ಕುಮಾರಸ್ವಾಮಿಯವರ ಲೆಕ್ಕಾಚಾರ ಕಡಿಮೆಯಾಗಿದೆ, ಆರೆಸ್ಸೆಸ್ ನವರು ಇನ್ನು ಹೆಚ್ಚು ಜನರಿದ್ದಾರೆ

ಉಡುಪಿ: ದೇಶದ 4000 ಐಎಎಸ್ , ಐಪಿಎಸ್ ಗಳು, ಆರೆಸ್ಸೆಸ್ ಕಾರ್ಯಕರ್ತರು ಎಂಬ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಹೇಳಿಕೆಗೆ ರಾಜ್ಯ ಇಂಧನ ಸಚಿವ ವಿ. ಸುನಿಲ್ ಕುಮಾರ್‌ ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು,ಕೇವಲ 4000 ಅಲ್ಲ, ಅದಕ್ಕೂ ಹೆಚ್ಚು ಜನ ಆರೆಸ್ಸೆಸ್ ನವರಿದ್ದಾರೆ. ಕುಮಾರಸ್ವಾಮಿಯವರ ಲೆಕ್ಕಾಚಾರ ಕಡಿಮೆಯಾಗಿದೆ. ಇನ್ನೂ ಹೆಚ್ಚು ಮಂದಿ ಇದ್ದಾರೆ ಎಂದು ಎಚ್ ಡಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಉಡುಪಿಯ ಶೀಂಭ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಒಂದು ವ್ಯಕ್ತಿಯನ್ನು ನಿರ್ಮಾಣ ಮಾಡುವ ಸಂಘಟನೆಯಾಗಿದ್ದು ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಸಂಘಟನೆ.

ನಮ್ಮಂಥ ಅನೇಕ ವ್ಯಕ್ತಿಗಳನ್ನು ಆರೆಸ್ಸೆಸ್ ತಯಾರು ಮಾಡಿದ್ದು, ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡವರು ಬೇರೆಬೇರೆ ಕ್ಷೇತ್ರದಲ್ಲಿದ್ದಾರೆ. ಆರೆಸ್ಸೆಸ್‌ ನಲ್ಲಿ ತರಬೇತಿ ಹೊಂದಿದವರು ಸಾವಿರಾರು ಮಂದಿ ವಿವಿಧ ಕ್ಷೇತ್ರಗಳಲ್ಲಿದ್ದಾರೆ.

ಅದು ಕೇವಲ ಐಎಎಸ್ ,ಐಪಿಎಸ್ ಗಳು ಮಾತ್ರ ಅಲ್ಲ. ಪಿಡಿಒ ನಿಂದ ರಾಷ್ಟ್ರಪತಿ ವರೆಗೆ ಆರೆಸ್ಸೆಸ್ ಕಾರ್ಯಕರ್ತರು ಇದ್ದಾರೆ. ಎಲ್ಲರ ಮುಖಾಂತರ ರಾಷ್ಟ್ರ ನಿರ್ಮಾಣ ಮಾಡುವ ಗುರಿ ಇದ್ದು, ರಾಷ್ಟ್ರ ನಿರ್ಮಾಣದ ಪರ ಇರುವವರು ಇದನ್ನು ಸ್ವಾಗತಿಸಿದರೆ, ರಾಷ್ಟ್ರ ನಿರ್ಮಾಣದ ಕನಸು ಇಲ್ಲದವರು ವಿರೋಧಿಸುತ್ತಾರೆ. ಈ ರೀತಿ ಮಾತನಾಡುವವರ ಬಗ್ಗೆ ಅನುಕಂಪವಿದೆ ಎಂದರು.

ಭಾರತ ವಿಶ್ವಕ್ಕೆ ಮಾರ್ಗದರ್ಶನ ಮಾಡಬೇಕೆಂದು ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಬಯಸಿದ್ದರು. ಅವರ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ. ಭಾರತ ನಂಬರ್1 ಆಗಲು ವ್ಯಕ್ತಿ ನಿರ್ಮಾಣವಾಗಬೇಕು, ವ್ಯಕ್ತಿ ನಿರ್ಮಾಣ ಮಾಡುವ ಏಕೈಕ ಸಂಘಟನೆ ಆರೆಸ್ಸೆಸ್. ಅಪ್ಪ ಮಕ್ಕಳು ಬೇರೆ ಬೇರೆ ಸಂದರ್ಭದಲ್ಲಿ ಬೇರೆ-ಬೇರೆ ರೀತಿ ಮಾತನಾಡುತ್ತಾರೆ. ಆರೆಸ್ಸೆಸ್ ಹೆಸರನ್ನು ಬೇಕಾದಂತೆ ಬಳಸಿಕೊಂಡಿದ್ದಾರೆ.

ಆದರೆ ಅವರಿಗೆ ಬೇಕಾದಂತೆ ಬಳಸಿಕೊಳ್ಳುವ ಸಂಘಟನೆ ಆರೆಸ್ಸೆಸ್ ಅಲ್ಲ. ಕುಮಾರಸ್ವಾಮಿ ಹೇಳಿದರು ಅಂತ ಈ ಕೆಲಸ ನಿಲ್ಲುವುದಿಲ್ಲ. ಈ ಕೆಲಸ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಹೇಳಿದರು.

 
 
 
 
 
 
 
 
 

Leave a Reply