ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಖಂಡನೀಯ~ ನಾಡೋಜ ಡಾ|ಮಹೇಶ ಜೋಷಿ

ಉಡುಪಿ: ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ನಡೆಸಿದ ಪುಂಡಾಟ ಕೃತ್ಯ ನಿಜಕ್ಕೂ ದುರದೃಷ್ಟಕರ. ಈ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ| ಮಹೇಶ ಜೋಷಿ ಹೇಳಿದರು. ಸೋಮವಾರ ಇಲ್ಲಿಗಾಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೂರ್ತಿಗಳು ನಮ್ಮ ಅಸ್ಮಿತೆಯ ಪ್ರತೀಕ. ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಆತ ಕಿತ್ತೂರು ರಾಣಿಯ ಬಲಗೈ ಬಂಟನಾಗಿದ್ದ. ಸಂಗೊಳ್ಳಿ ರಾಯಣ್ಣ ಕನ್ನಡ ಆಸ್ಮಿತೆಯನ್ನು ಪ್ರತಿನಿಧಿಸುತ್ತಾನೆ ಎಂದರು. ಛತ್ರಪತಿ ಶಿವಾಜಿ ಮಹಾರಾಜರು ಕೇವಳ ಮರಾಠಿಗರಿಗೆ ಮಾತ್ರ ಸೀಮಿತರಲ್ಲ. ಅವರೂ ಮಹಾನ್ ರಾಷ್ಟ್ರ ಭಕ್ತ ಎಂದರು.

ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡಿರುವುದು ಅಕ್ಷಮ್ಯ ಅಪರಾಧ. ಅವರು ಯಾರೇ ಆಗಲಿ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಜೋಷಿ ಪ್ರತಿಪಾದಿಸಿದರು. ಎಂಇಎಸ್.ನವರು ಎರಡು ಸಲ ಈ ಥರ ಗಲಾಟೆ ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡ ರಾಜ್ಯೋತ್ಸವ ಮತ್ತು ಇದೀಗ ಅಧಿವೇಶನದ ವೇಳೆ ಗಲಾಟೆ ಮಾಡಿದ್ದಾರೆ. ಸರ್ಕಾರ ಇನ್ನು ಮುಂದೆ ಅವರ ವಿರುದ್ಧ ಕಠಿಣವಾದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜೋಷಿ ಒತ್ತಾಯಿಸಿದರು.

ಸಂಘರ್ಷದ ಹಾದಿಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಮನ್ವಯತೆ ಬರಬೇಕು, ಭಾವನಾತ್ಮಕವಾಗಿ ಎರಡೂ ಕಡೆ ನಂಬಿಕೆ ಬೆಳೆಯಬೇಕು. ನಾನು ಸದ್ಯದಲ್ಲಿಯೇ ಬೆಳಗಾವಿಗೆ ಹೋಗುತ್ತೆನೆ. ಸಮನ್ವಯತೆಗಾಗಿ ಈ ನಿಟ್ಟಿನಲ್ಲಿ ನಾವೂ ಪ್ರಯತ್ನ ಮಾಡುತ್ತೇವೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಮತ್ತು ಮರಾಠಿ ಭಾಷೆ ತಿಳಿದಿರುವ ಸಮಿತಿ ರಚನೆ ಮಾಡುತ್ತೇವೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ಕಡೆಯಲ್ಲಿ ಸೇವೆ ಸಲ್ಲಿಸಿರುವವರ ಸಮಿತಿ ರಚಿಸಿ, ಎರಡು ಕಡೆಯಲ್ಲೂ ಅವರ ಮಾತಿಗೆ ಬೆಲೆ ಇರುವ ಹಿರಿಯರನ್ನು ಸೇರಿಸಿ ಸಮಿತಿ ರಚನೆ ಮಾಡುವುದಾಗಿ ತಿಳಿಸಿದ ಅವರು, ನ್ಯಾಯ ಮೂರ್ತಿ ಬನ್ನೂರು ಮಠ ಸೇರಿದಂತೆ ಹಿರಿಯರನ್ನು ಸೇರಿಸಿ ಸಮಿತಿ ರಚಿಸಲು ಚಿಂತಿಸಲಾಗಿದೆ. ಎರಡೂ ಕಡೆ ಯವರನ್ನು ಸೇರಿಸಿ ಮಾತುಕತೆ ನಡೆಸುತ್ತೇವೆ ಎಂದರು.

ಇಲ್ಲಿಯವರೆಗೆ ಪುಂಡಾಟ ಮಾಡಿರುವಂಥದ್ದು ಅಕ್ಷಮ್ಯ ಅಪರಾಧ. ಮುಂದೆ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಸರ್ಕಾರದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ ಕೈಜೋಡಿಸುತ್ತದೆ. ಆ ಮೂಲಕ ಸರಕಾರದ ಕೈ ಬಲಪಡಿಸುವ ಕಾರ್ಯ ಮಾಡಲಾಗುತ್ತದೆ. ಸರ್ಕಾರ ಮೌನ ವಹಿಸಬಾರದು.  ಜವಾಬ್ದಾರಿ ಯುತವಾಗಿ ವರ್ತಿಸಬೇಕು.

ಸಮಸ್ಯೆ, ಪರಿಹಾರ ಇದ್ದೇ ಇದೆ. ಸಮಸ್ಯೆ ಪರಿಹಾರವಾಗಬೇಕಾದರೆ ಚಟುವಟಿಕೆಯಿಂದ ಕೂಡಿದ ಸರಕಾರ ಇರಬೇಕು. ಸರಕಾರದ ಮೌನವನ್ನು ಸಹಿಸಲಾಗದು. ಸಮಸ್ಯೆ ಉಂಟಾದ ಸಂದರ್ಭ ಸಮಸ್ಯೆ ಬಗೆಹರಿಸಬೇಕು. ಕಬ್ಬಿಣ ಕಾದಿರುವಾಗಲೇ ಹೊಡೆಯುವ ಕೆಲಸ ಅಗಬೇಕು ಎಂದು ಸಲಹೆ ನೀಡಿದರು.

ಕನ್ನಡ, ಕನ್ನಡಿಗರು, ಕರ್ನಾಟಕಕ್ಕೆ ಯಾವುದೇ ರೀತಿಯ ಧಕ್ಕೆಯಾದರೂ ಕನ್ನಡ ಸಾಹಿತ್ಯ ಪರಿಷತ್ ಬೀದಿಗಿಳಿದು ಹೋರಾಟ ನಡೆಸುತ್ತದೆ ಎಂದು ಮಹೇಶ ಜೋಷಿ ಭರವಸೆ ನೀಡಿದರು 

 
 
 
 
 
 
 
 
 
 
 

Leave a Reply