ಸ್ನೇಹಿತರ ನೋಡಿ ಕೊನೆಯುಸಿರೆಳೆದ ಬಾಲಕ

ಕಿಡ್ನಿ ವೈಫಲ್ಯದಿಂದ ಇನ್ನೇನು ಸಾವು ಸಮೀಪಿಸುತ್ತಿದೆ ಎನ್ನುವಾಗ ಬಾಲಕನೊಬ್ಬ ತನ್ನ ಸ್ನೇಹಿತರು ಹಾಗೂ ಶಾಲೆಯನ್ನು ನೋಡಲು ಬಯಸಿ ಆ ಆಸೆಯನ್ನು ಈಡೇರಿಸಿಕೊಂಡಿರುವ ಮನಕಲಕುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಫ್ರೆಂಡ್​ಷಿಪ್​ ಡೇ (ಜುಲೈ 30) ನಿಮಿತ್ತ ತನ್ನ ಸ್ನೇಹಿತರಿಂದ ಗೆಳೆತನದ ಬೆಲ್ಟ್​​ ಧರಿಸಿಕೊಂಡು ಕಣ್ಮುಚ್ಚಿದ್ದಾನೆ ಬಾಲಕ ಸುಹಾಸ್​ ಸೌದ್ರಿ. ನಿನ್ನೆ ಸ್ನೇಹಿತರನ್ನು ಕಂಡು ಫ್ರೆಂಡ್​ಷಿಪ್​ ಬೆಲ್ಟ್​ ಕಟ್ಟಿಸಿಕೊಂಡು ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ ಈತ.

ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣ ನಿವಾಸಿ ಸುಹಾಸ್​, ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ಈತನಿಗೆ ಬಾಲ್ಯದಿಂದಲೂ ಕಿಡ್ನಿ ಸಮಸ್ಯೆ ಇತ್ತು. ಕಳೆದ ಒಂದು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ. ತನ್ನ ಅಂತಿಮ ಕಾಲ ಹತ್ತಿರ ಬಂದಿದೆ ಎಂದು ಆತನಿಗೆ ಅನ್ನಿಸಿತ್ತೋ ಏನೋ, ತೀವ್ರ ಅನಾರೋಗ್ಯದ ನಡುವೆಯೂ ಶಾಲೆ, ಶಿಕ್ಷಕರು, ಸ್ನೇಹಿತರನ್ನು ನೆನೆಪಿಸಿಕೊಂಡಿದ್ದ ಸುಹಾಸ್. ಇದೇ ಕಾರಣಕ್ಕೆ ಆತನನ್ನು ನಿನ್ನೆ (ಜುಲೈ 30) ಶಾಲೆಗೆ ಕರೆದುಕೊಂಡು ಬಂದಿದ್ದರು ಪಾಲಕರು.

ಈ ವೇಳೆ ಶಾಲಾ ಆವರಣದಲ್ಲಿ ಕಾರಿನಲ್ಲಿಯೇ ಮಲಗಿದ್ದ ಸುಹಾಸ್​ನನ್ನು ಮುತ್ತುವರೆದಿದ್ದರು ಸ್ನೇಹಿತರು. ಅವರೆಲ್ಲರಿಂದಲೂ ಫ್ರೆಂಡ್​ಷಿಪ್​ ಬೆಲ್ಟ್​ ಕಟ್ಟಿಸಿಕೊಂಡಿದ್ದ ಸುಹಾಸ್​. ಸ್ನೇಹಿತ ಸುಹಾಸ್​ನ ಪರಸ್ಥಿತಿ ಕಂಡು ಕಣ್ಣೀರು ಹಾಕುತ್ತಾ ಫ್ರೆಂಡ್​ಶಿಪ್​ ಬೆಲ್ಟ್ ಕಟ್ಟಿದ್ದರು ಸ್ನೇಹಿತರು. ಓದಿನಲ್ಲಿ ಟಾಪರ್ ಆಗಿದ್ದ ಸುಹಾಸ್, ಶಾಲೆಯಲ್ಲಿ ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ. ಸುಹಾಸ್​ಗೆ ಫ್ರೆಂಡಶಿಪ್ ಬೆಲ್ಟ್ ಕಟ್ಟುವ ಮೂಲಕ ಅಂತಿಮ ವಿದಾಯ ಹೇಳಿದರು ಸ್ನೇಹಿತರು. 

 
 
 
 
 
 
 
 
 
 
 

Leave a Reply