ಜೀವನಾನುಭವವು ಸೌಂದರ್ಯದ ಸ್ಪರ್ಶದಿಂದ ರಂಗದಲ್ಲಿ ‘ರಸ’ವಾಗುತ್ತದೆ~ ರಂಗ ನಿರ್ದೇಶಕ ಎಸ್.ರಘುನಂದನ

ರಂಗಭೂಮಿಯ ಉದ್ದೇಶ ‘ಜೀವನದ ಸಾರ’ವನ್ನು ವಿವರಿಸುವುದು ಮತ್ತು ಪ್ರದರ್ಶಿಸುವುದು ಮತ್ತು ಆ ಅರ್ಥದಲ್ಲಿ ಅದು ಕೇವಲ ಜೀವನದ
ಅನುಕರಣೆಯಲ್ಲ, ಬದಲಾಗಿ ಅದನ್ನೂ ಮೀರಿದ್ದು ಎಂದು ಬೆಂಗಳೂರಿನ ಹಿರಿಯ ರಂಗ ನಿರ್ದೇಶಕ ಎಸ್.ರಘುನಂದನ ಶನಿವಾರ ಇಲ್ಲಿ
ಹೇಳಿದರು.

ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್)ನ ಆಶ್ರಯದಲ್ಲಿ ‘ನಾಟ್ ಫೇಕ್, ನಾಟ್ ರಿಯಲ್: ರಂಗ
ನಟನೆ ಮತ್ತು ರಂಗಭೂಮಿಯ ಸತ್ಯಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ರಘುನಂದನ ಅವರು, ನಟನೆ
ಖಂಡಿತವಾಗಿಯೂ ನಕಲಿ ಅಲ್ಲ ಆದರೆ ಅದು ವಾಸ್ತವದ ಸರಳ ತಿಳುವಳಿಕೆಯನ್ನು ಮೀರಿದೆ. ಜೀವನಕ್ಕಿಂತ ಹೆಚ್ಚಾಗಿ ಜೀವನದ ಸಾರವನ್ನು
ರೂಪಿಸಲು ಅದು ಪ್ರಯತ್ನಿಸುತ್ತದೆ. ಅದನ್ನೇ ಸೌಂದರ್ಯಶಾಸ್ತ್ರದಲ್ಲಿ ನಾವು ರಸ ಎಂದು ಕರೆದಿದ್ದೇವೆ ಎಂದರು.

ಜೀವನಾನುಭವವು ಸೌಂದರ್ಯದ ಸ್ಪರ್ಶದಿಂದ ರಂಗದಲ್ಲಿ ‘ರಸ’ವಾಗುತ್ತದೆ. ಜೀವನದಲ್ಲಿ ನೋಯುವವರ ಬಗ್ಗೆ ಸಹಾನುಭೂತಿ ಇಲ್ಲದೆ
ಶ್ರೇಷ್ಠ ಕಲೆ ಹುಟ್ಟಲು ಸಾಧ್ಯವಿಲ್ಲ. ಆ ಅರ್ಥದಲ್ಲಿ ರಂಗಭೂಮಿಯು ‘ಜೀವನದ ಅನುಕರಣೆ’ಯನ್ನು ಮೀರಿ ಜೀವನದ ವ್ಯಾಖ್ಯಾನವಾಗುತ್ತದೆ.
ರಂಗಭೂಮಿ, ಅಥವಾ ಯಾವುದೇ ಕಲೆ, ಕರುಣ, ಅದ್ಭುತ, ಶೃಂಗಾರ ಸೇರಿದಂತೆ ವೀಕ್ಷಕರಲ್ಲಿ ರಸಾನುಭವ’ವನ್ನು ಪ್ರಚೋದಿಸುವ
ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದರು.

ಯಾರೊಬ್ಬರ ಅನುಭವವನ್ನು ಸಂಪೂರ್ಣವಾಗಿ ಸ್ವಂತವಾಗಿ ಅನುಭವಿಸಲು ಸಾಧ್ಯವಾಗದು ಎಂಬುದು ನಿಜ. ಆದರೆ ಕಲೆ ನಕಲಿ ಅಲ್ಲ, ಅದು
ಕಲಾತ್ಮಕ ವಾಸ್ತವ. ರಂಗಭೂಮಿಯು ವಿವಿಧ ಕಲಾ ಸಾಧನಗಳನ್ನು ಉಪಯೋಗಿಸಿಕೊಂಡು ‘ಜೀವನದ ಸತ್ಯ’ವನ್ನು ಹೇಳುತ್ತದೆ ಎಂದು ಶ್ರೀ
ರಘುನಂದನ ಹೇಳಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸ್ವಾಗತಿಸಿ, ಪರಿಸರಶಾಸ್ತ್ರ, ಸೌಂದರ್ಯಶಾಸ್ತ್ರ, ಶಾಂತಿ ಅಧ್ಯಯನ ಮತ್ತು ಕಲಾ
ಮಾಧ್ಯಮಗಳು ಜಿಸಿಪಿಎಎಸ್‌ನಲ್ಲಿನ ಅಧ್ಯಯನ ವಿಷಯಗಳ ‘ಸತ್ವ’ ಎಂದು ಹೇಳಿದರು. ಧನ್ಯವಾದ ಸಮರ್ಪಣೆ ಮಾಡಿ ಮಾತನಾಡಿದ
ಪ್ರೊ.ಫಣಿರಾಜ್, ಇತರರು ಮೌನ ವಹಿಸಿದಾಗಲೂ ಕಲಾವಿದರು ಸಮಕಾಲೀನ ಬಿಕ್ಕಟ್ಟುಗಳಿಗೆ ಸ್ಪಂದಿಸಿದ್ದಾರೆ ಎಂದರು. ಇದಕ್ಕೂ ಮೊದಲು
ರಘುನಂದನ ಅವರು GCPAS ವಿದ್ಯಾರ್ಥಿಗಳಿಗೆ ರಂಗಭೂಮಿಯ ಕುರಿತು ಎರಡು ದಿನಗಳ ವಿಶೇಷ ಕಮ್ಮಟವನ್ನು ನಡೆಸಿಕೊಟ್ಟರು.

 
 
 
 
 
 
 
 
 
 
 

Leave a Reply