|| ಕಾರ್ತಿಕದ ‘ದೀಪಾರಾಧನೆ’ ಮುಗಿತಾಯ||~ • ಕೆ.ಎಲ್.ಕುಂಡಂತಾಯ.

“ದೀಪಜ್ಯೋತಿಃ ಪರಂ ಬ್ರಹ್ಮ ದೀಪಜ್ಯೋತೀ ತಮೋಪಹಃ ದೀಪೇನ ಸಾಧ್ಯತೇ ಸರ್ವಂ ಸಂಧ್ಯಾದೀಪ ನಮೋಸ್ತುತೆ” ‌ ಹೀಗೆಂದು ದೀಪವನ್ನು ಸ್ತುತಿಸುತ್ತಾ…

ಬೆಳಕಿನ ತಿಂಗಳು ಕಾರ್ತಿಕಮಾಸದ ಅಂತ್ಯದ ಅಮಾವಾಸ್ಯೆಯಂದು ತಿಂಗಳು ಪೂರ್ತಿ ನೆರವೇರಿದ ದೀಪಾರಾಧನೆಯ ಸರ್ವ ಯಶಸ್ಸು ಮನುಕುಲಕ್ಕೆ ಪ್ರಾಪ್ತಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.
ಶರತ್ಕಾಲ‌ದಲ್ಲಿ ( ಶರದೃತು) ವಿಶ್ವಕ್ಕೆ ಮಂಗಳವಾದುದರ ಬಗ್ಗೆ ಪುರಾಣಗಳು ಉಲ್ಲೇಖಿಸುತ್ತವೆ. ಮಹಿಷಾಸುರ ,ನರಕ ದೈತ್ಯರೇ ಮುಂತಾದವರ ವಧೆಯಾಗಿ ಶಾಂತಿ ಸ್ಥಾಪನೆಯಾಗಿದೆ. ಕತ್ತಲಲ್ಲಿದ್ದವರು ಬೆಳಕಿಗೆ ಬಂದಕಾಲ. ಸ್ತ್ರೀಯರ ಬಂಧಮುಕ್ತಿ – ರಕ್ಷಣೆಯಾದ ಕಾಲ. ಈ ಸಂದರ್ಭವನ್ನು ಬೆಳಕು ಹಚ್ಚಿ ಸಂಭ್ರಮಿಸಿದ ಕಾಲ.ಇದೇ ವೇಳೆ
‘ಉತ್ಥಾನ ದ್ವಾದಶಿ’ಯಂತಹ ಶ್ರೀಮನ್ನಾರಾಯಣನು ನಿದ್ದೆ ಮುಗಿಸಿ ಎದ್ದ ಪುಣ್ಯಕಾಲವೂ ಒದಗಿಬರುತ್ತದೆ.

ಶರನ್ನವರಾತ್ರಿ, ದೀಪಾವಳಿ‌, ಉತ್ಥಾನ ದ್ವಾದಶಿ, ಕಾರ್ತಿಕ ಸೋಮವಾರಗಳೇ ಮುಂತಾದ ಪರ್ವಗಳು ಸನ್ನಿಹಿತವಾಗುವುದು ಆಶ್ವಯುಜ ಮತ್ತು ಕಾರ್ತಿಕಮಾಸಗಳನ್ನು ಒಳಗೊಂಡ ‘ಶರದೃತು’ವಿನಲ್ಲಿ.ಮುಂದೆ ಹೇಮಂತ ಋತು. {‘ಕಾರ್ತಿ’ ಅಂದರೆ ಆರ್ತಿ=ದುಃಖ. ದುಃಖನಾಶವಾದಾಗ ಕಾರ್ತಿಕ. ಅಲ್ಲದೆ ಬೆಳೆ ಬೆಳೆದು ಧಾನ್ಯತುಂಬಿ ಮನೆ – ಮನಸ್ಸುಗಳು ಸಂಭ್ರಮಿಸಿದಾಗ ದೀಪವನ್ನೇ ಹಚ್ಚುವುದು ಸಂಪ್ರದಾಯ.}

ಮನೆಗಳಲ್ಲಿ, ಆರಾಧನಾ ಸ್ಥಾನಗಳಲ್ಲಿ, ಮಠ – ಮಂದಿರಗಳಲ್ಲಿ, ದೇವಾಲಯಗಳಲ್ಲಿ ದೀಪವೇ ಪ್ರಧಾನವಾಗಿರುವ ‘ದೀಪೋತ್ಸವ’ ನೆರವೇರುವ, ಎಲ್ಲೆಡೆ ದೀಪವೇ ವಿಜೃಂಭಿಸುವ ದೀಪದ ತಿಂಗಳು ಕಾರ್ತಿಕ. ಈ ತಿಂಗಳಲ್ಲಿ ಹಚ್ಚುವ ದೀಪಗಳು ಒಂದಲ್ಲ, ಎರಡಲ್ಲ ಹತ್ತಲ್ಲ, ಸಾವಿರವಲ್ಲ, ಅದು ಲಕ್ಷ ಸಂಖ್ಯೆಯಲ್ಲಿ. ಆದುದರಿಂದಲೇ “ಲಕ್ಷದೀಪೋತ್ಸವ “. ಲಕ್ಷ್ಯವನ್ನು ಬೆಳಗುವ ದೀಪಗಳು ನಿಸರ್ಗಕ್ಕೆ ನೀರಾಜನವಾಗುತ್ತವೆ. ಪ್ರಕೃತಿಮಾತೆ ಮತ್ತೆ ಫಲವತಿಯಾಗಲು. ಸಸ್ಯಶ್ಯಾಮಲೆಯಾಗಲು ಸಜ್ಜಾಗುವ ಪರ್ವ. 

ಸರ್ವ ದೈವ – ದೇವರಿಗೆ ನಿತ್ಯ ದೀಪಹಚ್ಚುವ ನಾವು ಕಾರ್ತಿಕದಲ್ಲಿ ‘ದೀಪದ ಉತ್ಸವ’, ‘ತುಡರಬಲಿ’ನಡೆಸಿ ಸಂತೋಷಪಡುತ್ತೇವೆ. ದೀಪವು ಲೌಕಿಕ – ಅಲೌಕಿಕಗಳನ್ನು ಬೆಸೆಯುತ್ತಾ ಭವ್ಯದಲ್ಲಿ ದಿವ್ಯವನ್ನು ಸೃಷ್ಟಿಸುತ್ತದೆ. ಅಂಧಕಾರದಲ್ಲಿ ಅಸಂಖ್ಯ ದೀಪಗಳ ಪ್ರಜ್ವಲನೆ, ಗಗನದ ತಾರೆಗಳು ಭುವಿಗಿಳಿದು ಭವವೆಲ್ಲ ಬೆಳ್ಳಂಬೆಳಗು. ಈ ಪರ್ವ‌ ಭಗವಂತನ ಹಲವು ಆರಾಧನೆಗಳಲ್ಲಿ ಒಂದು ಪರ್ವ; ದೀಪದ ಪರ್ವ.ಈ ಪರ್ವ ಒದಗಿಬರುವ ಮಾಸವೇ ಕಾರ್ತಿಕ ಮಾಸ .

ಎಲ್ಲೂರಿನ ಲಕ್ಷದೀಪೋತ್ಸವ : ಶಿಷ್ಟ ಸಂಪ್ರದಾಯ, ನಡೆದು ಬಂದ ಪದ್ಧತಿ, ನಡವಳಿಕೆ,ಕ್ರ ಮಬದ್ಧತೆಗಳೇ ಪ್ರಧಾನವಾಗಿದ್ದು, “ಸೀಯಾಳ ಅಭಿಷೇಕ”ದ ಸೇವೆಯಿಂದ ಪ್ರಸಿದ್ಧವಾದ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಳವು 900 – 1000 ವರ್ಷ ಪುರಾತನ ಸೀಮೆಯ ದೇವಾಲಯ. “ಎಲ್ಲೂರು ಕುಂದ ಹೆಗ್ಗಡೆ”
ಎಂದೇ ತುಳುನಾಡಿನ ಇತಿಹಾಸದಲ್ಲಿ ಪ್ರಸಿದ್ಧನಾದ ಕುಂದ ಕುಲ ಸಂಜಾತನಾದ ರಾಜನೊಬ್ಬನು ನಿರ್ಮಿಸಿದ ಪ್ರತಿಷ್ಠೆಯ ದೇವಾಲಯ ಇದು.

ಇಲ್ಲಿ ನೆರವೇರುವ ಪ್ರತಿಯೊಂದು ಪರ್ವಗಳಿಗೆ, ಆಚರಣೆಗಳಿಗೆ, ಉತ್ಸವಾದಿ ಗಳಿಗೆ ಅವುಗಳದ್ದೇ ಆದ ಹಿನ್ನೆಲೆಗಳಿವೆ, ನಿಯಮ ನಿಬಂಧನೆಗಳಿವೆ. ಕಾರ್ತಿಕ ಮಾಸದ ಸೋಮವಾರಗಳು ಮತ್ತು ಕಾರ್ತಿಕದ ಕೊನೆಯ ದಿನವಾದ ಅಮಾವಾಸ್ಯೆಯಂದು ಪೂರ್ಣಗೊಳ್ಳುವ ‘ಲಕ್ಷದೀಪೋತ್ಸವ’ ಧಾರ್ಮಿಕ – ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ,ಅಸಾಮಾನ್ಯ‌ ಲಕ್ಷಣವುಳ್ಳದ್ದಾಗಿದೆ .

“ಉಮಯಾ ಸಹವರ್ತತೇ ಇತಿ ಸೋಮಃ‌” ವಾರಕ್ಕೊಮ್ಮೆ ಬರುವ ಸೋಮವಾರವೂ ಶಿವನ ಆರಾಧಕರಿಗೆ ಹಬ್ಬದ ದಿನವೇ .”ಉಮಯಾ ಸಹವರ್ತತೇ ಇತಿ ಸೋಮಃ‌” ಉಮೆಯೊಂದಿಗೆ ಈಶ್ವರನು‌ ಸೇರಿದಾಗ ‘ಸೋಮ’ನೆಂದು ಕರೆಯಲ್ಪಡುತ್ತಾನೆ. ಉಮೆಯೊಂದಿಗೆ ಆತನು ವಿಹರಿಸುವ, ಅವನಿಗೆ ಪ್ರಿಯವೆನಿಸಿದ ಸೋಮವಾರದಂದು ನಡೆಸುವ ಉಪವಾಸ, ಪೂಜೆ , ಅಭಿಷೇಕ‌ ಇತ್ಯಾದಿಗಳು ಅವನನ್ನು ಪ್ರಸನ್ನಗೊಳಿಸುತ್ತವೆ.

ಸೋಮವಾರ ಅಥವಾ ಶನಿವಾರ ದಿನಗಳಂದು ತ್ರಯೋದಶಿ ತಿಥಿ ಕೂಡಿ ಬಂದರೆ ಅದು ‘ಪ್ರದೋಷ’. ಈ ಪವಿತ್ರ ಮುಹೂರ್ತದಲ್ಲಿ ವಿಶ್ವೇಶ್ವರನನ್ನು ಆರಾಧಿಸಿದರೆ ಮಹಾದೇವನು ಶೀಘ್ರ ಅನುಗ್ರಹಿಸುತ್ತಾನೆ. ಕಾರ್ತಿಕ ಮಾಸದಲ್ಲಿ‌ ಬರುವ ಎಲ್ಲಾ ಸೋಮವಾರಗಳು ವಿಶ್ವನಾಥನ‌ ಆರಾಧನೆಯಿಂದ ಸಂತೃಪ್ತಿ ಪಡೆಯಲು‌ ಬಯಸುವ ಭಕ್ತರ ಪಾಲಿಗೆ ಅತ್ಯುತ್ಕ್ರಷ್ಟವೆಂದು‌ ವೇದಗಳು ಹೇಳಿವೆ. ಕಾರ್ತಿಕ ಸೋಮವಾರಗಳಲ್ಲಿ‌ ಶತರುದ್ರಾಭಿಷೇಕ, ದೀಪೋತ್ಸವ, ಲಕ್ಷ ಬಿಲ್ವಾರ್ಚನೆಗಳಿಂದ ಶಿವಾರಾಧನೆ ಮಾಡುವುದು ಶ್ರೇಯಸ್ಕರವೆನಿಸಿದೆ.

‘ಲಕ್ಷದೀಪೋತ್ಸವ’ ಎಲ್ಲೂರಿನಲ್ಲಿ ಪ್ರಸಿದ್ಧವಾದ ಜಾತ್ರೆ. ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ತುಳಸಿಪೂಜೆ, ದೊಡ್ಡರಂಗಪೂಜೆ ನೆರವೇರಿ ಬೆಳಗಿನಜಾವ ಸುಮಾರು ನಾಲ್ಕು ಗಂಟೆಗೆ ದೀಪಾರಾಧನೆ, ದೀಪೋತ್ಸವದ ಬಲಿ ಹೊರಡುತ್ತದೆ. ಕಾರ್ತಿಕ ಮಾಸದ ಅಮಾವಾಸ್ಯೆ ಕಳೆದು ಮಾರ್ಗಶಿರ ಮಾಸದ ಶುದ್ಧ ಪಾಡ್ಯದ ಸೂರ್ಯೋದಯಕ್ಕೆ ಎಲ್ಲೂರು ದೀಪೋತ್ಸವವು ಸಮಾಪನಗೊಳ್ಳುತ್ತದೆ .

‘ದೀಪಪ್ರಭೆ’ ಸೂರ್ಯಕಿರಣದಲ್ಲಿ‌ ಐಕ್ಯ ಈಗ ಎಲ್ಲೂರು ದೇವರನ್ನು ಮುಟ್ಟಿ ,ತಮ್ಮ ಪರಂಪರೆಯ ತಂತ್ರ ನಿರ್ವಹಿಸುತ್ತಿರುವ ಎಲ್ಲೂರು ಸೀಮೆಯ ಒಂಬತ್ತುಮಂದಿ ತಂತ್ರಿಗಳ ಹಿಂದಿನ‌‌ ತಲೆಮಾರಿನ ಉಭಯ ಜಿಲ್ಲೆಗಳಲ್ಲಿ ಪ್ರಸಿದ್ಧರಾಗಿದ್ದ ಹಿರಿಯ ತಂತ್ರಾಗಮ ತಜ್ಞರಲ್ಲಿ ಸುಮಾರು ನಲ್ವವತ್ತು‌ ವರ್ಷಗಳಷ್ಟು ಹಿಂದೆಯೇ ಈ ಲೇಖಕ‌ “ನಮ್ಮಲ್ಲಿ ಯಾಕೆ ಬೆಳಗಿನ ಜಾವ ಲಕ್ಷದೀಪೋತ್ಸವ” ಎಂಬ ಪ್ರಶ್ನೆಯನ್ನು‌ ಕೇಳಿದ್ದು ; ಆಕಾಲದ ವಿದ್ವಾಂಸರು ವಿವರಿಸಿದ್ದ ಉತ್ತರ ಹೀಗಿದೆ: “ವಿಶ್ವೇಶ್ವರನ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ನಿರಂತರ ದೀಪಾ ರಾಧನೆಯ ದೀಪದ ಜ್ಯೋತಿಯು (ಪ್ರಕಾಶ, ಕಾಂತಿ)ಮಧ್ಯರಾತ್ರಿ ಕಾಲದಲ್ಲಿ ಅಥವಾ ಕತ್ತಲಲ್ಲಿ ಕರಗಿ ಹೋಗಬಾರದು.

ಬೆಳಗಿನಜಾವ ಉತ್ಸವಬಲಿ ಹೊರಟಾಗ ದೇವಳದ ಒಳ, ಹೊರ ಅಂಗಣಗಳಲ್ಲಿ ದಳಿ ಅಳವಡಿಸಿ ಹಣತೆಗಳಲ್ಲಿ ಬೆಳಗುವ ಬಹುಸಂಖ್ಯೆಯ ದೀಪಗಳು ಉರಿಯುತ್ತಿರುವಂತೆ ಉತ್ಸವ ಮುಗಿಯುತ್ತದೆ, ಆಗ ಬೆಳಗಾಗುತ್ತಾ ಅರುಣೋದಯ ಅನಂತರ ಸೂರ್ಯೊದಯವಾಗುತ್ತದೆ. ದೇವಳದ ಸುತ್ತಲೂ ಬೆಳಗಿದ ದೀಪಗಳು ನಂದಿ ಹೋಗಲು(ಆರಿಹೋಗಲು) ಆರಂಭವಾಗುತ್ತವೆ, ಹೀಗೆ ನಂದಿಹೋಗುವ ದೀಪದ ‘ಪವಿತ್ರ ಜ್ಯೋತಿಯು’ ಸೂರ್ಯಕಿರಣದೊಂದಿಗೆ ಐಕ್ಯವಾಗುತ್ತದೆ. ಆಗ ಬೆಳಗಾಗುತ್ತದೆ. ಅಂದರೆ ದೀಪ – ಜ್ಯೋತಿ ಆರಿಹೋಗದೆ ಸೂರ್ಯ ಪ್ರಭೆಯೊಂದಿಗೆ ನಿರಂತರ ಬೆಳಗುತ್ತಿರುತ್ತವೆ ” ಎಂಬ ಧಾರ್ಮಿಕ – ಸಾಂಸ್ಕೃತಿಕ ವಸ್ತು ಸ್ಥಿತಿಯ ವಿವರಣೆ ನೀಡಿದ್ದರು.

ಕನಿಷ್ಠ ನೂರು ವರ್ಷಗಳಿಂದ ಲಕ್ಷದೀಪೋತ್ಸವ, ಆಯನೋತ್ಸವಗಳಂದು ರಾತ್ರಿ ಯಕ್ಷಗಾನ ತಾಳಮದ್ದಳೆ – ಬಯಲಾಟಗಳು‌ ಬೆಳಗಿನ ಜಾವ ಬಲಿಹೊರಡುವವರೆಗೆ ನಡೆಯುತ್ತಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ. ಈ ಲಕ್ಷದೀಪ, ಆಯನೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅರ್ಥ ಹೇಳಿದ್ದ ಆ ಕಾಲದ ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳ ಜೀವನ ವೃತ್ತಾಂತಗಳಲ್ಲಿ‌ (ಮುದ್ರಿತ) ಉಲ್ಲೇಖಗಳು ಸಿಗುತ್ತವೆ. ಸ್ಥಳೀಯ ಉತ್ಸಾಹಿ ಯಕ್ಷಗಾನಾಸಕ್ತರು ಇದ್ದರು, ಅವರು ಅರ್ಥ ಹೇಳುತ್ತಿದ್ದ, ಹಿಮ್ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದ ಬಗ್ಗೆಯೂ ವಿವರಗಳು ಸಿಗುತ್ತವೆ.

ವ್ಯಕ್ತಿ ಜೀವನದ ಸಿದ್ಧಿ ದೃಷ್ಟಾಂತವನ್ನು ದೃಢ ಪಡಿಸಲು ‘ದೀಪ’ವು ಲಕ್ಷಣವಾದಾಗ ‘ಲಕ್ಷ್ಯ” ಸಾಧಿಸಲ್ಪಡುತ್ತದೆ. ಆಗ ಸಹಜವಾಗಿ ಅಜ್ಞಾನ, ದಾಷ್ಟ್ಯ, ದುರಹಂಕಾರ ನಾಶವಾಗಿ‌ ಸುಜ್ಞಾನ ಪ್ರಾಪ್ತಿಯಾಗುತ್ತದೆ. ಬೆಳಗಿದ ‘ದೀಪ’ ಅರ್ಥಪೂರ್ಣ ‘ಜ್ಞಾನ’ವೇ ಆಗುತ್ತದೆ. ಉದ್ದೇಶ ಸಫಲವಾಗುತ್ತದೆ. ಅಂದರೆ “ದೀಪ” ಗೆದ್ದಂತೆ. ದೀಪವು ಗೆಲ್ಲಬೇಕು ತಾನೆ ?

 
 
 
 
 
 
 
 
 
 
 

Leave a Reply