯಲ್ಲಿ ನಿಂತು ಮಾತನಾಡುವ ಬದಲು ಅಧಿವೇಶನಕ್ಕೆ ಬಂದು ತಮ್ಮ ಅಭಿಪ್ರಾಯ ಮಂಡಿಸಬೇಕು ಎಂದು ಹೇಳಿದರು. 

ಕಾರ್ಮಿಕರ ಮೇಲೆ ಹಲ್ಲೆ ಹಾಗೂ ಕೆಲವು ಸಂಘಟನೆ ಪದಾಧಿಕಾರಿಗಳು ಅರೋಗ್ಯ ನಿರೀಕ್ಷಕ ಕರುಣಾಕರ್ ವಿರುದ್ಧ ಅವಾಚ್ಯಶಬ್ದ ಬಳಕೆ ಮಾಡಿರುವ ಕುರಿತು ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ವಿರೋಧ ಪಕ್ಷದ ಸದಸ್ಯರು ಸಭೆಗೆ ಗೈರಾಗಿದ್ದು, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಉದಯ ಶೆಟ್ಟಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply