ಕತಾರ್ : ಭಾರತೀಯ ಮೂಲದ ಇಬ್ಬರು ಮಕ್ಕಳು ಸೇರಿ ಮೂವರು ಸಮುದ್ರಪಾಲು

ದೋಹ: ಕತಾರ್‌ ನ ಮರೂನಾ ಬೀಚ್ ನಲ್ಲಿ ವಾರಾಂತ್ಯದ ವಿಹಾರಕ್ಕಾಗಿ ತೆರಳಿದ ಭಾರತೀಯ ಮೂಲದ ಮೂವರು ಸಮುದ್ರಪಾಲಾದ ದುರ್ಘಟನೆ ಶುಕ್ರವಾರ ನಡೆದಿದೆ.

ನೀರುಪಾಲಾದವರು ತಮಿಳುನಾಡು ಮೂಲದ ಬಾಲಾಜಿ ಬಲಗೂರು (38),ಪುತ್ರ ರಕ್ಷಣ್ (10),ಇನ್ನೊಂದು ಕುಟುಂಬಕ್ಕೆ ಸೇರಿದ ನೆರೆಮನೆಯ ವರ್ಷಿಣಿ ವೈದ್ಯನಾಥನ್ (12) ಎಂದು ತಿಳಿದುಬಂದಿದೆ. ಎರಡು ಕುಟುಂಬಗಳು ಒಟ್ಟಾಗಿ ಬೀಚ್ ಗೆ ವಿಹಾರಕ್ಕೆಂದು ತೆರಳಿದ ವೇಳೆ ಭಾರಿ ಅಲೆ ಅಪ್ಪಳಿಸಿ ಮೂವರು ನೀರುಪಾಲಾಗಿದ್ದಾರೆ ಎಂದು ಬಾಲಾಜಿ ಅವರ ಸಂಬಂಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಾಲಾಜಿ ಮತ್ತು ವರ್ಷಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಕ್ಷಣ್ ಆಸ್ಪತ್ರೆಯಲ್ಲಿ ಮೂರು ಗಂಟೆಗಳ ನಂತರ ನಿಧನರಾಗಿದ್ದಾರೆ.

ಬಾಲಾಜಿ ಅವರು ಕುಂಭಕೋಣಂ ಜಿಲ್ಲೆಯವರಾಗಿದ್ದು, ಕೆಇಒ ಇಂಟರ್ನ್ಯಾಷನಲ್ ಕನ್ಸಲ್ಟೆಂಟ್ಸ್ ನಲ್ಲಿ ಹಿರಿಯ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ವರ್ಷಿಣಿ ಅವರ ಕುಟುಂಬ ಚೆನ್ನೈ ಮೂಲದ್ದು ಎಂದು ತಿಳಿದು ಬಂದಿದೆ. ಬಾಲಾಜಿ ಅವರ ಮಗ ರಕ್ಷನ್ ಬಿರ್ಲಾ ಪಬ್ಲಿಕ್ ಸ್ಕೂಲ್ 5 ನೇ ತರಗತಿಯ ವಿದ್ಯಾರ್ಥಿ. ವರ್ಷಿಣಿ ಡಿಪಿಎಸ್ ಮೊನಾರ್ಕ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದಳು. ಮೂವರ ಮೃತ ದೇಹಗಳನ್ನು ತರುವ ವ್ಯವಸ್ಥೆ ಮಾಡಲಾಗಿದ್ದು, ತಮಿಳುನಾಡಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

 
 
 
 
 
 
 
 
 
 
 

Leave a Reply