ಸೆ.17 ರಂದು 80000 ಲಸಿಕೆ ನೀಡುವ ಗುರಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

ಉಡುಪಿ: ರಾಜ್ಯದಲ್ಲಿ ನವೆಂಬರ್ 30ರೊಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ 100%; ಲಸಿಕೆ ನೀಡುವ ಗುರಿ ಹೊಂದಿದ್ದು, ಇದರ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ ಸೆಪ್ಟಂಬರ್ 17 ರಂದು 80000 ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾ ಮಹಾಮೇಳ ಆಯೋಜನೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಈ ಲಸಿಕಾ ಮಹಾಮೇಳದಲ್ಲಿ ಭಾಗವಹಿಸಿ ಲಸಿಕೆ ಪಡೆಯುವಂತೆ ತಿಳಿಸಿದ ಅವರು, ಇದಕ್ಕಾಗಿ ಗ್ರಾಮ ಪಂಚಾಯತ್ ಮತ್ತು ನಗರ ವ್ಯಾಪ್ತಿಯಲ್ಲಿ 300 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.
ಎಲ್ಲಾ ಸಮುದಾಯಗಳ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈ ಲಸಿಕಾ ಮಹಾಮೇಳ ಕಾರ್ಯಕ್ರಮ ಆಯೋಜಿಸುತ್ತಿದ್ದು, ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು, ಆಯುಷ್ ವೈದ್ಯರು, ಆರೋಗ್ಯ ಸಹಾಯಕರು ಮತ್ತು ಕಾರ್ಯಕರ್ತರು, ಅಂಗನವಾಡಿ, ಆಶಾ ಕಾರ್ಯಕರ್ತರು,ಎಲ್ಲಾ ಟಾಸ್ಕ್ ಪೋರ್ಸ್ ಸಮಿತಿಗಳ ಸದಸ್ಯರು, ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿಗಳು ಹಾಗೂ ಶುಶ್ರೂಷಕ ಸಿಬ್ಬಂದಿ, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು 10,02,762 ಗುರಿ ಇದ್ದು, ಇದುವರೆಗೆ 8,471940 (ಶೇ.84.6%) ಮಂದಿಗೆ ಮೊದಲ ಡೋಸ್ ಲಸಿಕೆ ನೀಡಿದ್ದು, ಇದರಲ್ಲಿ 3,45,558 (ಶೇ.34.5%) ಎರಡನೇ ಡೋಸ್ ಪಡೆದಿದ್ದಾರೆ ಎಂದರು. 
ಸಾರ್ವಜನಿಕರಿಗೆ ಲಸಿಕೆ ಪಡೆಯುವ ಕುರಿತಂತೆ ಇರುವ ಯಾವುದೇ ಪ್ರಶ್ನೆ ಮತ್ತು ಸಂದೇಹಗಳನ್ನು ಪರಿಹರಿಸಲು, ಸೆಪ್ಟಂಬರ್ 16 ರಂದು ಬೆಳಗ್ಗೆ 10 ರಿಂದ 11 ರ ವರೆಗೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದ್ದು, ಮೊ.ಸಂಖ್ಯೆ. 9663957222 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರು ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಕಾವ್ರಾಡಿ, ಬಳ್ಕೂರು ಮತ್ತು ಕಾಡೂರು ಗ್ರಾಮ ಪಂಚಾಯತ್‌ಗಳಲ್ಲಿ 100% ಮೊದಲ ಡೋಸ್ ಲಸಿಕಾಕರಣ ಪೂರ್ಣಗೊಂಡಿದ್ದು, ಉಳಿದ ಪಂಚಾಯತ್‌ಗಳಲ್ಲಿ ಸಂಪೂರ್ಣ ಗುರಿ ಸಾಧನೆ ಕಾರ್ಯ ನಡೆಯುತ್ತಿದೆ.
ಸೆಪ್ಟಂಬರ್ 17 ರಂದು ನಡೆಯುವ ಲಸಿಕಾ ಮಹಾಮೇಳದಲ್ಲಿ ಜಿಲ್ಲೆಯ ಗಡಿಭಾಗದ ಗ್ರಾಮಗಳಲ್ಲಿ 100% ಲಸಿಕೆ ನೀಡಲು ಯೋಜನೆ ರೂಪಿಸಿದ್ದು, ಗ್ರಾಮದಲ್ಲಿನ 100-200 ಮನೆಗಳಿಗೆ ಒಬ್ಬ ನೋಡೆಲ್ ಸಿಬ್ಬಂದಿಯನ್ನು ನೇಮಿಸಿದ್ದು, ಅವರಿಗೆ ಇದುವರೆಗೆ ಲಸಿಕೆ ಪಡೆಯದ ಸಾರ್ವಜನಿಕ ರನ್ನು ಲಸಿಕಾ ಕೇಂದ್ರಗಳಿಗೆ ಕರೆತಂದು ಲಸಿಕೆ ಕೊಡಿಸುವ ಜವಾಬ್ದಾರಿ ವಹಿಸಲಾಗಿದೆ ಎಂದರು. ಅಪರ  ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply