ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನ~ ಸಾಲೆತ್ತೂರಿನ ಮನೆಗೆ ಬಜರಂಗದಳ ಮುತ್ತಿಗೆ ಯತ್ನ,

ಕೊರಗಜ್ಜ ದೈವದ ಮಾದರಿಯಲ್ಲಿ ವೇಷ ಧರಿಸಿ ಮುಸ್ಲಿಮ್ ಮದುವೆಯಲ್ಲಿ ಅಣಕವಾಡಿದ ಘಟನೆಯನ್ನು ಖಂಡಿಸಿ ಬಜರಂಗದಳ ಕಾರ್ಯಕರ್ತರು ಸಾಲೆತ್ತೂರಿನ ವಧುವಿನ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಮನೆಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದು, ಧಿಕ್ಕಾರ ಕೂಗಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ವಿಟ್ಲ ಪೊಲೀಸರು ಬಜರಂಗದಳದ ಯುವಕರನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರಿನ ಅಜೀಜ್ ಎಂಬವರ ಮಗಳ ಮದುವೆ ಜನವರಿ 6ರಂದು ನಡೆದಿದ್ದು, ರಾತ್ರಿ ವೇಳೆ ಸಂಪ್ರದಾಯದಂತೆ ವರನ ಕಡೆಯವರು ವಧುವಿನ ಮನೆಗೆ ಬಂದಿದ್ದರು. ಈ ವೇಳೆ, ಮದುಮಗ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಉಮರುಳ್ಳ ಬಾಷಿತ್ ನನ್ನು ಸ್ನೇಹಿತರು ವಿಶಿಷ್ಟವಾಗಿ ಸಿಂಗರಿಸಿ ತಂದಿದ್ದಾರೆ. ತುಳುನಾಡಿನಲ್ಲಿ ಆರಾಧಿಸುವ ಕೊರಗಜ್ಜನ ರೀತಿ ಬಿಂಬಿಸಿ ಯುವಕನಿಗೆ ವೇಷ ಹಾಕಿದ್ದು, ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ.  

ಘಟನೆ ಬಗ್ಗೆ ಸ್ಥಳೀಯ ಕಡಂಬು ನಿವಾಸಿ ಚೇತನ್ ಎಂಬವರು ವಿಟ್ಲ ಠಾಣೆಗೆ ದೂರು ನೀಡಿದ್ದು, ಕೊರಗಜ್ಜನಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ವಧುವಿನ ಕಡೆಯವರು ಮತ್ತು ವರನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದು ಸಂಘಟನೆಗಳಿಂದ ಆಕ್ರೋಶ ಕೇಳಿಬಂದಿದ್ದು, ವಿಶ್ವ ಹಿಂದು ಪರಿಷತ್ ಘಟನೆಯನ್ನು ಖಂಡಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದೆ. ಇದೇ ವೇಳೆ, ಸ್ಥಳೀಯ ಬಜರಂಗದಳ ಕಾರ್ಯಕರ್ತರು ಸಾಲೆತ್ತೂರಿನ ಅಜೀಜ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದು, ಮತಾಂಧರಿಗೆ ಧಿಕ್ಕಾರ, ಕೊರಗಜ್ಜನಿಗೆ ಅವಮಾನ ಮಾಡಿದವರನ್ನು ಬಂಧಿಸಿ ಎನ್ನುತ್ತಾ ಘೋಷಣೆ ಕೂಗಿದ್ದಾರೆ. ಈ ವೇಳೆ, ವಿಟ್ಲ ಪೊಲೀಸರು ಸ್ಥಳಕ್ಕೆ ಬಂದಿದ್ದು, ಎರಡು ಜೀಪ್ ಗಳಲ್ಲಿ ಯುವಕರನ್ನು ಬಂಧಿಸಿ ಠಾಣೆಗೆ ಹೊತ್ತೊಯ್ದಿದ್ದಾರೆ. ಘಟನೆ ಹಿನ್ನೆಲೆ ಸಾಲೆತ್ತೂರಿನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

 
 
 
 
 
 
 
 
 
 
 

Leave a Reply