Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ಕುಕ್ಕೆ ಸುಬ್ರಹ್ಮಣ್ಯನ ಅವಭೃತೋತ್ಸವ ಸಂಪನ್ನ

ಕುಕ್ಕೆ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಸೋಮವಾರದಂದು ಮುಂಜಾನೆ ಕುಮಾರಾಧಾರಾದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ಸಂಪನ್ನಗೊಂಡಿತು.ಅವಭೃತೋತ್ಸವದ ಧಾರ್ಮಿಕ ವಿದಿವಿಧಾನವನ್ನು ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು. ಅರ್ಚಕರಾದ ವೇದಮೂರ್ತಿ ರಾಜೇಶ್ ನಡ್ಯಂತಿಲ್ಲಾಯ ಮತ್ತು ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯ ಉತ್ಸವದ ವೈದಿಕ ವಿದಿ ವಿಧಾನಗಳಲ್ಲಿ ಸಹಕರಿಸಿದರು. ಸಹಸ್ರಾರು ಭಕ್ತರು ಶ್ರೀ ದೇವರ ಅವಭೃತ ಸ್ನಾನದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿ ಧನ್ಯರಾದರು.

ಬೆಳಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ಮತ್ತು ಓಕುಳಿ ಚೆಲ್ಲಾಟ ನಡೆಯಿತು. ಬಳಿಕ ದೇವರಿಗೆ ಓಕುಳಿ ಸಮರ್ಪಣೆಯಾಗಿ ಭಕ್ತಾಧಿಗಳಿಗೆ ಓಕುಳಿ ಪ್ರೋಕ್ಷಣೆ ಮತ್ತು ಓಕುಳಿ ಚೆಲ್ಲಾಟ ನಡೆಯಿತು. ನಂತರ ಶ್ರೀ ದೇವರ ಅವಭೃತೋತ್ಸವ ಸವಾರಿ ಶ್ರೀ ದೇವಳದಿಂದ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.

ತದನಂತರ ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ಶ್ರೀ ದೇವರ ನೌಕಾವಿಹಾರ ನಡೆಯಿತು. ಮಾವು, ಬಾಳೆ, ತಳಿರು-ತೋರಣ ಮತ್ತು ಹೂವುಗಳಿಂದ ಹಾಗೂ ಬಿರುದಾವಳಿಗಳಿಂದ ಸಿಂಗರಿಸಲ್ಪಟ್ಟ ಅವಳಿ ದೋಣಿಗಳನ್ನು ಒಂದಾಗಿಸಿ ಅಚ್ಚುಕಟ್ಟಾಗಿ ನಿರ್ಮಿತವಾದ ತೆಪ್ಪದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ನೌಕಾವಿಹಾರ ನೆರವೇರಿತು.

ಅನಂತರ ಕುಮಾರಧಾರೆಯ ಮತ್ಸ್ಯತೀರ್ಥದ ಶ್ರೀ ದೇವರ ಜಳಕದಗುಂಡಿಯಲ್ಲಿ ದೇವರ ಅವಭೃತೋತ್ಸವ ನಡೆಯಿತು. ಶ್ರೀ ದೇವರ ಸ್ನಾನದ ಧಾರ್ಮಿಕ ವಿದಿವಿಧಾನವನ್ನು ಪ್ರಧಾನ ಅರ್ಚಕ ನೇರವೇರಿಸಿದ್ದು, ಅರ್ಚಕರು ಸಹಕರಿಸಿದರು. ಬಳಿಕ ಸೀಯಾಳಾಭಿಷೇಕ ಸೇರಿದಂತೆ ವಿವಿಧ ವೈಧಿಕ ವಿದಿವಿಧಾನಗಳನ್ನು ನಡೆಸಿದರು. ತದನಂತರ ಕುಮಾರಧಾರ ಪುಣ್ಯತೀರ್ಥದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಅವಭೃತ ನೆರವೇರಿತು.

ಜಳಕದ ಬಳಿಕ ಕುಮಾರಧಾರ ನದಿ ತೀರದ ಅವಭೃತಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆಪೂಜೆ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಪುಷ್ಪಲತಾ, ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನರಾಂ ಸುಳ್ಳಿ, ಪಿ.ಜಿ.ಎಸ್. ಪ್ರಸಾದ್, ಪ್ರಸನ್ನ ದರ್ಬೆ, ಮನೋಹರ ರೈ ಕಡಬ, ವನಜಾ ವಿ. ಭಟ್, ಬ್ರಹ್ಮರಥದ ದಾನಿಗಳಲ್ಲಿ ಓರ್ವರಾದ ಯುವ ಉದ್ಯಮಿ ಅಜಿತ್ ಶೆಟ್ಟಿ ಕಡಬ ಸೇರಿದಂತೆ ಸಹಸ್ರಾರು ಭಕ್ತರು ಸೇರಿದ್ದರು.

ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದ ಕ್ಷೇತ್ರದ ಆನೆ ಯಶಸ್ವಿನಿಯು ಎಲ್ಲರಂತೆ ತಾನೂ ಕೂಡಾ ಸ್ನಾನ ಮಾಡಿ ನೀರಾಟವಾಡಿತು.ಶ್ರೀ ದೇವರ ಅವಭೃತದ ಸಮಯದಲ್ಲಿ ಶ್ರೀ ದೇವರೊಂದಿಗೆ ಸಹಸ್ರಾರು ಭಕ್ತರು ಪುಣ್ಯ ಸ್ನಾನ ಮಾಡಿದರು. ಈ ಮೂಲಕ ಶ್ರೀ ದೇವರ ಅವಭೃತ ದೊಂದಿಗೆ ಯಶಸ್ವಿನಿಯು ಸ್ನಾನ ಮಾಡಿದಳು.

ಚಿತ್ರ : ರತ್ನಾಕರ್ ಸುಬ್ರಮಣ್ಯ 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!