ಮಂಜುನಾಥ ಭಂಡಾರಿ ಹೇಳಿಕೆ ದೆವ್ವದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ : ಕುಯಿಲಾಡಿ ಸುರೇಶ್ ನಾಯಕ್

ಸ್ವಾತಂತ್ರ್ಯ ನಂತರ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿರುವ ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರಗೈದಿರುವುದನ್ನು ಮರೆತು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಬಿಜೆಪಿ ಬಗ್ಗೆ ಲಘುವಾಗಿ ಮಾತನಾಡಿರುವುದು ದೆವ್ವದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿ ಇದೀಗ ಬೇಲ್ ಮೇಲೆ ಹೊರಗಡೆ ತಿರುಗಾಡುತ್ತಿರುವುದು ಜಗಜ್ಜಾಹೀರಾಗಿದೆ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇಂದ್ರದ ಯೋಜನೆಯ ಪ್ರತಿ 1 ರೂಪಾಯಿಯಲ್ಲಿ ಫಲಾನುಭವಿಗಳಿಗೆ ತಲುಪುತ್ತಿದ್ದ ಮೊತ್ತ ಕೇವಲ ಹದಿನೈದು ಪೈಸೆ ಮಾತ್ರ ಎಂದು ಸ್ವತಃ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಪ್ರಕ್ರಿಯೆ ಇತಿಹಾಸ ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಎಂಬುದು ಜನಜನಿತವಾಗಿದೆ. ಇದೆಲ್ಲವನ್ನು ಮರೆತು ಕಾಂಗ್ರೆಸ್ ವರಿಷ್ಠರನ್ನು ಖುಷಿಪಡಿಸುವ ಭರದಲ್ಲಿ ಸಜ್ಜನ ರಾಜಕಾರಣಿ ಎನಿಸಿರುವ ಭಂಡಾರಿಯವರು ಬಿಜೆಪಿ ಮೇಲೆ ಗೂಬೆ ಕೂರಿಸುವ ಮೊದಲು ತಮ್ಮ ಕಾಂಗ್ರೆಸ್ ಪಕ್ಷದ ಸಾಚಾತನದ ಬಗ್ಗೆ ಅವಲೋಕಿಸುವುದು ಉತ್ತಮ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply