Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರೆತ್ತಲೂ ಯೋಗ್ಯತೆ ಇಲ್ಲದ ಮಿಥುನ್ ರೈ ಬಾಲಿಷ ಹೇಳಿಕೆ ಖಂಡನೀಯ: ಕುಯಿಲಾಡಿ ಸುರೇಶ್ ನಾಯಕ್

ತನ್ನ ಸ್ವಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಪುಂಡ ಪುಡಾರಿ ರಾಜಕಾರಿಣಿ ಮಿಥುನ್ ರೈ ಅವರಿಗೆ ಕ್ರಿಯಾಶೀಲ ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರ ಬಗ್ಗೆ ಮಾತನಾಡಲು ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ತನ್ನ ಕಾರ್ಯಕ್ಷಮತೆಯಿಂದ‌ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿರುವ ಶೋಭಾ ಕರಂದ್ಲಾಜೆಯವರ ಹೆಸರೆತ್ತಲೂ ಯೋಗ್ಯತೆ ಇಲ್ಲದ ಅಪ್ರಬುದ್ಧ ರಾಜಕಾರಿಣಿ ಮಿಥುನ್ ರೈ‌ ಅವರ ಸಚಿವೆ ಶೋಭಾ ವಿರುದ್ಧ ನೀಡಿದ ಬಾಲಿಷ ಹೇಳಿಕೆ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ‌ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಶೋಭಾ ಕರಂದ್ಲಾಜೆಯವರು‌‌ ಈ ಹಿಂದೆ ರಾಜ್ಯದ ಮಂತ್ರಿಯಾಗಿ ಉತ್ತಮ ಕೆಲಸ ಕಾರ್ಯಗಳೊಂದಿಗೆ ದಕ್ಷತೆಯಿಂದ ತನ್ನ ಖಾತೆಯನ್ನು ನಿರ್ವಹಿಸಿದ ರೀತಿ ಹಾಗೂ ಈಗ ಸಂಸದೆ ಹಾಗೂ ಕೇಂದ್ರ ಸಚಿವೆಯಾಗಿ ಅತ್ಯಂತ ಪರಿಣಾಮಕಾರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಬಗ್ಗೆ ನೇರವಾಗಿ ಚರ್ಚೆ ನಡೆಸಲು ನಾವು ಸಿದ್ದರಿದ್ದೇವೆ. ಮಿಥುನ್ ರೈ ಅವರಿಗೆ ಮಾತನಾಡಲು ಅಥವಾ ಆರೋಪ ಮಾಡಲು ಆಸಕ್ತಿ ಇದ್ದಲ್ಲಿ ನೇರವಾದ ಚರ್ಚೆಗೆ ಬರಲಿ. ಅದನ್ನು ಬಿಟ್ಟು ಪುಕ್ಕಟೆ ಪ್ರಚಾರಕ್ಕಾಗಿ ಗಾಳಿಯಲ್ಲಿ ಗುಂಡು ಹೊಡೆಯುವ ಕ್ಷುಲ್ಲಕ ರಾಜಕಾರಣಕ್ಕೆ ಕೈ ಹಾಕುವುದು ಬೇಡ. ಇದೇ ಚಾಳಿಯನ್ನು ಮತ್ತೆ‌ ಮುಂದುವರೆಸಿದಲ್ಲಿ ಅದೇ ದಾಟಿಯಲ್ಲಿ ತಕ್ಕ ಪ್ರತ್ಯುತ್ತರ ನೀಡಲು ಸದಾ ಸಿದ್ಧರಿದ್ದೇವೆ.

ಕ್ರಿಯಾಶೀಲ ಸಂಸದೆ ಶೋಭಾ ಕರಂದ್ಲಾಜೆಯವರ ಬಗ್ಗೆ ಕ್ಷುಲ್ಲಕ ಮಾತುಗಳನ್ನಾಡುವ ಮೊದಲು ಈ ಹಿಂದೆ ಉಡುಪಿ ಕ್ಷೇತ್ರದಲ್ಲಿ ಸುದೀರ್ಘ ಅವಧಿಗೆ ಸಂಸದರಾಗಿದ್ದ ಕಾಂಗ್ರೆಸ್ ಪಕ್ಷದ ದುರೀಣರೊಬ್ಬರು ಉಡುಪಿಗೆ ನೀಡಿದ ಕೊಡುಗೆಗಳೇನು ಎಂಬ ಬಗ್ಗೆಯೂ ಮಿಥುನ್ ರೈ ಅವರು ಆತ್ಮಾವಲೋಕನ ಮಾಡುವುದು ಉತ್ತಮ.

ಕಾಂಗ್ರೆಸ್ ಪ್ರಾಯೋಜಿತ ಪ್ರಹಸನ 40% ಕಮಿಷನ್ ಬಗ್ಗೆ ಮಾತನಾಡಲು ಡಿ.ಕೆ. ಶಿವಕುಮಾರ್ ಶಿಷ್ಯ ಮಿಥುನ್ ರೈ ಅವರಿಗೆ ಯಾವ ನೈತಿಕತೆಯೂ ಇಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಯಾವ ರೀತಿ ಕಮಿಷನ್ ಸಂದಾಯವಾಗುತ್ತಿತ್ತು ಎಂಬುದು ಜಗಜ್ಜಾಹೀರಾಗಿದೆ. ಕಾಂಗ್ರೆಸ್ ವರಿಷ್ಠರೇ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿರುವಾಗ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಕ್ಕೆ ಬೇರೆ ಉದಾಹರಣೆಯ ಅಗತ್ಯ ಬೇಕೆನಿಸದು.

ಮಿಥುನ್ ರೈ ಅವರು ಗಾಜಿನ ಮನೆಯಲ್ಲಿ ಕುಳಿತು ಇನ್ನೊಂದು ಮನೆಗೆ ಕಲ್ಲು ಹೊಡೆಯುವ ಕೆಲಸ ಮಾಡಿದರೆ ಅದು ಅವರ ಮನೆಯನ್ನೇ ಒಡೆದು ಹಾಕುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಹೊಂದಿದರೆ ಒಳಿತು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!