ಕುಂದಾಪುರ ವಕೀಲರ ಸಂಘ ಪದಗ್ರಹಣ.

ಕೋಟ: ವೈದ್ಯರು ರೋಗಿಯೊಬ್ಬನ ಜೀವ ಉಳಿಸಿದರೆ, ನ್ಯಾಯವಾದಿ ವ್ಯಕ್ತಿಯೊಬ್ಬನ ಹಕ್ಕನ್ನು ಉಳಿಸುವವ. ಒಬ್ಬ ವ್ಯಕ್ತಿಯ ಹಕ್ಕು ರಕ್ಷಿಸುವುದೆಂದರೆ ಇಡೀ ಒಂದು ಕುಟುಂಬವನ್ನು ರಕ್ಷಣೆ ಮಾಡಿದಂತೆ. ಆಗ ಆ ವ್ಯಕ್ತಿಯ ಕುಟುಂಬ ತಲೆ ತಲಾಂತರದವರೆಗೂ ವಕೀಲರನ್ನು ನೆನಪಿಸಿಕೊಳ್ಳುತ್ತಿರುತ್ತದೆ ಹಾಗೂ ವಕೀಲಿಕೆ ನಮ್ಮ ವೃತ್ತಿ ಆದರೆ ಮಾನವೀಯತೆಯು ಪೃವೃತ್ತಿ ಎಂಬAತೆ ವಕೀಲರು ಕೆಲಸ ಮಾಡಬೇಕಾಗಿದೆ. ಕೆಲವೊಮ್ಮೆ ಆಹಾರ, ಹಣವಿಲ್ಲದೆ ಬದುಕಬಹುದು, ಆದರೆ ಕಕ್ಷಿಗಾರನ ಹಕ್ಕನ್ನೇ ಯಾರಾದರೂ ಕಿತ್ತುಕೊಂಡರೆ ಆತ ಬದುಕುವುದು ಕಷ್ಟ ಅದನ್ನು ಕಾಪಾಡುವ ಕೆಲಸ ವಕೀಲರದ್ದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಆರ್. ನಟರಾಜ್ ಹೇಳಿದರು.
ಅವರು ಕುಂದಾಪುರದ ಗಿಳಿಯಾರು ಕುಶಲ್ ಶೆಟ್ಟಿ ರೋಟರಿ ಸಭಾಭವನದಲ್ಲಿ ಕುಂದಾಪುರ ವಕೀಲರ ಸಂಘದ ೨೦೨೨-೨೪ ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಗರಿಕರ ಹಕ್ಕು ರಕ್ಷಣೆ ಮಹಾನ್ ಕೆಲಸ ಅನ್ನುವುದನ್ನು ಮರೆಯಕೂಡದು, ಇಡೀ ದೇಶದಲ್ಲಿ ಮದ್ರಾಸ್ ಹೈಕೋರ್ಟ್ ಅರ್ಜಿ ವಿಲೇವಾರಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಹೊಸ ಮತ್ತು ಹಳೆ ಕೇಸುಗಳು ಪ್ರತಿ ವರ್ಷ ಶೀಘ್ರದಲ್ಲಿ ಇತ್ಯರ್ಥವಾಗುತ್ತಿವೆ. ಇದೇ ಮಾದರಿಯಲ್ಲಿ ಕುಂದಾಪುರ ವಕೀಲರ ಸಂಘ ಕೆಲಸ ನಿರ್ವಹಿಸಿ ಇಡೀ ದೇಶದಲ್ಲಿ ನಂಬರ್ ಒನ್ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿ ಎಂದು ಅವರು ಆಶಿಸಿದರಲ್ಲದೆ ಕಿರಿಯ ವಕೀಲರು ಹಿರಿಯ ವಕೀಲರ ಮಾರ್ಗದರ್ಶನ ಪಡೆಯಬೇಕು, ಹಿಂದೆಲ್ಲ ವಕೀಲರು ತಮ್ಮ ಹಿರಿಯ ವಕೀಲರ ಮಾರ್ಗದರ್ಶನ ಪಡೆದು ಮನ್ನಡೆಯುತ್ತಿದ್ದರು. ಹಾಗೆಯೇ ಮುನ್ನಡೆದಲ್ಲಿ ಭವಿಷ್ಯದಲ್ಲಿ ಉತ್ತಮ ವಕೀಲರಾಗಿ ಕೆಲಸ ಮಾಡಲು ಸಾಧ್ಯ ಎಂದರು.
ವಕೀಲ ವೃತ್ತಿಯಲ್ಲಿ ಅಲ್ಪಾವಧಿಯಲ್ಲಿ, ಅಡ್ಡ ದಾರಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ, ಶಿಸ್ತು, ಕಠಿಣ ಪರಿಶ್ರಮ ಹಾಗೂ ನಿರಂತರ ಶ್ರದ್ಧೆ ಯಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ . ಇಂತಹ ಕಾರ್ಯಕ್ರಮದಲ್ಲಿ ಕಿರಿಯ ವಕೀಲರ ಪಾಲ್ಗೊಳ್ಳುವಿಕೆ ಹೆಚ್ಚಬೇಕು ಎಂದು ಮುಖ್ಯ ಅತಿಥಿಯಾಗಿದ್ದ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಹೇಳಿದರು
ಬೈಂದೂರಿನಲ್ಲಿ ವಾರದ ೨ ದಿನ ಕೋರ್ಟ್ ಕಲಾಪ ನಡೆಯುತ್ತಿದ್ದು, ಶೀಘ್ರವೇ ಪೂರ್ಣಕಾಲಿಕ ಕೋರ್ಟ್ ಆರಂಭವಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಹೇಳಿದರು.
ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ರವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಹಾಗೂ ಉಪಾಧ್ಯಕ್ಷೆ ಬೀನಾ ಜೊಸೆಫ್, ಜತೆ ಕಾರ್ಯದರ್ಶಿ ರಿತೇಶ್ ಬಿ ಮತ್ತು ಕೋಶಾಧಿಕಾರಿ ಹಾಲಾಡಿ ದಿನಕರ ಕುಲಾಲ್ ಇವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿಯವರು ಪದಪ್ರಧಾನ ಮಾಡಿದರು.
ಈ ಸಂದರ್ಭ ಕುಂದಾಪುರದ ವಕೀಲರ ಸಂಘ ಹಾಗೂ ನ್ಯಾಯಾಲಯದ ಹೊಸ ಕಟ್ಟಡವನ್ನು ನಿರ್ಮಿಸಿದ ಗುತ್ತಿಗೆದಾರ ಇಂಜಿನಿಯರ್ ಪ್ರಶಾಂತ್ ಅವರನ್ನು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷೆ ಬೀನಾ ಜೊಸೆಫ್ ಜತೆ ಕಾರ್ಯದರ್ಶಿ ರಿತೇಶ್ ಬಿ ಹಾಗೂ ಕೋಶಾಧಿಕಾರಿ ಹಾಲಾಡಿ ದಿನಕರ್ ಕುಲಾಲ್ ಉಪಸ್ಥಿತರಿದ್ದರು.
ಹಿರಿಯ ವಕೀಲರಾದ ಟಿ.ಬಿ ಶೆಟ್ಟಿ ಸ್ವಾಗತಿಸಿದರು, ನ್ಯಾಯವಾದಿ ಕುಮಾರಿ ವನಿತಾ ಪ್ರಾರ್ಥಿಸಿದರು, ಸಂಘದ ಮಾಜಿ ಅಧ್ಯಕ್ಷ ಕಾಳಾವರ ಉದಯ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಮತ್ತು ಕಾಳಾವರ ಪ್ರದೀಪ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು, ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ವಂದಿಸಿದರು. ನ್ಯಾಯವಾದಿ ರಾಘವೇಂದ್ರ ಚರಣ್ ನಾವಡ ಮತ್ತು ರವಿ ಶೆಟ್ಟಿ ಮಚ್ಚಟ್ಟು ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply