ಸ್ವಾತಂತ್ರ್ಯ ಸೇನಾನಿ ಅಪ್ಪಟ ಗಾಂಧೀವಾದಿ ಬಂಟಕಲ್ಲು ಕೆ.ಎಲ್ ಶರ್ಮಾರವರ ಬದುಕು ಆದರ್ಶಪ್ರಾಯ – ಕೆ.ಶ್ರೀನಿವಾಸ ರಾವ್

ಶಿರ್ವ:-ಶಿರ್ವ: -ಕಟ್ಟಾ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮೂಲತ: ಕಟಪಾಡಿ ಕೋಟೆಲಕ್ಷ್ಮೀನಾರಾಯಣ ಶರ್ಮಾರವರು, ಬಾಲ್ಯದಲ್ಲೇ ಶಿವಾಜಿ, ರಾಣಾಪ್ರತಾಪ ಸಿಂಹ, ಸ್ವಾಮೀ ವಿವೇಕಾನಂದ ಹಾಗೂ ಕ್ರಾಂತಿಕಾರಿಗಳ ಹೋರಾಟದ ಘಟನೆಗಳ ಮೂಲಕ ಪ್ರಭಾವಿತರಾಗಿದ್ದು, ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಜಾಗೃತಿಗಾಗಿ ಕರಾವಳಿ ಜಿಲ್ಲೆಗೆ ಆಗಮಿಸಿದಾಗ ಕಟಪಾಡಿಯಲ್ಲಿ ಕಂಡು ಅವರ ಮಾತುಗಳಿಗೆ ಪ್ರಭಾವಿತರಾಗಿ ಗಾಂಧಿಅನುಯಾಯಿಯಾಗಿ ದೇಶದ   ಸ್ವಾತಂತ್ರ್ಯ ಚಳುವಳಿಗೆ ಸಮರ್ಪಸಿಕೊಂಡ ತಾಮ್ರ ಪ್ರಶಸ್ತಿ ವಿಜೇತ ಬಂಟಕಲ್ಲು ಕೆ.ಎಲ್.ಶರ್ಮಾರವರ ಬದುಕು ಎಲ್ಲರಿಗೂ ಆದರ್ಶ ಪ್ರಾಯ ಎಂದು ಶರ್ಮಾರವರ ವಿದ್ಯಾರ್ಥಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಶ್ರೀನಿವಾಸ ರಾವ್ ನುಡಿದರು.

ಅವರು ಶನಿವಾರ   ಸ್ವಾತಂತ್ರ್ಯ  ಸೇನಾನಿ ಬಂಟಕಲ್ಲು ದಿ.ಕೆ.ಎಲ್ ಶರ್ಮಾರವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ “ಅಮೃತ ಭಾರತಿಗೆ ಕನ್ನಡದ ಆರತಿ”   ಸ್ವಾತಂತ್ರ್ಯ  ಅಮೃತ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ   ಸ್ವಾತಂತ್ರ್ಯ   ಸೇನಾನಿಗಳ ಸ್ಮರಣೆಯ “ಅಮೃತಾಂಜಲಿ” ಕಾರ್ಯ ಕ್ರಮದಲ್ಲಿ ಶರ್ಮಾರವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಿ ಮಾತನಾಡುತ್ತಾ, ಶರ್ಮಾರವರು ಬಳ್ಳಾರಿ,ಪುಣೆ, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೋರಾಟ ನಡೆಸಿ ವಿವಿಧ ಸೆರೆಮನೆಗಳಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಿ ಅನುಭವಿಸಿದ ಸಂಕಷ್ಟದ ಘಟನೆಗಳನ್ನು ವಿವರಿಸಿದರು.

ಸಾತಂತ್ರ್ಯಾನಂತರ ವಿವಿಧ ಸಂಸ್ಥಾನಗಳ ಏಕೀಕರಣ ಚಳುವಳಿ, ಆಚಾರ್ಯ ವಿನೋಬಾಜಿಯವರೊಂದಿಗೆ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ನೀಡಿದರು.  ಹೋರಾಟದ ಪ್ರಯುಕ್ತ ಬಂಟಕಲ್ಲಿನಲ್ಲಿ ಸರಕಾರ ನೀಡಿದ ಹತ್ತು ಎಕ್ರೆ ಜಾಗದಲ್ಲಿ ನೆಲೆಸಿ, ಪ್ರಗತಿಪರ ಕೃಷಿಕರಾಗಿ, ಶಿರ್ವ ಹಿಂದೂ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಮಾದರಿ ಜೀವನ ನಡೆಸಿದರು.

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶರ್ಮಾರವರವರ ಮನೆಪಕ್ಕದಿಂದ ಹಾದು ಹೋಗುವ ಮತ್ತು ಅವರು ನಡೆದಾಡಿದ ಬಂಟಕಲ್ಲು ಇಂಜಿನಿಯರಿ೦ಗ್ ಕಾಲೇಜು ಸಮೀಪದಿಂದ -ಇನ್ನಂಜೆ ಸಂಪರ್ಕರಸ್ತೆಗೆ   ಸ್ವಾತಂತ್ರ್ಯ  ಅಮೃತಮಹೋತ್ಸವದ ಶುಭಾವಸರದಲ್ಲಿ ಪಂಚಾಯತ್ ವತಿಯಿಂದ ಶರ್ಮಾರವರ ಹೆಸರನ್ನು ಇಡುವ ನಿರ್ಣಯ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಶಿರ್ವ ಗ್ರಾ.ಪಂ.ಅಧ್ಯಕ್ಷ ಕೆ.ಆರ್.ಪಾಟ್ಕರ್. ಬೆಳ್ಳೆ ಗ್ರಾ.ಪಂ.ಅಧ್ಯಕ್ಷ ಸುಧಾಕರ ಪೂಜಾರಿ, ಪ್ರದೀಪ್ ಬಸ್ರೂರು, ಶರ್ಮಾರವರ ಪುತ್ರ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ವೇದಿಕೆಯಲ್ಲಿ ಉಪಸ್ಥಿತಿತರಿದ್ದರು. ಕಸಾಪ ಸಮಿತಿ ಸದಸ್ಯೆ ಪ್ರಜ್ಞಾ ಮಾರ್ಪಳ್ಳಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸದಸ್ಯ ಎಸ್.ಎಸ್.ಪ್ರಸಾದ್ ನಿರೂಪಿಸಿದರು.

ಸಮಿತಿಯ ಕೋಶಾಧ್ಯಕ್ಷ ವಿದ್ಯಾಧರ್ ಪುರಾಣಿಕ್ ಧನ್ಯವಾದವಿತ್ತರು. ವಿದ್ಯಾ ಅಮ್ಮಣ್ಣಾಯ, ನವ್ಯತಾ ನಾಡಗೀತೆ ಹಾಡಿದರು. ಶರ್ಮಾರವರ ಮಕ್ಕಳು, ಮೊಮ್ಮಕ್ಕಳು, ಅಹ್ವಾನಿತ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು

 
 
 
 
 
 
 
 
 

Leave a Reply