​ಮೀನಿಗೆ ಫಾರ್ಮಾಲಿನ್ ಬಳಕೆ ಆರೋಪ- ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಜಿಲ್ಲೆಯಲ್ಲಿ ಮಾರಾಟಗೊಳ್ಳುತ್ತಿರುವ ಮೀನುಗಳಿಗೆ ಫಾರ್ಮಾಲಿನ್ ಕೆಮಿಕಲ್ ಬಳಕೆಯಾಗುತ್ತಿದೆ ಎಂದು ಸುಳ್ಳು ಆಪಾದನೆ ಮಾಡಿ ದೂರು ನೀಡಿದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮೀನು ಮಾರಾಟ ಫೆಡರೇಶನ್ ಮತ್ತು ಮಲ್ಪೆ ಮೀನುಗಾರರ ಸಂಘ ಜಿಲ್ಲಾಧಿಕಾರಿ ಜಿ ಜಗದೀಶ್ ಅವರಿಗೆ ಮನವಿ ಸಲ್ಲಿಸಿದೆ.

 
ಈ ವೇಳೆ ಮಾತನಾಡಿದ ಮೀನುಗಾರ ಮುಖಂಡ ಯಶ್ಪಾಲ್ ಸುವರ್ಣ ಅನಧಿಕೃತ ಸ್ಟಾಲ್ ಗಳಲ್ಲಿ ಮೀನು ಮಾರಾಟ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಅಲ್ಲಿ ಫಾರ್ಮಾಲಿನ್ ರಾಸಾಯನಿಕ ಬಳಕೆಯಾಗಿದ್ದರೆ ಅದಕ್ಕೆ ಮೀನುಗಾರರು ಜವಾಬ್ದಾರರನ್ನಾಗಿ ಮಾಡುವುದು ಸರಿಯಲ್ಲ. ಎಲ್ಲಿಯಾದರೂ ಫಾರ್ಮಾಲಿನ್ ರಾಸಾಯನಿಕ ಬಳಕೆಯಾಗದ್ದಲ್ಲಿ ಅದಕ್ಕೆ ಸೂಕ್ತ ದಾಖಲೆ ನೀಡಬೇಕು.

ಆರೋಪ ಮಾಡಿದವರು ಸೂಕ್ತ ದಾಖಲೆ ನೀಡಬೇಕು ಮತ್ತು ಇದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ ವಿರುದ್ದ ಕೂಡ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಮೀನುಗಾರಿಕೆ ಉದ್ಯಮ ಸಮಸ್ಯೆಯಲ್ಲಿದ್ದು ಸುಳ್ಳು ಸುದ್ದಿ ಹರಡುವುದರಿಂದ ಮೀನುಗಾರಿಕೆ ಸಂಪೂರ್ಣವಾಗಿ ನಾಶವಾಗುವ ಪರಿಸ್ಥಿತಿ ಇದೆ ಎಂದರು.

ಮೀನಿನ ಗುಣಮಟ್ಟದ ವಿಷಯದಲ್ಲಿ ಗ್ರಾಹಕರು ಜಾಗರೂಕತೆಯಿಂದ ವ್ಯವಹರಿಸತಕ್ಕದ್ದು, ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿರುವವರ ವಿರುದ್ದ ಜಿಲ್ಲಾಡಳಿತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು. ಈ ವೇಳೆ ಮೀನುಗಾರರ ಮುಖಂಡರಾದ ಯಶಪಾಲ್ ಸುವರ್ಣ, ರಮೇಶ್ ಕೋಟ್ಯಾನ್, ಕಿಶೋರ್ ಡಿ ಸುವರ್ಣ, ಸುಭಾಶ್ ಮೆಂಡನ್, ರಾಮಚಂದ್ರ ಕುಂದರ್, ಜಯ ಸಿ ಕೋಟ್ಯಾನ್, ದಯಾನಂದ ಸುವರ್ಣ, ರತ್ನಾಕರ ಸಾಲ್ಯಾನ್, ವಿನಯ್ ಕರ್ಕೇರಾ ಹಾಗೂ ಇತರರು ಉಪಸ್ಥಿತರಿದ್ದರು.  
 
 
 
 
 
 
 
 
 
 
 

Leave a Reply