ಮೊಬೈಲ್ ಆ್ಯಪ್ ಮೂಲಕ ಮನೆಯಲ್ಲಿಯೇ ಕುಳಿತು ತೆರಿಗೆ,ನೀರಿನ ಬಿಲ್ ಪಾವತಿ

ಉಡುಪಿ: ಮೊಬೈಲ್ ಆ್ಯಪ್ ಮೂಲಕ ಮನೆಯಲ್ಲಿಯೇ ಕುಳಿತು ತೆರಿಗೆ, ನೀರಿನ ಬಿಲ್ ಪಾವತಿಸುವ ನಗದು ರಹಿತ ವ್ಯವಹಾರವನ್ನು ಈಗಾಗಲೇ ಉಡುಪಿ ಜಿಲ್ಲೆಯ 15 ಗ್ರಾಪಂಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಕಳೆದ ಎರಡು ತಿಂಗಳಲ್ಲಿ ಈ ಗ್ರಾಪಂಗಳಲ್ಲಿ ಶೇ.30ರಷ್ಟು ಡಿಜಿಟಲ್ ಪಾವತಿ ಮೂಲಕ ವ್ಯವಹಾರಗಳು ನಡೆಯುತ್ತಿವೆ. ಕಳೆದ ವರ್ಷ ಕಾಡೂರು ಗ್ರಾಪಂನಲ್ಲಿ ಈ ಯೋಜನೆಯನ್ನು ಪೈಲೆಟ್ ಯೋಜನೆಯನ್ನಾಗಿ ಅನುಷ್ಠಾನಗೊಳಿಸಲಾಗಿತ್ತು. ಇಲ್ಲಿ ಶೇ.85ರಷ್ಟು ಡಿಜಿಟಲ್ ಪಾವತಿ ಮೂಲಕ ತೆರಿಗೆ ಸಂಗ್ರಹ ಹಾಗೂ ಬಿಲ್ ವಸೂಲಿ ಮಾಡುವುದ ರೊಂದಿಗೆ ಒಂದು ವರ್ಷದಲ್ಲಿ 7.5ಲಕ್ಷ ರೂ. ಹಣ ಸಂಗ್ರಹಿಸಲಾಗಿತ್ತು.
ಹೀಗೆ ಯಶಸ್ವಿಯಾಗಿರುವ ಈ ಯೋಜನೆಯನ್ನು ಮೊದಲ ಹಂತದಲ್ಲಿ ಕಾಡೂರು ಸೇರಿದಂತೆ 15 ಗ್ರಾಪಂಗಳಿಗೆ ವಿಸ್ತರಿಸಲಾಗಿದೆ. ಉಡುಪಿ ತಾಲೂಕಿನ ಆರೂರು, ಕುಕ್ಕೆಹಳ್ಳಿ, ಕಾಡೂರು, ಇನ್ನಂಜೆ, ಚೇರ್ಕಾಡಿ, ಹಾವಂಜೆ, ಕುಂದಾಪುರ ತಾಲೂಕಿನ ಕುಂಭಾಶಿ, ಹೊಸಾಡು, ತ್ರಾಸಿ, ಮರವಂತೆ, ವಂಡ್ಸೆ, ಕಾರ್ಕಳ ತಾಲೂಕಿನ ವರಂಗ, ಎರ್ಲಪಾಡಿ, ಮುಂಡ್ಕೂರು, ಕಡ್ತಲ ಗ್ರಾಪಂಗಳಲ್ಲಿ ಜೂ.20ರಿಂದ ಯುವ ಪೇ ಆ್ಯಪ್ ಮೂಲಕ ಡಿಜಿಟಲ್ ಪಾವತಿಯನ್ನು ಆರಂಭಿಸಲಾಗಿದೆ. ಇವುಗಳ ಪೈಕಿ ಕುಕ್ಕೆಹಳ್ಳಿ ಗ್ರಾಪಂನಲ್ಲಿ ಅತಿಹೆಚ್ಚು ಶೇ.97 ಡಿಜಿಟಲ್ ಪಾವತಿ ಮೂಲಕ ತೆರಿಗೆ ಬಿಲ್ ಸಂಗ್ರಹ ನಡೆಯುತ್ತಿದೆ.
ಆ್ಯಪ್‌ನಲ್ಲಿರುವ ಸೌಲಭ್ಯಗಳು: ಸದ್ಯ ಈ ಆ್ಯಪ್ ಮೂಲಕ ಮನೆ ತೆರಿಗೆ, ನೀರಿನ ಬಿಲ್, ಉದ್ಯಮ ಪರವಾನಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಮುಂದೆ ಈ ಆ್ಯಪ್‌ನಲ್ಲಿ ಕಟ್ಟಡ ಅನುಮತಿ, ಆದಾಯ ಪತ್ರ, 9/11 ಪತ್ರ, ಅಂಗಡಿ ಬಾಡಿಗೆ, ಜಾತಿ ಪತ್ರ, ರೇಷನ್ ಕಾರ್ಡ್, ಆಧಾರ್ ಶುಲ್ಕ, ಮನೆ ಗಳಿಗೆ ಎಸ್‌ಎಲ್‌ಆರ್‌ಎಂ ಶುಲ್ಕ, ಎನ್‌ಓಸಿ, ಕಟ್ಟಡ ಅನುಮತಿ ಸೌಲಭ್ಯ ಗಳನ್ನು ಕೂಡ ನೀಡಲಾಗುತ್ತದೆ.
ಇದು ಮಾತ್ರವಲ್ಲದೆ ಪ್ರಸ್ತುತ ಈ ಆ್ಯಪ್‌ನಿಂದ ರೀಚಾರ್ಜ್, ಡಿಟಿಎಚ್, ವಿದ್ಯುತ್ ಬಿಲ್, ಕ್ರೆಡಿಟ್ ಕಾರ್ಡ್, ಟೆಲಿಫೋನ್ ಬಿಲ್, ಜೀವವಿಮೆ, ಗ್ಯಾಸ್, ಬ್ರಾಡ್‌ಬ್ಯಾಂಡ್, ಸಾಲದ ಕಂತು, ಕೇಬಲ್ ಟಿವಿಯ ಬಿಲ್‌ಗಳನ್ನು ಪಾವತಿಸ ಬಹುದಾಗಿದೆ. ಈಗಾಗಲೇ ಈ ಗ್ರಾಪಂಗಳ ಕೆಲವು ಮಂದಿ ಈ ಆ್ಯಪ್ ಬಳಸಿ ತೆರಿಗೆ, ಬಿಲ್ ಪಾವತಿಸಲು ಆರಂಭಿಸಿದ್ದಾರೆ. ಅದರಂತೆ ಈ ಆ್ಯಪ್ ಮೂಲಕ ಮನೆ ತೆರಿಗೆ ಶೇ.80, ನೀರಿನ ಬಿಲ್ ಶೇ.15, ಉದ್ಯಮ ಪರವಾನಿಗೆ ಶೇ.5ರಷ್ಟು ಪಾವತಿಯಾಗಿದೆ.
ಪ್ರಯೋಜನಗಳು? : ಇಂರ್ಟ್ನೆಟ್ ಸಹಿತ/ರಹಿತ ಸ್ಮಾರ್ಟ್ ಮತ್ತು ಪೀಚರ್ ಫೋನ್‌ಗಳ್ಲಿ ಮನೆ ತೆರಿಗೆ, ಬಿಲ್‌ಗಳನ್ನು ಯುವ ಪೇ ಆ್ಯಪ್ ಬಳಸಿ ಡಿಜಿಟಲ್ ರೂಪದಲ್ಲಿ ಪಾವತಿ ಮಾಡಬಹುದಾಗಿದೆ. ಯುವ ಪೇ ಮಾತ್ರವಲ್ಲದೇ ಬೇರೆ ಯಾವುದೇ ಯುಪಿಐ ಆಧಾರಿತ ಅಪ್ಲೀಕೇಶನ್‌ಗಳನ್ನು ಪಾವತಿಗೆ ಉಪಯೋಗಿಸಬಹುದಾಗಿದೆ. ಮನೆಯಲ್ಲಿ ಕುಳಿತು ಡಿಜಿಟಲ್ ಪಾವತಿ ಮಾಡುವುದರಿಂದ ಕೋವಿಡ್-19 ಸೋಂಕಿತ ವ್ಯಕ್ತಿಯ ಸಂಪರ್ಕದಿಂದ, ಕರೆನ್ಸಿ ನೋಟು ಬಳಕೆಯಿಂದ ರೋಗ ಹರಡುವುದನ್ನು ತಪ್ಪಿಸಬಹುದಾಗಿದೆ. ಅದೇ ರೀತಿ ಇದರಿಂದಾಗಿ ಗ್ರಾಪಂ ಬಿಲ್ ಕಲೆಕ್ಟರ್ ಮನೆಮನೆಗೆ ಬರುವ ಅವಶ್ಯಕತೆ ಕೂಡ ಇರುವುದಿಲ್ಲ.
ತೆರಿಗೆ ಪಾವತಿಸಲು ಜನ ಕೊನೆಯ ದಿನಾಂಕದ ವರೆಗೆ ಕಾಯದೆ ಬೇಗನೆ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಇದರಿಂದ ಗ್ರಾಪಂಗಳಿಗೆ ತುಂಬಾ ಅನುಕೂಲವಾಗುತ್ತಿದೆ. ಈ ಸೇವೆಗಾಗಿ ಶೇ.1ರಷ್ಟು ಸೇವಾ ಶುಲ್ಕವನ್ನು ನೀಡಬೇಕಾಗುತ್ತದೆ. ಗರಿಷ್ಠ ಅಂದರೆ 20ರೂ.ವರೆಗೆ ಮಾತ್ರ ಕಡಿತ ಮಾಡಲಾಗುತ್ತದೆ ಎಂದು ಯುವ ಪೇ ಆ್ಯಪ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ನಾಕ್ ತಿಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಎಲ್ಲ ಗ್ರಾಪಂಗಳಿಗೆ ವಿಸ್ತರಣೆ
ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಈ ಯೋಜನೆ ಯನ್ನು ಎರಡನೆ ಹಂತದಲ್ಲಿ ಉಳಿದ 143 ಗ್ರಾಪಂಗಳಿಗೆ ವಿಸ್ತರಿಸಲು ಯೋಜಿಸ ಲಾಗಿದೆ. ಈ ಕುರಿತು ಜಿಪಂ ಸಿಇಓ ಸಭೆ ಕರೆದು ಚರ್ಚಿಸಿ, ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಎಲ್ಲ ಗ್ರಾಪಂಗಳನ್ನು ಡಿಜಿಟಲ್ ಪಾವತಿಗೆ ಸಜ್ಜುಗೊಳಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿರುವ 158 ಗ್ರಾಪಂಗಳಿಂದ ಈ ವರ್ಷ 24ಕೋಟಿ ರೂ. ತೆರಿಗೆ ಹಣ ಸಂಗ್ರಹ ಆಗಬೇಕಾಗಿದೆ. ಈಗಾಗಲೇ 15 ಗ್ರಾಪಂಗಳಲ್ಲಿ ಶೇ.30ರಷ್ಟು ಡಿಜಿಟಲ್ ಪಾವತಿ ಮೂಲಕ ಹಣ ಸಂಗ್ರಹಿಸಲಾಗುತ್ತದೆ. ಎಲ್ಲ ಗ್ರಾಪಂಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಒಂದು ಬಾರಿ ತರಬೇತಿ ನೀಡಬೇಕಾಗುತ್ತದೆ ಎಂದು ಯುವ ಪೇ ಆ್ಯಪ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ನಾಕ್ ತಿಳಿಸಿದ್ದಾರೆ.
ಬಾಕ್ಸ್ ಮಾಡಿ….
ಕಡ್ತಲ ಗ್ರಾಪಂ ವ್ಯಾಪ್ತಿಯಲ್ಲಿ ಕಡ್ತಲ ಕುಕ್ಕುಜೆ, ಎಳ್ಳಾರೆ ಗ್ರಾಮಗಳಲ್ಲಿ ಒಟ್ಟು 1470 ಮನೆ ಹಾಗೂ 5370 ಜನಸಂಖ್ಯೆ ಇದೆ. ಈ ಡಿಜಿಟಲ್ ಪಾವತಿ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ಅಲ್ಲಲ್ಲಿ ಬ್ಯಾನರ್ ಕಟೌಟ್‌ಗಳನ್ನು ಹಾಕಿ ಪ್ರಚಾರ ಮಾಡಲಾ ಗುತ್ತಿದೆ. ತುಂಬಾ ಸುಲಭ ರೀತಿಯಲ್ಲಿ ತೆರಿಗೆ ಮತ್ತು ಬಿಲ್ ಪಾವತಿಸಲು ಅನುಕೂಲವಾಗುವುದರಿಂದ ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಗ್ರಾಮಸ್ಥರು ಕಚೇರಿ ಬಂದು ಕ್ಯೂ ನಿಲ್ಲುವುದನ್ನು ತಪ್ಪಿಸಬಹುದಾಗಿದೆ.
-ಫರ್ಝಾನ ಎಂ., ಪಿಡಿಓ, ಕಡ್ತಲ ಗ್ರಾಪಂ.
 
 
 
 
 
 
 
 
 
 
 

Leave a Reply