ಇಂದು ಸಂಜೆಯೇ ಕಸಾಪ ಜಿಲ್ಲಾ ಅಧ್ಯಕ್ಷರ ಆಯ್ಕೆ ಘೋಷಣೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಅವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ವಿಸ್ತರಿಸಿದ ನಂತರ ಇದೇ ಮೊದಲ ಬಾರಿಗೆ ಭಾನುವಾರ (ನ.21)ಚುನಾವಣೆ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ 21 ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. 
ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಚುನಾವಣೆ ಅನೇಕ ಅಡೆತಡೆಗಳ ನಂತರ ನಡೆಯುತ್ತಿದೆ. ಈ ಬಾರಿ ಆಯ್ಕೆಯಾಗುವ ಕಾರ್ಯಕಾರಿ ಸಮಿತಿ ಐದು ವರ್ಷದ ಸುದೀರ್ಘ ಅವಧಿಗೆ ಕೆಲಸ ಮಾಡುವ ಅವಕಾಶ ಪಡೆಯುವುದರಿಂದ ತುಸು ಹೆಚ್ಚು ಬಿರುಸಿನಿಂದ ಪ್ರಚಾರ ನಡೆದಿದೆ.  

ರಾಜ್ಯಾದ್ಯಂತ 3.10 ಲಕ್ಷ ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಕೇಂದ್ರ ಪರಿಷತ್ತಿನ ಅಧ್ಯಕ್ಷರು, 30 ಜಿಲ್ಲಾ ಅಧ್ಯಕ್ಷರು ಹಾಗೂ 5 ಗಡಿ ರಾಜ್ಯಗಳ ಅಧ್ಯಕ್ಷರು ಸೇರಿ 36 ಜನರನ್ನು ಆಯ್ಕೆಯಾಗಲಿದ್ದಾರೆ. ಈ ಪೈಕಿ ಜಿಲ್ಲಾ ಅಧ್ಯಕ್ಷರು ಹಾಗೂ ಗಡಿನಾಡ ಘಟಕಗಳ ಅಧ್ಯಕ್ಷರನ್ನು ಆಯಾ ಕ್ಷೇತ್ರದ ಮತದಾರರು ಆಯ್ಕೆ ಮಾಡಿದರೆ, ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ಎಲ್ಲರೂ ಮತದಾನ ಮಾಡಲಿದ್ದಾರೆ.

ಜಿಲ್ಲಾಧ್ಯಕ್ಷರ ಚುನಾವಣೆ ಮತಪತ್ರವು ಗುಲಾಬಿ(ಪಿಂಕ್) ಬಣ್ಣದಲ್ಲಿ ಹಾಗೂ ಕೇಂದ್ರ ಅಧ್ಯಕ್ಷರ ಆಯ್ಕೆ ಮತಪತ್ರವು ಬಿಳಿ ಬಣ್ಣದಲ್ಲಿರುತ್ತದೆ. ಮತಪತ್ರದಲ್ಲಿ ಈ ಬಾರಿ ಅಭ್ಯರ್ಥಿಯ ಹೆಸರಿನ ಜತೆ ಭಾವಚಿತ್ರವನ್ನೂ ನೀಡಲಾಗಿದೆ. ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಯಾವುದೇ ಬಿಡುವಿಲ್ಲದೆ ಮತದಾನ ನಡೆಯಲಿದೆ. 
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಪ್ರತ್ಯೇಕ ಮತಪತ್ರ ಹಾಗೂ ಪ್ರತ್ಯೇಕ ಮತಪೆಟ್ಟಿಗೆ ಇರಲಿದೆ ಎಂದು ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ. ಕಸಾಪ ಚುನಾವಣೆಯಲ್ಲಿ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ.
ಅಲ್ಲದೆ ಇತ್ತೀಚೆಗೆ ಬೇರೆ ಯಾವುದಾದರೂ ಚುನಾವಣೆಯಲ್ಲಿ ಅದೇ ಬೆರಳಿಗೆ ಶಾಯಿ ಹಾಕಿದ್ದರೆ ಅದರ ಪಕ್ಕದ ಬೆರಳಿಗೆ ಶಾಯಿ ಗುರುತು ಹಾಕಬೇಕು ಎಂದು ತಿಳಿಸಲಾಗಿದೆ. 
ಜಿಲ್ಲಾ ಅಧ್ಯಕ್ಷರ ಆಯ್ಕೆಯನ್ನು ಅಂದು ಸಂಜೆ ಮತಪತ್ರಗಳ ಎಣಿಕೆ ನಂತರ ಘೋಷಣೆ ಮಾಡಲಾಗುತ್ತದೆ. ಕೇಂದ್ರ ಅಧ್ಯಕ್ಷರ ಆಯ್ಕೆಯನ್ನು ನ.24ರಂದು ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
 
 
 
 
 
 
 
 
 

Leave a Reply