‘ಮನ್ವಂತರ-2020’ ಆನ್‌ಲೈನ್ ರಂಗೋಲಿ  

ಕೋಟ್ಯಾಂತರ ದೇಶವಾಸಿಗಳ ಹಾಗೂ ರಾಮ ಭಕ್ತರ ಶತಮಾನಗಳ ನಿರೀಕ್ಷೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಭೂಮಿ ಪೂಜನದ ಮೂಲಕ ಫಲಿಸಿದೆ. ಆಗಸ್ಟ್5, ದೇಶದ ಸಂಸತ್ತಿನಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಅಖಂಡ ಭಾರತವನ್ನು ಒಗ್ಗೂಡಿಸಿದ ದಿನವೂ ಆಗಿದೆ. ಶ್ರೀ ರಾಮ ಮಂದಿರ ನಿರ್ಮಾಣದಿಂದ ಅಖಂಡ ಭಾರತ ಸುಭಿಕ್ಷತೆಯಿಂದ ರಾಮ ರಾಜ್ಯವಾಗಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಅ.೫ರಂದು ಬಿಜೆಪಿ ಉಡುಪಿ ನಗರ ಮತ್ತು ಜಿಲ್ಲಾ ಮಹಿಳಾ ಮೋರ್ಚಾದ ಜಂಟಿ ಆಶ್ರಯದಲ್ಲಿ ಶ್ರೀ ರಾಮ ಮಂದಿರ ಭೂಮಿ ಪೂಜನದ ಪ್ರಯುಕ್ತ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಶ್ರೀ ರಾಮರಕ್ಷ ಸ್ತೋತ್ರ-ಹನುಮಾನ್ ಚಾಲೀಸ್ ಪಠಣ, ಭಜನೆ-ಚೆಂಡೆ ವಾದನ, ಶಂಖ ಘೋಷದೊಂದಿಗೆ ‘ಮನ್ವಂತರ-2020’ ಆನ್‌ಲೈನ್ ರಂಗೋಲಿ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಹಲವಾರು ಆಶ್ವಾಸನೆಗಳನ್ನು ಈಡೇರಿಸುವ ಮೂಲಕ ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಶ್ರೀ ರಾಮ ಮಂದಿರ ನಿರ್ಮಾಣದ ಹಾದಿಯಲ್ಲಿ ನಿಸ್ವಾರ್ಥ ಸೇವೆಗೈದಿರುವ ಎಲ್ಲ ಹಿರಿಯರು, ಹುತಾತ್ಮರು ಹಾಗೂ ಕರಸೇವಕರು ಆದರಣೀಯರು ಎಂದರು.

1992ರಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಕರಸೇವಕರಾಗಿ ಸೇವೆ ಸಲ್ಲಿಸಿರುವ ಉಡುಪಿಯ ಹಿರಿಯ ಕಾರ್ಯಕರ್ತ ಕೊಗ್ಗಣ್ಣ ಸನಿಲ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಆಗಸ್ಟ್ 5,2020 ಎಂಬುದು ಸುಮಾರು ಐದು ಶತಮಾನಗಳ ಕಳಂಕ ತೊಡೆದು ಹಾಕಿದ ಪವಿತ್ರ ದಿನ. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಮೂಲಕ ಅಯೋಧ್ಯೆಯ ಶ್ರೀ ರಾಮ ಮಂದಿರದ ಭೂಮಿ ಪೂಜನ ಒಂದು ನೆನೆಪಿಡುವ ಐತಿಹಾಸಿಕ ಅಪೂರ್ವ ಕ್ಷಣ. ಈ ಮಹತ್ಕಾರ್ಯದಲ್ಲಿ ಕೇಂದ್ರ ಸರಕಾರದ ವಿಶೇಷ ಪಾತ್ರದ ಜೊತೆಗೆ ಹಿರಿಯರಾದ ಲಾಲ್ ಕೃಷ್ಣ ಅಡ್ವಾಣಿ ಹಾಗೂ ವಿಶ್ವ ಹಿಂದೂ ಪರಿಷತ್ ಅಂತರಾಷ್ಟ್ರೀಯ  ಅಧ್ಯಕ್ಷ ಅಶೋಕ್ ಸಿಂಘಾಲ್ ಕೊಡುಗೆ ಅವಿಸ್ಮರಣೀಯ. ಕೊರೋನಾ ಮಾಹಾಮಾರಿಯ ಮುಂಜಾಗ್ರತೆಯಿಂದ  ರಾಮ ಭಕ್ತರು ತಮ್ಮ ಮನೆಯಲ್ಲೇ ದೀಪ ಬೆಳಗಿಸಿ, ರಾಮ ನಾಮ ಸ್ಮರಣೆಯೊಂದಿಗೆ ಸಂಭ್ರಮಾಚರಣೆ ನಡೆಸಿರುವುದು ಉಲ್ಲೇಖನೀಯ ಎಂದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ದ.ಕ. ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ನಗರಾಧ್ಯಕ್ಷೆ ಸರೋಜ ಶೆಟ್ಟಿಗಾರ್, ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಮಹೋಹರ್ ಕಲ್ಮಾಡಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ನಗರ ಬಿಜೆಪಿ ಪ್ರ.ಕಾರ್ಯದರ್ಶಿ ದಿನೇಶ್ ಅಮೀನ್,ಕರಸೇವಕ ಮೋಹನ್ ಉಪಾಧ್ಯ, ಕಾರ್ಯಕ್ರಮ ಸಂಯೋಜಕ ಸಂದೀಪ್ ಭಕ್ತ, ನಗರಸಭಾ ಸದಸ್ಯರು, ಬಿಜೆಪಿ ಜಿಲ್ಲಾ ಮತ್ತು ನಗರ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ನಗರಸಭಾ ಸದಸ್ಯರಾದ ಗಿರೀಶ್ ಎಮ್. ಅಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಮಂಜುನಾಥ್ ಮಣಿಪಾಲ್ ವಂದಿಸಿದರು.

Leave a Reply