ಲೋಕಕ್ಕೆ ಕಂಟಕವಾದ ರೋಗವು ನಾಶವಾಗಿ ದೇಶವು ಸುಭಿಕ್ಷೆ ಯಾಗಲಿ~ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು

ಮಲ್ಪೆ: ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ಏಳು ದಿವಸಗಳ ಕಾಲ ಶಾಕಲ ಋಕ್ ಸಂಹಿತಾ ಯಾಗ ಹಾಗೂ ಭಾಗವತ ಸಪ್ತಾಹ ನಡೆಯಿತು.

ಈ ನಿಮಿತ್ತ ಕೊಡವೂರಿನ ಒಡೆಯನಾದ ಶಂಕರನಾರಾಯಣ ದೇವರ ಸನ್ನಿಧಾನದಿಂದ ವಿಪ್ರಶ್ರೀ ಸಭಾಭವನ ತುಂಬಿತ್ತು. ಯಾಕೆಂದರೆ ಭಾಗವತವನ್ನು ಶುಕಾಚಾರ್ಯರಿಗೆ ಉಪದೇಶಿಸಿದ್ದು ನಾರಾಯಣ ದೇವರು. ಅದನ್ನು ಪರೀಕ್ಷಿತ ರಾಜನಿಗೆ ಉಪದೇಶ ನೀಡಿದ ಶುಕಾಚಾರ್ಯರು ಸಾಕ್ಷಾತ್ ರುದ್ರ ದೇವರು. ಈ ಶಂಕರನಾರಾಯಣ ದೇವರ ಅನುಗ್ರಹದಿಂದ ಲೋಕಕ್ಕೆ ಕಂಟಕವಾದ ರೋಗವು ನಾಶವಾಗಿ ದೇಶವು ಸುಭಿಕ್ಷೆ ಯಾಗಲಿ ಎಂದು ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.

ಶ್ರೀಗಳು ಕೊಡವೂರು ಬ್ರಾಹ್ಮಣ ಮಹಾಸಭಾದ ರಜತೋತ್ಸವದ ಪ್ರಯುಕ್ತ ಹಮ್ಮಿಕೊಂಡ ಋಕ್ ಸಂಹಿತಾ ಯಾಗ ಹಾಗೂ ಭಾವವತ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು.

ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಂಡ ಯಾಗದ ಪ್ರಯುಕ್ತ ಕೊಡವೂರಿನ ಸುತ್ತ ಮುತ್ತಲಿನ ಹಿಂದು ಸಮಾಜದ ವಿವಿಧ ವರ್ಗಗಳ ಹಿರಿಯರು, ಸಾಧಕರು ಹಾಗೂ ತಮ್ಮ ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಿರುವ 11 ಮಂದಿ ಮಹನೀಯರಾದ ವಿಶ್ವನಾಥ ಶೆಣೈ ಮಲ್ಪೆ, ಕಾಳು ಸೇರಿಗಾರ ಕೊಡವೂರು, ಶಿವಪ್ಪ ಕಾಂಚನ್ ಕೊಡವೂರು, ಕರುಣಾಕರ ಶೆಟ್ಟಿಗಾರ್ ಉದ್ದಿನಹಿತ್ಲು, ಹರೀಶ್ ಪೂಜಾರಿ ಕೊಡವೂರು, ಅಣ್ಣಪ್ಪ ಶೆಟ್ಟಿ ಜುಮಾದಿ ನಗರ, ಶಂಕರ ಗಾಣಿಗ, ರತ್ನಾಕರ ಆಚಾರ್ಯ, ಬೇಬಿ ಅಮೀನ್, ಶೇಖರ ಮೂಡುಬೆಟ್ಟು, ಹಾಗೂ ವಾಮನ ಇವರಿಗೆ ಸ್ವಾಮಿಗಳು ಫಲ ಮಂತ್ರಾಕ್ಷತೆ ನೀಡಿ ಸನ್ಮಾನಿಸಿದರು.

ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಸ್ವಾಮಿಗಳು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದರು. ಡಾ.ವಿಜಯ ಬಲ್ಲಾಳ್, ಧರ್ಮದರ್ಶಿ, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನ, ಶ್ರೀ ಮಂಜುನಾಥ ಉಪಾಧ್ಯ, ಪರ್ಕಳ, ಅಧ್ಯಕ್ಷರು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ನಾರಾಯಣ ಬಲ್ಲಾಳ್, ಅಧ್ಯಕ್ಷರು, ಕೊಡವೂರು ಬ್ರಾಹ್ಮಣ ಮಹಾಸಭಾ ಹಾಗೂ ಮಂಜುನಾಥ ಭಟ್, ಕಾರ್ಯಾಧ್ಯಕ್ಷರು, ರಜತೋತ್ಸವ ಸಮಿತಿ ಉಪಸ್ಥಿತರಿದ್ದರು.  

ಯಾಗದ ಸಂಪೂರ್ಣ ಹೊಣೆ ಹೊತ್ತು ವ್ಯವಸ್ಥೆ ಮಾಡಿದ ಸಂಸ್ಥೆಯ ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಭಟ್ ರನ್ನು ಗುರುತಿಸಿ ಅಭಿನಂದಿಸಲಾಯಿತು. 

ಡಾ.ಶ್ರೀಕಾಂತ ಆಚಾರ್ಯ, ಬೆಂಗಳೂರು ಸ್ವಾಗತಿಸಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಸುಧೀರ್ ರಾವ್ ಸನ್ಮಾನಿತರ ಪರಿಚಯ ಮಾಡಿದರು ಹಾಗೂ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ್ ರಾವ್ ವಂದಿಸಿದರು.

 
 
 
 
 
 
 
 
 
 
 

Leave a Reply