ದೈತ್ಯಾಕಾರದ ಗೋಳಿ ಮರ ಮತ್ತೆ ಮಾತಾಡಿತು~ ಜೈ ಮಹಾಕಾಲ್.

ನನಗೆ ಪೆರ್ಡೂರು ಮಾರ್ಗವಾಗಿ ಹೆಬ್ರಿಗೆ ಹೋಗುವುದೆಂದರೆ ಬಹಳ ಖುಷಿ ಕಾರಣ ಅಲ್ಲಿರುವ ದೈತ್ಯಾಕಾರದ ಮರಗಳ ಹಿತವಾದ ನೆರಳು, ನಿರ್ಭೀತವಾಗಿ ಸುಳಿದಾಡುವ ಪ್ರಾಣಿ ಪಕ್ಷಿಗಳು, ವೃಕ್ಷರಾಜಿಗಳು. ಒಂದು ರೀತಿ ದಿವ್ಯತೆಯ ಅನುಭವ. ಈಗ ಅದೇ ಹೆಬ್ರಿಗೆ ಹೋಗುವ ದಾರಿಯುದ್ದಕ್ಕೂ ರಾಷ್ಟೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಭರದಲ್ಲಿ ಸಾಗುತ್ತಿದೆ. ಊರಿಡೀ ಧೂಳೆಬ್ಬಿಸುತ್ತಾ ಅಬ್ಬರಿಸುತ್ತಿರುವ ಬಗೆಬಗೆಯ ಯಂತ್ರಗಳ ಕರ್ಣ ಕಠೋರ ಸದ್ದಿನಾಚೆಗೆ ಮರಗಳ ಮರ್ಮರ ದನಿ ಕೇಳಿಸಿತು.

ಆ ದೊಡ್ಡ ಗೋಳಿಯ ಮರ ತನ್ನಷ್ಟಕ್ಕೆ ಗುನುಗುನಿಸುತ್ತಿತ್ತು ಅದಕ್ಕೆ ಈಗ ವಯಸ್ಸು 74 ಭರ್ತಿಯಾಗಿತ್ತು. ಸ್ವತಂತ್ರ ಬಂದ ಹೊಸದರಲ್ಲಿ ಎತ್ತಿನ ಗಾಡಿಗಳು ಓಡಾಡುತ್ತಿದ್ದ ಮಣ್ಣಿನ ಮಾರ್ಗದ ಬದಿಯಲ್ಲಿ ನೆರಳಿಗಿರಲಿ ಎಂದು ಅಂದಿನ ಜನಪ್ರತಿನಿಧಿಯೊಬ್ಬರು ನೆಟ್ಟು ಹೋಗಿದ್ದ ಗಿಡವದು. ವಯಸ್ಸಾದರೂ ಆವತ್ತು ಗಿಡ ನೆಟ್ಟ ಆ ಮಹಾನುಭಾವರು ಮಾಡಿದ್ದ ವನಮಹೋತ್ಸವದ ಭಾಷಣ ಮರಕ್ಕೆ ಇನ್ನೂ ಅಕ್ಷರಕ್ಷರ ನೆನಪಿದೆ. ವಸಾಹತು ಶಾಯಿಗಳು ನಮ್ಮನ್ನು ಲೂಟಿ ಮಾಡಿದರು.

ನಮ್ಮ ಕಾಡುಗಳನ್ನು ದೋಚಿದರು. ಮರಗಳನ್ನು ಕಡಿದು ಸಾಗಿಸಿದರು. ಮನುಷ್ಯನ ಜೀವನ ಸೌಕರ್ಯಗಳು ಸುಧಾರಿಸಿದರೆ ಅದಷ್ಟೇ ಅಭಿವೃದ್ಧಿಯಲ್ಲ. ಪರ್ಯಾವರಣದ ಬಗ್ಗೆ ಸೂಕ್ಷ್ಮತೆಯಿಂದ ಇತರ ಜೀವಿಗಳಿಗೂ ನಮ್ಮಷ್ಟೇ ಹಕ್ಕಿದೆ ಎನ್ನುವುದನ್ನು ಅರಿತುಕೊಳ್ಳಬೇಕು ಪರಿಸರ ಹಸಿರಾಗಿದ್ದರೆ ಮಾತ್ರ ನಮ್ಮ ಬದುಕು ಹಸನಾಗಬಹುದು. ನಾವು ನೆಟ್ಟ ಈ ಗಿಡ ನಮ್ಮ ಮಕ್ಕಳು ಮೊಮ್ಮಕ್ಕಳ ಕಾಲಕ್ಕೂ ಜನರಿಗೆ ಉಸಿರು ನೆರಳು ನೀಡುತ್ತದೆ. ಹೊಸ ಗಿಡಗಳನ್ನು ನೆಡುವುದಕ್ಕಿಂತ ಇರುವ ಮರಗಳನ್ನು ಉಳಿಸುವುದೇ ಲೇಸು ಎಂದಿದ್ದರು. ಅವರ ಮಾತನ್ನು ಎಲೆಯಗಲಿಸಿ ಕೇಳಿದ್ದ ಆ ಗಿಡ ಹುರಿ ಹುಮ್ಮಸ್ಸಿನಿಂದ ಹಬ್ಬಿ ಬೆಳೆದು ಊರಿಗೆಲ್ಲಾ ನೆರಳು ನೀಡಿತು.

ಬೇಸಗೆ ಬರುತ್ತಿದ್ದಂತೆ ಸಾವಿರಾರು ಮೈಲಿ ದೂರದಿಂದ ಬಗೆಬಣ್ಣದ ಹಕ್ಕಿಗಳು ಮಣ್ಣಪಳ್ಳದಲ್ಲಿ ನೀರು ಕುಡಿದು ಇದೇ ಮರದ ಮೇಲೆ ಬಿಡಾರ ಹೂಡುತ್ತಿದ್ದವು. ಮೊಟ್ಟೆ ಇಟ್ಟು ಮರಿ ಮಾಡಿ ಬಳಿಕ ಮಕ್ಕಳ ಜೊತೆಗೆ ಊರಿಗೆ ವಾಪಾಸಾಗುತ್ತಿದ್ದವು. ಜಟಕಾ ಗಾಡಿಗಳು, ಎತ್ತಿನ ಗಾಡಿಗಳು ಬಂದು ನನ್ನ ಬುಡದಲ್ಲೇ ಒಲೆ ಹಾಕಿ ಎತ್ತು ಕುದುರೆಗಳಿಗೆ ಹುರುಳಿ ಬೇಯಿಸಿ , ನೆಮ್ಮದಿಯ ಒಂದು ನಿದ್ರೆ ಮುಗಿಸಿ ಹೊರಡು ತ್ತಿದ್ದವು. ತೀರಾ ಇತ್ತೀಚಿನವರೆಗೂ ಹಿರಿಯಡ್ಕ ದಾಟಿ ಬಂದವರು ನನ್ನ ಬುಡದಲ್ಲಿ ಪ್ರವಾಸಿ ವಾಹನ ಗಳನ್ನು ನಿಲ್ಲಿಸಿ ಅರೆಗಳಿಗೆ ವಿಶ್ರಾಂತಿ ಪಡೆದು ಹೋಗುತ್ತಿದ್ದರು. ಸಣ್ಣಪುಟ್ಟ ವ್ಯಾಪಾರಿಗಳಿಗೂ ನನ್ನ ನೆರಳೇ ಒಂದು ಜಂಕ್ಷನ್ ಆಗಿತ್ತು.

ಈಗ ರಸ್ತೆ ಅಗಲ ಮಾಡುವವರು ಈ ಮರದ ಸುತ್ತಲೇ ಸಂಶಯಾಸ್ಪದವಾಗಿ ಸುತ್ತು ಬರುವುದನ್ನು ನೋಡಿ ಮುದಿ ಮರ ಯಾಕೋ ಗಲಿಬಿಲಿಗೊಂಡಿದೆ. ಹೆದರಿ ಏನೇನೋ ಬಡಬಡಿಸುತ್ತಿತ್ತು . ಅದರ ದನಿ ಪಕ್ಕದ ಮರಗಳಿಗೂ ಕೇಳುತ್ತಿತ್ತು. ನೆಟ್ಟವರ ನಿರೀಕ್ಷೆಯನ್ನು ನಾನು ಯಾವತ್ತು ಹುಸಿಗೊಳಿಸಿದ್ದೇನೆ ? ಇಷ್ಟಿದ್ದರೂ ನನ್ನ ಬುಡಕ್ಕೆ ಕೊಡಲಿ ಇಡಬೇಕು ಎಂಬ ಹಠ ಇವರಿಗೆ ಯಾಕೆ ? ಯಾಕೆ..?
ಆ ಮುದುಕ ಮರ ಹುಚ್ಚನಂತೆ ಒಂದೇ ಮಾತನಾಡುತ್ತಿರಬೇಕಾದರೆ ಅಕ್ಕ ಪಕ್ಕದ ಐದಾರು ಮರಗಳು ಮೆಲ್ಲ ಮಾತಿಗಿಳಿದವು.

ಓಯ್ ಹೆದರಬೇಡಿ ಮಾರ್ರೆ ಎಂತ ಆಗುದಿಲ್ಲ. ನಿಮ್ಮ ಸುತ್ತ ಪೊದೆ ಎಲ್ಲಾ ತೆಗೆದು ಸಮತಟ್ಟು ಮಾಡಿದ್ದು ಮಾತ್ರ. ನಿಮಗೆ ಜೀವಕ್ಕೆ ಎಂತ ತೊಂದ್ರೆ ಮಾಡ್ಲಿಕ್ಕಿಲ್ಲ. ರಸ್ತೆ ಕೆಲ್ಸ ಅಂದ್ರೆ ಹಾಗೆ ಅಲ್ವಾ… ಅಕ್ಕ ಪಕ್ಕ ಜಾಗ ಸ್ವಚ್ಛ ಮಾಡಿ ಹೋಗ್ತಾರೆ. ನಮ್ಮ ಸುತ್ತ ಮುತ್ತ ಕೂಡ ಮಾಡಿದ್ದಾರಲ್ವ? ನೀವೇ ಹೇಳ್ತೀರಿ ಮರ‍್ರೆ ನಮ್ಮನ್ನೆಲ್ಲಾ ರಸ್ತೆ ಪಕ್ಕದಲ್ಲಿ ನೆಟ್ಟದ್ದು ಅಂತ. ರಸ್ತೆ ಪಕ್ಕದಲ್ಲಿ ಇದ್ದವರನ್ನು ಸುಮ್ಮನೆ ಬಂದು ಕಡಿತಾರಾ ? ಎಂತದ್ದೂ ಆಗುದಿಲ್ಲ ಧೈರ್ಯದಲ್ಲಿ ಇರಿ.

ಗೋಳಿ ಮರ ಮತ್ತೆ ಮಾತಾಡಿತು. ನೆಟ್ಟದ್ದು ಪಕ್ಕದಲ್ಲಿ ಮಾರಾಯ ಆದರೆ ಈಗ ನಾವು ನಡುವೆ ಬಂದು ನಿಂತಿದ್ದೇವೆ ಒಮ್ಮೆ ಸುತ್ತಲೂ ನೋಡು ನಮ್ಮ ಎರಡೂ ಬದಿಗೆ ರಸ್ತೆ ಬಂದಿದೆ. ಇದು ಪೊದೆ ತೆಗೆದು ಜಾಗ ಸ್ವಚ್ಛ ಮಾಡಿದ್ದಲ್ಲ. ಅಷ್ಟೆಲ್ಲಾ ಒಳ್ಳೆ ಬುದ್ಧಿ ಇವುಗಳಿಗೆಲ್ಲಿ ? ನಾನು ಈ ಕದೀಮರನ್ನು 70 ವರ್ಷದಿಂದ ನೋಡುತ್ತಿದ್ದೇನೆ.. ಹಿಂದೆಲ್ಲಾ ಮರ ಕಡಿಯೋಕೆ ಕಾನೂನು ಈಗಿನಷ್ಟು ಕಠಿಣ ಇರಲಿಲ್ಲ. ಯಾರೋ ಒಬ್ಬ ಮರದ ವ್ಯಾಪಾರಿ ನಮ್ಮನ್ನೆಲ್ಲ ಯಾವ ಆದೇಶವೂ ಇಲ್ಲದೆ ಅನಾಮತ್ತು ಕಡಿದು ಡಿಪ್ಪೋಗೆ ಹಾಕುತ್ತಿದ್ದ.

ಮರದ ದುಡ್ಡು ಅವನೊಬ್ಬನೇ ಇಟ್ಟುಕೊಳ್ಳುತ್ತಿದ್ದ. ಸ್ವಲ್ಪ ಪಾಲು ಲೋಕಲ್ ಪುಡಾರಿಗಳಿಗೆ ಹೋಗ್ತಾ ಇತ್ತು. ಮರ ಕಡಿದುರುಳಿಸುವುದು ಆಗ ಹೆಚ್ಚು ತ್ರಾಸದ ಕೆಲಸವಾಗಿರಲಿಲ್ಲ. ಮರ ತೆರವಾದ ಮೇಲೆ ರಸ್ತೆ ಕೆಲಸ ಶುರುವಾಗುತ್ತಿತ್ತು. ಈಗ ಹಾಗಲ್ಲ ಮರದ ಲಾಭದಲ್ಲಿ ಪಾಲು ಪಡೆಯಲು ಇಲ್ಲಿಂದ ದಿಲ್ಲಿವರೆಗೆ ಜನರಿದ್ದಾರೆ. ಅದಕ್ಕಾಗಿ ಕಾನೂನು ಕೂಡ ಬಿಗಿ ಮಾಡಿದ್ದಾರೆ.

ಪರಿಸರ ಇಲಾಖೆ ಅನುಮತಿ ಕೊಡಬೇಕು, ಸಾರ್ವಜನಿಕ ದೂರು ಸ್ವೀಕೃತಿ ಸಭೆ, ಆಮೇಲೆ ಗುತ್ತಿಗೆ ಹಿಡೀಬೇಕು. ಜನ್ರ ಕಣ್ಣಿಗೆ ಮಣ್ಣು ಹಾಕಲು ಏನೇನೋ ಬಂಡಲ್‌ಬಾಜಿಗಳು. ಜಾತಿ ಲೆಕ್ಕಾಚಾರ ಮಾಡಿ ನಮ್ಮ ಹೆಣಕ್ಕೆ ಬೆಲೆ ಕಟ್ಟುವ ಕೆಲಸ ಇನ್ನೂ ಮುಗಿದಿಲ್ಲ ಇರಬೇಕು. ಅದು ಮುಗಿಯುವವರೆಗೆ ಈ ರಸ್ತೆ ಗುತ್ತಿಗೆದಾರ ಖಾಲಿ ಕೂರುವುದು ಯಾಕೆ ಅಂತ ಕೆಲಸ ಶುರು ಹಚ್ಚಿಕೊಂಡಿದ್ದಾನೆ ಅಷ್ಟೇ.

ಪಕ್ಕದ ಹಲಸಿನ ಮರ ಹೌಹಾರಿತು. ಅಣ್ಣಾ ನೀವು ಹೇಳ್ತಾ ಇರುವುದು ಸತ್ಯ ಇದೆ. ಮೊನ್ನೆ ಹೆಬ್ರಿ ಕಡೆಯಿಂದ ಬಂದ ಒಂದು ಬೆಳ್ಳಕ್ಕಿಗಳ ಹಿಂಡು ನನ್ನ ಬಳಿ ಕೂತು ಇದೇ ಸಂಗತಿ ಮಾತಾಡ್ತಾ ಇದ್ದವು ನೋಡಿ. ಶಿವಪುರ ಚಾರ ಹೆಬ್ರಿ ಕಡೆ ಎಲ್ಲಾ ರಸ್ತೆ ಬದಿ ಇದ್ದ ಮರಗಳ ಸುತ್ತ ರಸ್ತೆ ಸಮತಟ್ಟು ಮಾಡಿ ಮರಗಳನ್ನು ಕಡಿಯಲು ತಯಾರಿ ಮಾಡಿದ್ದಾರಂತೆ.

ಈಗ ನಮ್ಮ ಸುತ್ತದ ಜಾಗ ಕೂಡ ರಸ್ತೆಗೆ ಹೋದರೆ ನಮಗೂ ಅದೇ ಗತಿ ಅಲ್ವಾ ? ಅಲ್ಲ ಮರ‍್ರೆ ಈಗ ನಮಗೆ ಮೊನ್ನೆ ಫಾರೆಸ್ಟ್ ಅಧಿಕಾರಿಗಳು ಬಂದು ಸೀಲು ಗುದ್ದಿ ಒಬ್ಬೊಬ್ಬರಿಗೆ ಒಂದೊಂದು ನಂಬರ್ ಎಲ್ಲ ಕೊಟ್ಟು ಹೋಗಿದ್ದಾರೆ ಅಲ್ವಾ ಆ ಸೀಲು ಹೊಡೆದ ನನ್ನ ಗಾಯ ಇನ್ನೂ ಕೂಡ ಒಣಗಿಲ್ಲ ಮರ‍್ರೆ ಅಷ್ಟರಲ್ಲೇ ಕಡಿಯಲು ಬಂದಿದ್ದಾರೆ ಅಂದ್ರೆ ಇದು ಎಂತ ಕಾನೂನು ಮರ‍್ರೆ ?

ಮುದಿ ಮರ ಉತ್ತರಿಸಿತು. ನೋಡಪ್ಪಾ ನಮ್ಮದು ಅಬ್ಬಬ್ಬಾ ಅಂದ್ರೆ ಇನ್ನು ಒಂದು ತಿಂಗಳ ಬದುಕು ಅಷ್ಟೇ ನಾವೆಲ್ಲಾ ಸಾಯೋದು ಶತಸಿದ್ಧ. ಈ ಪಾಪಿ ಮನುಷ್ಯ ಮೊದಲು ನಮ್ಮ ಸುತ್ತಮುತ್ತಲಿರುವ ಪ್ರದೇಶವನ್ನು ಸಮತಟ್ಟು ಗೊಳಿಸುತ್ತಾನೆ ಸಣ್ಣಪುಟ್ಟ ಬಳ್ಳಿ ಗಿಡಗಳನ್ನು ಕೈಯಲ್ಲೇ ಕಡಿದು ಹಾಕುತ್ತಾನೆ . ನಮ್ಮನ್ನು ಈ ಮಸಣದಂತ ಬಟ್ಟ ಬಯಲಿನಲ್ಲಿ ಏಕಾಂಗಿಯಾಗಿ ನಿಲ್ಲಿಸುತ್ತಾನೆ .

ನಿನ್ನೆ ಮೊನ್ನೆ ಯವರೆಗೆ ನಮ್ಮ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದ ಜನ ಈ ಮರದಿಂದಾಗಿಯೇ ರಸ್ತೆ ಇಕ್ಕಟ್ಟಾಗಿದೆ ಎಂದು ಹಿಡಿಶಾಪ ಹಾಕುವಂತೆ ಮಾಡಿ, ನಮ್ಮ ಬಗ್ಗೆ 10 ಪೈಸೆಯ ಅನುಕಂಪವೂ ಹುಟ್ಟ ದಂತೆ ಮಾಡಿಬಿಡುತ್ತಾನೆ. ಇದೊಂತರ ಗಲ್ಲು ಶಿಕ್ಷೆ ಘೋಷಣೆಯಾದ ಕೈದಿಯನ್ನು ಸಿಂಗಲ್ ಸೆಲ್ಲಿನಲ್ಲಿ ಕೂಡಿ ಹಾಕುತ್ತಾರಲ್ವಾ? ಅದೇ ರೀತಿ.

ಗೋಳಿ ಮರದ ಮಾತು ಕೇಳಿ ಸುತ್ತಮುತ್ತಲಿನ ಎಲ್ಲಾ ಮರಗಳು ಬೆಚ್ಚಿಬಿದ್ದವು. ಪರಿಸ್ಥಿತಿಯ ಗಂಭೀರತೆ ಅವರಿಗೆ ನಿಧಾನವಾಗಿ ಅರಿವಾಗತೊಡಗಿತು. ಓಯಿ ಮಲ್ಪೆಯಿಂದ ಮೊಣಕಾಲ್ಮೂರುವರೆಗೆ ನಮ್ಮವರ ಸಾವಿರಾರು ಹೆಣ ಬೀಳುವುದು ಖಚಿತ ಹಾಗಾದ್ರೆ. ಇದೆಂತ ವಿಚಿತ್ರ ಮರ‍್ರೆ ನಮಗೆ ಬದುಕುವ ಹಕ್ಕೇ ಇಲ್ವಾ ? ಮನುಷ್ಯ ಮಾಡಿಕೊಂಡ ಈ ವ್ಯವಸ್ಥೆಯಲ್ಲಿ ನಮ್ಮ ಪರವಾಗಿ ಮಾತಾಡುವವರು ಒಬ್ಬರೂ ಇಲ್ವಾ ?
ತಮ್ಮಾ ನಿನಗೆ ಓಟು ಉಂಟಾ ? ಅದಾದರೂ ಇದ್ದಿದ್ದರೆ ವಿಪಕ್ಷದವರಾದರೂ ಮಾತಾಡುತ್ತಿದ್ದರು. ಅದೂ ಅಲ್ಲದೆ ನಾವು ದುರಾದೃಷ್ಟಕ್ಕೆ ಈ ಬುದ್ಧಿವಂತರ ಜಿಲ್ಲೆಯಲ್ಲಿ ಹುಟ್ಟಿದ್ದೇವೆ.

ಇಲ್ಲಿ ಲಾಭವಿಲ್ಲದೆ ಲಾಬಿ ಇಲ್ಲದೆ ಯಾವ ಹೋರಾಟ ಕೂಡ ಪುಕ್ಕಟೆಗೆ ನಡೆಯುವುದಿಲ್ಲ. ಮರಗಿಡ ಕಟ್ಟಿಕೊಂಡು ಇಲ್ಲಿನ ಪ್ರಜ್ಞಾವಂತರಿಗೆ ಏನೂ ಆಗಬೇಕಾದದ್ದಿಲ್ಲ. ದೊಡ್ಡ ಮರಗಳಿದ್ದರೆ ಒಣ ಎಲೆ ಕಸ ಕಡ್ಡಿ ಪ್ರಾಣಿ ಪಕ್ಷಿಗಳ ಕಾಟ. ನಮ್ಮನ್ನು ಮೆಂಟೈನ್ ಮಾಡೋದು ಕಷ್ಟ. ಅದ್ಕೆ ಪರಿಸರವಾದಿಗಳು ಮನೆ ಜಗಲಿಯಲ್ಲೇ ಬೋನ್ಸಾಯಿ ಟ್ರೀ ಬಣ್ಣದ ಕ್ರೋಟಾನ್ ಗಿಡ ಕಂಪೌಂಡ್ ಮೇಲೆ ಬಗೆಬಗೆಯ ಕಳ್ಳಿಗಿಡ ನೆಟ್ಟು ಅದರ ಗಾಳಿ ಉಸಿರಾಡಿಕೊಂಡಿರ‍್ತಾರೆ. ಗೋಳಿಮರದ ಧ್ವನಿಯಲ್ಲಿ ವಿಷಾದವಿತ್ತು.

ಪುಣ್ಯಕ್ಕೆ ಆ ರೆಂಜೆಯ ಮರ ಒಂದು ಉಳಿಯಬಹುದು ಯಾಕೆಂದ್ರೆ ಅದರ ಬುಡದಲ್ಲಿ ಒಂದು ನಾಗ ಉಂಟಂತೆ. ಅದಕ್ಕೆ ಒಂದು ಬದುಕುವ ಯೋಗ ಇದ್ದ ಹಾಗೆ ಕಾಣುತ್ತದೆ. ಎಲ್ಲಾ ಮರಗಳು ಆ ರೆಂಜೆಯ ಮರದ ಹಾಗೆ ನಮ್ಮ ಬುಡದಲ್ಲೂ ಒಂದು ನಾಗ ನೆಲೆಸ ಬಾರದಿತ್ತೇ ಎಂದು ಮರುಗಿದವು. ರೆಂಜೆಯ ಮರ ರಸ್ತೆ ಮಟ್ಟಕ್ಕಿಂತ ತುಂಬಾ ಎತ್ತರ ಪ್ರದೇಶದಲ್ಲಿತ್ತು. ಅಲ್ಲೆಲ್ಲಾ ಜಾಗವನ್ನು ರಸ್ತೆಮಟ್ಟಕ್ಕೆ ಅಗೆದು ಸಮತಟ್ಟು ಮಾಡಬೇಕಿತ್ತು.

ಮರುದಿನ ರೆಂಜೆಯ ಮರದ ಬಳಿ ಒಂದಷ್ಟು ಜನರು ಬಂದು ಸೇರಿದ್ದರು. ಅವರಲ್ಲಿ ಒಬ್ಬಾತ ಏನೋ ಪೂಜೆ ಮಾಡಿ ತೀರ್ಥ ಮತ್ತು ಸ್ವಲ್ಪ ಅರಶಿಣವನ್ನು ಚಿಮುಕಿಸಿ ಜೆಸಿಬಿಯವನಿಗೆ ಕೆಲಸ ಮಾಡುವಂತೆ ಸೂಚನೆ ಕೊಟ್ಟ. ಜೇಸಿಬಿಯವನು 10 ಅಡಿ ಎತ್ತರ ಪ್ರದೇಶದಲ್ಲಿರುವ ರೆಂಜೆಯ ಮರದ ಮೂರು ಅಡಿ ಸುತ್ತಳತೆಯನ್ನು ಬಿಟ್ಟು ಸುತ್ತಲೂ ಅಗೆಯಲು ಶುರು ಮಾಡಿ ಮರವನ್ನು ಅದರ ಬುಡದಲ್ಲಿರುವ ಹುತ್ತವನ್ನು 10 ಅಡಿ ಎತ್ತರದ ದಿಣ್ಣೆಯ ಮೇಲೆ ಇರುವಂತೆ ಬಿಟ್ಟು ಬಿಟ್ಟ!

ಇತರ ಮರಗಳು ಈ ಘಟನೆಯನ್ನು ಎವೆಯಿಕ್ಕದೇ ನೊಡುತ್ತಿದ್ದವು. ಜೆಸಿಬಿಯ ಕಂಪನಕ್ಕೆ ಅದುರಿ ಬಿಲ ಸೇರಿದ್ದ ನಾಗ ಮೆಲ್ಲನೇ ಹೊರ ಬಂದು ಇಣುಕಿದ. ನೋಡುವುದೇನು ? ಕೆಳಗೆ 90 ಡಿಗ್ರಿ ಕಡಿದಾದ 10 ಅಡಿ ಆಳದ ಪ್ರಪಾತ. ಎಲ್ಲಿ ನೋಡಿದರೂ ಹಸಿ ಹಸಿ ಕೆಂಪು ಮಣ್ಣು ? ಇಳಿದು ಹೋಗುವುದಾದರೂ ಹೇಗೆ ? ನಾಗನಿಗೆ ನಾಲ್ಕೂ ಮೂಲೆಯಲ್ಲಿ ದಿಗ್ಬಂಧನ ಬಿದ್ದಿದೆ. ಎಂಟಾಣೆ ಅರಶಿನ ಪುಡಿ ಹಾಕಿ ನನ್ನ ಮನೆಯನ್ನು ಒಡೆಯಲು ಎನ್‌ಒಸಿ ಕೊಟ್ಟ ಆ ಮನೆಮುರುಕ ಎಲ್ಲಿರಬಹುದು ಎಂದು ನಾಗ ಮನದಲ್ಲೇ ಯೋಚಿಸ ತೊಡಗಿದ.

ಆ ಆಸಾಮಿ ಮನೆಯಲ್ಲಿ ಗುತ್ತಿಗೆದಾರರಿಗೆ ಶಾಸ್ತ್ರದಲ್ಲಿ ಮರ ಕಡಿದರೆ ಪರಿಹಾರ ಏನು ? ನಾಗನನ್ನು ಕೊಂದರೆ , ಮರಿ ಮೊಟ್ಟೆ ನಾಶವಾದರೆ ಪರಿಹಾರ ಏನು ಎಂಬ ಬಗ್ಗೆ ಮೆನು ಕಾರ್ಡು ಹರವಿಕೊಂಡು ಕೂತಿದ್ದ. ನೋಡಿ ಶೆಟ್ಟರೇ ಈ ಮರಗಳಲ್ಲಿ ಕೆಲವು ಕಣ್ಣಿಗೆ ಕಾಣದ ಶಕ್ತಿಗಳು ಇರುತ್ತವೆ ಅದಕ್ಕೆ ವೃಕ್ಷಛೇದನ ಶಾಂತಿ ಮಾಡಬೇಕು ಎಂದ ಆ ಮಹಾನುಭಾವ.

ನಾಗನ ಶಾಪ ಪರಿಹಾರಕ್ಕೆ ಒಂದು ಬೆಳ್ಳಿಯ ನಾಗನಿಗೆ 48 ದಿನ ಅಭಿಷೇಕ ಮಾಡಿ ತಂದು ಕೊಡಿ ಪೂಜೆ ಅಭಿಷೇಕ ಎಲ್ಲಾ ನಿಮಗೆ ಮಾಡಲು ಕಷ್ಟ ಆದ್ರ ನನಗೆ ಕೊಡಿ ನಾನೇ ೪೮ ದಿನ ಪೂಜೆ ಮಾಡಿಸುತ್ತೇನೆ ೫೦೦೦ ಎಕ್ಸ್ಟ್ರಾ ಆಗುತ್ತೆ .. ಮತ್ತೆ ಸುಬ್ರಹ್ಮಣ್ಯಕ್ಕೆ ಹೋಗಿ ಅಲ್ಲಿ…. ಪ್ರಾಯಶ್ಚಿತ್ತದ ಪಟ್ಟಿ ಬಹಳ ಉದ್ದಕ್ಕೆ ಹೋಗುತ್ತಿತ್ತು.

ಮನೆ ಕಳೆದುಕೊಂಡು ಸಂತ್ರಸ್ತನಾದ ನಾಗ ಬಿಸಿಲ ಝಳ ತಾಳಲಾಗದೆ ರೆಂಜೆಯ ಮರ ಹತ್ತಿತು. ಧೂಳಿಗೆ ಕಣ್ಣು ಬಿಡಲಾಗದೆ ಈ ತ್ರಿಶಂಕು ಸ್ಥಿತಿಯಿಂದ ಮುಕ್ತಿ ಹೇಗೆ ಎಂದು ಚಿಂತಾಕ್ರಾಂತನಾಗಿ ಯೋಚಿಸುತ್ತಾ ಕುಳಿತಿತು. ಬ್ಯಾಣದ ಬಳಿ ಬರುತ್ತಿದ್ದಂತೆ ಅಲ್ಲೊಂದು ಕಾಸರಕನ ಮರವಿತ್ತು. ಅದರ ಗೆಲ್ಲುಗಳನ್ನೆಲ್ಲಾ ಕಡಿದು ಹಾಕಿ ಹೋಗಿದ್ದರು. ಅದು ವಿಕಾರ ಸ್ವರದಲ್ಲಿ ಅರಚುತ್ತಿತ್ತು. ಆದರೆ ಅದರ ಕೂಗು ಅಲ್ಲಿದ್ದ ಜಿಸಿಬಿಯ ಸದ್ದಿನಲ್ಲಿ ಯಾರ ಕಿವಿಗೂ ಬೀಳುತ್ತಿರಲಿಲ್ಲ. ಸ್ವಲ್ಪ ಬೈಕು ನಿಲ್ಲಿಸಿದೆ.

ಲೇಯ್ ಪಾಪಿಗಳ .. ಥೂ ನಿಮ್ಮ ಜನ್ಮಕ್ಕೆ ನನಗೆ ನಂಜು..ನಂಜು ಹೇಳ್ತೀರಾ ? ನಿಮ್ಮಷ್ಟು ನಂಜು ಯಾವ ಪ್ರಾಣಿಗಳಿಗೂ ಇಲ್ಲ. ಎಂತ ನಿಮ್ಮ ಬೊಜ್ಜದ ಅಭಿವೃದ್ಧಿಯಾ ? ಎಲ್ಲಾ ಸುಡುಗಾಡು ಮಾಡಿ ಕಾಂಕ್ರೀಟು ಗುಡ್ಡೆ ಹಾಕಿ ನೀವೂ ಮಾತ್ರ ಬದುಕಿದ್ರೆ ಆಯ್ತಾ ? ಹಾಳಾಗಿ ಹೋಗ್ತೀರಾ ? ನಮ್ಮ ಹೆಣದ ಮೇಲೆ ನೀವು ಎಷ್ಟು ದಿನ ಮೆರಿತೀರಿ ನೋಡ್ಬೇಕು. ಕಚಡಾಗಳಾ … ಆ ಕಾಸರಕ ಜನ ಸ್ವಲ್ಪ ಉಗ್ರ ಅಂತ ಗೊತ್ತಾದ ಕೂಡಲೇ ನಾನು ಬೈಕು ಚಾಲು ಮಾಡಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದೆ.

ಕೈಕಾಲು ಕಡಿದುಕೊಂಡು ಕಂಬದಂತಾಗಿದ್ದ ಆ ಕಾಸರಕನ ಬುಡಕ್ಕೆ ಕಾಮಗಾರಿಗೆ ಶುಭ ಕೋರಿದ್ದ ಬ್ಯಾನರ್ ಒಂದನ್ನು ಎಳೆದು ಕಟ್ಟಲಾಗಿತ್ತು.
ಜೈ ಮಹಾಕಾಲ್.

 
 
 
 
 
 
 
 
 

Leave a Reply