Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ

ಬೆಂಗಳೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.

ನಾಡಿನ ಉದ್ದಗಲಕ್ಕೂ ಎಲ್ಲಾ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಪತ್ರಿಕಾ ವಿತರಕರು ಕಾರ್ಯಕ್ರಮ ಸಾಕ್ಷಿಕರಿಸಿದರು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರ ಪ್ರತಿಭಾವಂತ ವಿದ್ಯಾರ್ಥಿಗಳು, ಹಿರಿಯ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ
ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು ಮಾತನಾಡಿ, ಸುದ್ದಿ ಹೊತ್ತ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಶ್ರೇಷ್ಠ ಕಾಯಕ ಮಾಡುತ್ತಿರುವ ವಿತರಕರ ಬಗ್ಗೆ ಸರ್ಕಾರ ಕಾಳಜಿ ವಹಿಸಿ‌ ಅವರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ದೇಶವನ್ನು ಕಟ್ಟಲು ಅಂಬಾನಿ, ಅದಾನಿಯಿಂದ ಸಾಧ್ಯವಿಲ್ಲ. ತಳಮಟ್ಟದ ಪತ್ರಿಕಾ ವಿತರಕರಿಂದ ಅದು ಸಾಧ್ಯ ಇದೆ. ಆದ್ದರಿಂದ ಸಂಘಟನೆಗೆ ಹೆಚ್ಚು ಒತ್ತು ನೀಡಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಷಿ ಮಾತನಾಡಿ, ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಿಕಾ ವಿತರಕರ ಬಗ್ಗೆ, ಕೋವಿಡ್ ಸಂದರ್ಭದ ಸಂಕಷ್ಟಗಳ ಬಗ್ಗೆ ಒಂದು ಗೋಷ್ಠಿ ಏರ್ಪಡಿಸಲಾಗುವುದು ಎಂದರು.
ಕಸಾಪ ಸದಸ್ಯತ್ವ ಅಭಿಯಾನದಲ್ಲಿ
ಒಂದು ಕನ್ನಡ ಪತ್ರಿಕೆಯನ್ನು ಕಡ್ಡಾಯವಾಗಿ ಮನೆಗೆ ತರಿಸಬೇಕು ಎಂದು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಆಶಯ ಭಾಷಣ ಮಾಡಿದ ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಅವರು, ಇ ಶ್ರಮ್ ಕಾರ್ಡನ್ನು ಎಲ್ಲಾ ಪತ್ರಿಕಾ ವಿತರಕರಿಗೆ ಸಿಗುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದರು.

ನಾನು ಪತ್ರಿಕೆ ಹಾಕುತ್ತಲೇ ಬೆಳೆದವನು. ಹಾಗಾಗಿ ವಿತರಕರ ಬಗ್ಗೆ ವಿಶೇಷ ಕಾಳಜಿ ಇದೆ. ಸಂಘಟಿತರಾದರೆ ಮಾತ್ರ ಸರ್ಕಾರ ನಿಮ್ಮ ಬೇಡಿಕೆ ಕಡೆಗೆ ಗಮನ ನೀಡುತ್ತದೆ ಎಂದರು.

ಬೇಡಿಕೆ ಈಡೇರಿಕೆಗೆ ಭರವಸೆ:
ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು ಮಾತನಾಡಿ, ಪತ್ರಿಕಾ ವಿತರಕರ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಈಡೇರಿಸಲು ಅಗತ್ಯವಾದ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು, ಮಾತನಾಡಿ, ಕಳೆದ ವರ್ಷದಿಂದ ಈ ವರ್ಷಕ್ಕೆ ಸಂಘಟನೆ ಸಾಕಷ್ಟು ಬೆಳೆದಿದೆ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಸಾಗಿದರೆ ಮಾತ್ರ ನಿಮ್ಮ ಬೇಡಿಕೆ ಈಡೇರಲು ಸಾಧ್ಯ. ಆದ್ದರಿಂದ ಸಂಘಟನೆಗೆ ಮೊದಲು ಆದ್ಯತೆ ನೀಡಿ ಎಂದರು.

ಕೆಯುಡಬ್ಲ್ಯೂಜೆ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕಿನಲ್ಲಿ ವಿತರಕರನ್ನು ಗುರುತಿಸಿ ಗೌರವಿಸಲಾಗಿದೆ. ಈ ತತ್ಸಂಪ್ರದಾಯ ಮುಂದುವರಿಯಲಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, IFWJ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿತರಕರ ಒಕ್ಕೂಟದ ಲಾಂಛನವುಳ್ಳ ಬಾವುಟವನ್ನು ಅನಾವರಣ ಮಾಡಲಾಯಿತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!