ಮಂತ್ರಾಲಯದಲ್ಲಿ ವೈಭವದ ಸುಧಾಮಂಗಳೋತ್ಸವ

ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಶಿಷ್ಯರಿಗೆ ನಡೆಸಿದ ಶ್ರೀಮನ್ ನ್ಯಾಯಸುಧಾ ಪಾಠಪ್ರವಚನದ ಮಂಗಳೋತ್ಸವ ಕಾರ್ಯಕ್ರಮವು ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ವೃಂದಾವನದ ಸನ್ನಿಧಾನದಲ್ಲಿ ಆಗಸ್ಟ್ 25, 26ರಂದು ನಡೆಯಿತು. ತಮ್ಮ ಸನ್ಯಾಸಾಶ್ರಮದ ಹತ್ತನೆಯ ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಗಳವರು ನಡೆಸಿದ ಐದನೇ ಸುಧಾಮಂಗಳ ಮಹೋತ್ಸವ ಇದಾಗಿದ್ದು ದೇಶದ ಮೂಲೆಮೂಲೆಗಳಿಂದ ಆಗಮಿಸಿದ ಸಾವಿರಕ್ಕೂ ಮಿಗಿಲಾದ ವಿದ್ವಾಂಸರು ಈ ವೈಭವದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಮಂಗಳದ ಪೂರ್ವಭಾವಿಯಾಗಿ ವಿದ್ಯಾರ್ಥಿಗಳಿಗೆ ಪಂಡಿತರಿಂದ ಸುಧಾ ಪರೀಕ್ಷೆ ನಡೆದಿದ್ದು ಅತ್ಯಧಿಕ ಅಂಕಗಳೊಂದಿಗೆ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿರುವುದರ ಜೊತೆಗೆ ತುಂಬಿದ ಸಭೆಯಲ್ಲಿ ಶ್ರೀಮನ್ ನ್ಯಾಯಸುಧಾದ ಆಯ್ದ ವಿಷಯಗಳ ಮೇಲೆ ವಿದ್ಯಾರ್ಥಿಗಳು ಅನುವಾದ ಮಾಡಿದ ವೈಖರಿ ಸಭೆಯನ್ನು ಪುಳಕಿತಗೊಳಿಸುತ್ತಿತ್ತು. ಎರಡು ದಿನಗಳ ಕಾಲ ತುಂಬಿದ ವಿದ್ವತ್ ಸಭೆಯಲ್ಲಿ ಶಾಸ್ತ್ರಾರ್ಥ ವಿಚಾರಗೋಷ್ಠಿಗಳು, ಪ್ರವಚನಗಳು, ವಿದ್ಯಾರ್ಥಿಗಳಿಂದ ಸುಧಾನುವಾದಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಂತ್ರಾಲಯ ಶ್ರೀಗಳವರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಶ್ರೀಮನ್ ನ್ಯಾಯಸುಧಾ ಸಮಗ್ರ ಗ್ರಂಥದ ಸಾರವನ್ನು ತಿಳಿತಿಳಿಯಾಗಿ ಸಭೆಯಲ್ಲಿ ಅನುವಾದಗೈದು ಶ್ರೀ ವೇದವ್ಯಾಸರ ಪೂಜೆಯೊಂದಿಗೆ ಸುಧಾಮಂಗಳ ಮಹೋತ್ಸವವನ್ನು ನೆರವೇರಿಸಿದರು. ಸುಧಾಮಂಗಳಗೈದ ವಿದ್ಯಾರ್ಥಿಗಳಿಗೆ ಮಂತ್ರಾಲಯದ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದಲ್ಲಿ ತಾವೇ ಉದ್ಯೋಗವನ್ನು ಕಲ್ಪಿಸುವುದರೊಂದಿಗೆ ಜೀವನ ಭದ್ರತೆಯನ್ನು ಒದಗಿಸುದುದು ಶ್ರೀಗಳವರ ವಿದ್ವತ್ ಪರಿಪೋಷಣೆಗೆ ಎತ್ತಿಹಿಡಿದ ಕನ್ನಡಿಯಾಗಿದೆ. ಶ್ರೀ ಶ್ರೀಪಾದಂಗಳವರ ವಿದ್ಯಾ ಗುರುಗಳು ಹಾಗೂ ಪೂರ್ವಾಶ್ರಮ ಪಿತೃಗಳಾದ ಶ್ರೀ ವಿದ್ವಾನ್ ಸುಜ್ಞಾನೇಂದ್ರಾಚಾರ್ಯರು (ಗಿರಿ ಆಚಾರ್ಯರು) ವಿದ್ಯಾರ್ಥಿಗಳಿಗೆ ಸುಧಾ ಚಿಂತನೆ ನಡೆಸಿದ್ದರು.

ಐದನೇ ಸುಧಾಮಂಗಳದ ಸ್ಮರಣೆಗಾಗಿ ಐದು ರಜತ ದ್ರವ್ಯಗಳ ಜೊತೆಗೆ ಸಂಭಾವನೆ, ಶಾಲು ಮೊದಲಾದವುಗಳಿಂದ ವಿದ್ವಾಂಸರನ್ನ ಸನ್ಮಾನಿಸುದುದು ಒಂದು ಐತಿಹ್ಯವೇ ಎನ್ನಬಹುದು.

Leave a Reply