ರಾಜ್ಯ ಪತ್ರಕರ್ತರ 37ನೆ ಸಮ್ಮೇಳನಕ್ಕೆ ಜಿಲ್ಲಾಡಳಿತದ ಸಹಕಾರ: ಡಿಸಿ

 ವಿಜಯಪುರ ನಗರದಲ್ಲಿ ನಡೆಯಲಿರುವ ಪತ್ರಕರ್ತರ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿಸೋಣ. ಆದರೆ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಿದರೆ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಅಶೋಕ ಯಡಹಳ್ಳಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಅದಾಲತ್ ಮಹಲ್‌ನಲ್ಲಿ ಭೇಟಿ ಮಾಡಿದ ವೇಳೆ, ಸಂಘದ ಪದಾಧಿಕಾರಿಗಳು ಸೇರಿದಂತೆ ರಾಜ್ಯಾಧ್ಯಕ್ಷರಿಗೆ ಮೊದಲು ದಿನಾಂಕ ನಿಗದಿಗೊಳಿಸಲು ಸಲಹೆ ಮಾಡಿದರು.

ಸಮ್ಮೇಳನ ಎಂದರೆ ಸಾಮಾನ್ಯವಲ್ಲ. ಸಿದ್ಧತೆ ಮಾಡಿಕೊಳ್ಳಲು ಕನಿಷ್ಠ ಒಂದು ತಿಂಗಳಾದರೂ ಕಾಲಾವಕಾಶ ಬೇಕು. ಹಾಗಾಗಿ ಸಂಘದ ಪದಾಧಿಕಾರಿಗಳು ತಕ್ಷಣ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ದಿನಾಂಕ ಅವರಿಂದ ದಿನಾಂಕ ನಿಗದಿಗೊಳಿಸಿದರೆ ಸಮ್ಮೇಳನ ಸಿದ್ಧತೆಗೆ ಅನುಕೂಲವಾಗುತ್ತದೆ ಎಂದರು.

ದಿನಾಂಕ ನಿಗದಿಯಾಗುತ್ತಿದ್ದಂತೆಯೇ ನಾನು ಜಿಲ್ಲಾ ಮಟ್ಟದ ಅಧಿಕಾರಿಗಳ, ಹೊಟೇಲ್ ಹಾಗೂ ವಸತಿ ಗೃಹಗಳ ಮಾಲೀಕರ ಸಭೆ ಕರೆದು, ಸಮ್ಮೇಳನಕ್ಕೆ ಯಶಸ್ವಿಗೊಳಿಸಲು ಸೂಚಿಸುವುದಾಗಿ ತಿಳಿಸಿದರು.

ರಾಜ್ಯಾದ್ಯಂತ 4 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಳ್ಳುತ್ತಾರೆ ಎಂದರೆ ಅವರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸವಾಲಿನ ಕೆಲಸ. ಹಾಗಾಗಿ ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಹಾಗಾಗಿ ಮೊದಲು ಸಮ್ಮೇಳನದ ದಿನಾಂಕ ನಿಗದಿಗೊಳಿಸಿ ಎಂದು ಜಿಲ್ಲಾಧಿಕಾರಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರಿಗೆ ಅಮೂಲ್ಯ ಸಲಹೆ ನೀಡಿದರು.

ಎರಡು ದಿನಗಳ ಸಮ್ಮೇಳನವನ್ನು ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಮಾಡಿ. ಮುಖ್ಯಮಂತ್ರಿ ಆಗಮಿಸಿದ ವೇಳೆ ದಟ್ಟಣೆ ಬಿಟ್ಟರೆ, ಬಾಕಿ ಸಮ್ಮೇಳನದ ಗೋಷ್ಠಿಗಳನ್ನು ನಡೆಸಲಿಕ್ಕೆ ರಂಗಮಂದಿರವೇ ಸೂಕ್ತವಾಗಲಿದೆ. ಹಾಗಾಗಿ ರಂಗಮಂದಿರದಲ್ಲಿ ಸಮ್ಮೇಳನ ಮಾಡಲು ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಇದೇ ವೇಳೆ ಕೋವಿಡ್ ಕಥೆಗಳು ಕುರಿತು ಬರೆದ ಪುಸ್ತಕವನ್ನು ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.

Leave a Reply