ಕಾಂಗ್ರೆಸ್ ತನ್ನ ಆಂತರಿಕ ಕಲಹ ತಾನೇ ಸಾಬೀತುಗೊಳಿಸುತ್ತಿದೆ~ಕೋಟ ಶ್ರೀನಿವಾಸ ಪೂಜಾರಿ

ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್‌ನ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ನ ಆಂತರಿಕ ವಿಷಯಗಳಲ್ಲಿ ನಾವು ಮೂಗು ತೂರಿಸುವುದಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಅವರಿಂದಲೇ ಸಾಬೀತಾಗುತ್ತಿದೆ ಎಂದಿದ್ದಾರೆ.

ಮಾಧ್ಯಮದವರೊಂದಿಗೆ ಶುಕ್ರವಾರ ಉಡುಪಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ನಡೆದ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಡಿ.ಕೆ.ಶಿ. ಅವರಿಗೆ ಮಾಹಿತಿ ದೊರೆತಿರಬಹುದು. ಹಾಗೆಯೆ ಈ ನಡುವೆ ಡಿಕೆಶಿ ಅವರು ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡು, ಅವರ ಮೇಲೆ ದೂರು ಕೊಡಲು ದಿಲ್ಲಿ ಪ್ರವಾಸ ಕೈಗೊಂಡಿರಬಹುದು ಎಂದರು.

ಇನ್ನು ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಂತೆಯೂ ಸಚಿವ ಶ್ರೀನಿವಾಸ್ ಪೂಜಾರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದು , ಸಿದ್ದರಾಮಯ್ಯ ಅವರು ತಮ್ಮ ಹಗಲುಗನಸು ಕಾಣುವುದನ್ನು ನಿಲ್ಲಿಸಲಿ. ರಾಜ್ಯದ ಸಂಕಷ್ಟದಲ್ಲಿದ ಎಲ್ಲಾ ಕಾಲದಲ್ಲಿಯೂ ಯಡಿಯೂರಪ್ಪ ಸಮರ್ಥವಾಗಿ ಅಧಿಕಾರ ನಿಭಾಯಿಸಿದ್ದಾರೆ. ಸಿದ್ದರಾಮಯ್ಯಗೆ ಇಂತಹ ಮಾಹಿತಿಯನ್ನು ಅಲ್ಲಾವುದ್ದಿನನ ಯಾವ ಅದ್ಭುತ ದೀಪ ಕೊಟ್ಟಿದೆಯೋ ಗೊತ್ತಿಲ್ಲ, ಬಿ.ಎಸ್.ವೈ. ರಾಜ್ಯದ ಸರ್ವೋಚ್ಚ ಮುಖಂಡ.

ಅವರು ಮುಖ್ಯಮಂತ್ರಿಯಾಗಿ ನಿರಂತರವಾಗಿ ಮುಂದುವರಿಯಲಿದ್ದಾರೆ. ಅವರಿಗೆ ಕೇಂದ್ರ ಮತ್ತು ರಾಜ್ಯದ ಎಲ್ಲ ನಾಯಕರ ಸಹಮತವಿದೆ ಎಂದು ಹೇಳಿದರು. ಸದ್ಯ ಚರ್ಚೆಗೆ ಗ್ರಾಸವಾಗಿರುವ ವಿಜಯೇಂದ್ರವರ ರಾಜಕೀಯ ಪ್ರವೇಶದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಚುನಾವಣೆ ಮತ್ತು ಪಕ್ಷ ಸಂಘಟನೆಯಲ್ಲಿ ವಿಜಯೇಂದ್ರ ಸಕ್ರಿಯರಾಗಿದ್ದಾರೆ.

ಅವರ ಚುನಾವಣಾ ರಾಜಕೀಯ ಪ್ರವೇಶ ಬಗ್ಗೆ ರಾಜ್ಯ ಮತ್ತು ಕೇಂದ್ರದ ವರಿಷ್ಠರು ನಿರ್ಧರಿಸುತ್ತಾರೆ. ಉಪಾಧ್ಯಕ್ಷರಾಗಿ ಬಹಳ ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರವನ್ನು ವಿಜಯೇಂದ್ರ ಚೆನ್ನಾಗಿ ಸಮರ್ಥಿಸಿಕೊಳ್ಳುತ್ತಿದ್ದು, ಸಂಘಟನಾತ್ಮಕ ಕೆಲಸದಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದರು.

 
 
 
 
 
 
 
 
 
 
 

Leave a Reply