‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ ಅಭಿಯಾನ ಯಶಸ್ವಿಗೊಳಿಸಿ: ಕುಯಿಲಾಡಿ

ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರವು ಕಳೆದ 2 ವರ್ಷಗಳಲ್ಲಿ ಉಚಿತ ಕೋವಿಡ್ ಲಸಿಕೆ ಹಾಗೂ ಪಡಿತರ ಮೂಲಕ ದೇಶವಾಸಿಗಳಿಗೆ ಆಹಾರ ಮತ್ತು ಆರೋಗ್ಯ ಭದ್ರತೆಯನ್ನು ಖಾತ್ರಿಪಡಿಸಿ ಅಭೂತಪೂರ್ವ ಸವಾಲುಗಳನ್ನು ಎದುರಿಸಿದೆ. ಸರಕಾರದ 8ನೇ ವರ್ಷದ ಸಾಧನೆಗಳನ್ನು ಆಚರಿಸುವ ಸಲುವಾಗಿ ಜಿಲ್ಲೆಯಾದ್ಯಂತ ಮೇ 30ರಿಂದ ಜೂನ್ 14ರ ವರೆಗೆ ನಡೆಯಲಿರುವ ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ ಅಭಿಯಾನದ ವಿವಿಧ ಕಾರ್ಯಕ್ರಮಗಳ ಜಿಲ್ಲಾ ಮತ್ತು ಮಂಡಲಗಳ ಸಂಚಾಲಕರು ಮತ್ತು ಸಹ ಸಂಚಾಲಕರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಮತ್ತು ಮಂಡಲಗಳ ತಂಡದ ಪ್ರಮುಖರ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಸೇವೆ’ಯು ಸಾಂಕ್ರಾಮಿಕ ಸಮಯದಲ್ಲಿ ರಾಷ್ಟ್ರದ ಸೇವೆಗಾಗಿ ಪ್ರಧಾನಿ ಮೋದಿಯವರ ಅವಿರತ ಪ್ರಯತ್ನಗಳನ್ನು ಸೂಚಿಸುತ್ತದೆ. ‘ಸುಶಾಸನ’ ಉತ್ತಮ ಆಡಳಿತವನ್ನು ಖಾತ್ರಿಪಡಿಸಿಕೊಳ್ಳಲು ಪ್ರಧಾನಿ ಮೋದಿ ಸರಕಾರದ ವಿವಿಧ ಉಪಕ್ರಮಗಳನ್ನು ಸಂಕೇತಿಸುತ್ತದೆ. ‘ಬಡವರ ಕಲ್ಯಾಣ’ ಬಡವರ ಪರವಾದ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆಗಳನ್ನು ತಲುಪಿಸಲು ಮತ್ತು ಬಡವರನ್ನು ಮುಖ್ಯವಾಹಿನಿಗೆ ತರಲು ಪ್ರಧಾನಿ ಮೋದಿಯವರ ಬದ್ಧತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲೆಯು ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿದ್ದು ಈ ಹಿಂದೆಯೂ ಪಕ್ಷದ ಹಲವಾರು ಅಭಿಯಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.‌‌ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನೂರಾರು ಜನಪರ ಯೋಜನೆಗಳು ಮತ್ತು ವಿಶಿಷ್ಟ ಸಾಧನೆಗಳೊಂದಿಗೆ ಯಶಸ್ವೀ 8 ವರ್ಷಗಳನ್ನು ಪೂರೈಸಿರುವ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ ಅಭಿಯಾನದ ಎಲ್ಲಾ ವಿಭಾಗಗಳ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ಜಿಲ್ಲಾ ಮತ್ತು ಮಂಡಲಗಳ ತಂಡಗಳು ಬದ್ಧತೆಯಿಂದ ಶ್ರಮವಹಿಸಿ ಸೂಕ್ತ ಪೂರ್ವಸಿದ್ಧತೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕುಯಿಲಾಡಿ ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಸಂಘಟನಾತ್ಮಕ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು ವೀಡಿಯೋ ಕಾನ್ಫರೆನ್ಸ್ ಮಾಧ್ಯಮದ ಮೂಲಕ ನೆರವೇರಿಸಿದ ಬೂತ್ ಸಶಕ್ತೀಕರಣದ ಉದ್ಘಾಟನೆಯ ನೇರ ಪ್ರಸಾರವನ್ನು ವೀಕ್ಷಿಸಲಾಯಿತು. ಸಭೆಯಲ್ಲಿ ಬೂತ್ ಸಶಕ್ತೀಕರಣದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲಾ ವ್ಯಾಪ್ತಿಯ 15 ಮಂದಿ ಪ್ರಮುಖರ ತಂಡವನ್ನು ಘೋಷಿಸಲಾಯಿತು.

‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಸದಾನಂದ ಉಪ್ಪಿನಕುದ್ರು ಅಭಿಯಾನದ ಜಿಲ್ಲಾ ಮತ್ತು ಮಂಡಲಗಳ ತಂಡದ ಜವಾಬ್ದಾರಿ ನಿರ್ವಹಣೆಯ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಅಭಿಯಾನದ ಕಾರ್ಯಕ್ರಮಗಳ ವ್ಯವಸ್ಥಿತ ಆಯೋಜನೆಯ ಪೂರ್ವಸಿದ್ಧತೆಗಳ ಬಗ್ಗೆ ವಿಭಾಗವಾರು ಸಂಚಾಲಕರಿಂದ ಮಾಹಿತಿ ಪಡೆದರು.

ಪೂರ್ವಭಾವಿ ಸಭೆಯಲ್ಲಿ ಅಭಿಯಾನದ ಜಿಲ್ಲಾ ಹಾಗೂ ಮಂಡಲಗಳ ಸಂಚಾಲಕರು ಮತ್ತು ಸಹ ಸಂಚಾಲಕರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply