ರಾಜ್ಯದಲ್ಲಿ 3986 ಕೋಟಿ ರೂ. ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು: ಸಚಿವ ಮಾಧುಸ್ವಾಮಿ

ಉಡುಪಿ : ರಾಜ್ಯಾದ್ಯಂತ ಅಂರ್ತಜಲವನ್ನು ಹೆಚ್ಚಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿ, ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡಿ, ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದರು.

ಅವರು ಮಂಗಳವಾರ ಬೈಂದೂರಿನ ಪಡುವರಿಯಲ್ಲಿ 35 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಿಂಡಿ
ಅಣೆಕಟ್ಟು ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರು ಉದ್ದೇಶಕ್ಕಾಗಿ 3986 ಕೋಟಿ ರೂ ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಮಾಸ್ಟರ್ ಪ್ಲಾನ್ ಯೋಜನೆಯನ್ನು ರೂಪಿಸಿದ್ದು, ದಕ್ಷಿಣ ಕನ್ನಡದಲ್ಲಿ 446, ಉಡುಪಿಯಲ್ಲಿ 424 ಉಡುಪಿಯಲ್ಲಿ, 466 ಕಿಂಡಿ ಅಣೆಕಟ್ಟು ಕಾಮಗಾರಿಗಳನ್ನು 5 ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಕಿಂಡಿ ಅಣೆಕಟ್ಟು ಮೂಲಕ ನೀರನ್ನು ಸಂಗ್ರಹಿಸಿ, ಕುಡಿಯುವ ನೀರಿನ ಬಳಕೆಗೆ ಮತ್ತು ರೈತರಿಗೆ ಕೃಷಿ ಬಳಕೆಗೆ
ಬಳಸಲಾಗುವುದು ಎಂದ ಅವರು, ಕಿಂಡಿ ಆಣೆಕಟ್ಟುಗಳ ಹಲಗೆಗಳ ನಿರ್ವಹಣೆಗೆ 4 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಸಂಗ್ರಹಗೊಳ್ಳುವ ನೀರಿನಲ್ಲಿ ಮೀನುಗಾರಿಕೆ ಸೇರಿದಂತೆ ಸೀಗಡಿ ಕೃಷಿಯನ್ನು
ಕೈಗೊಳ್ಳಲು ಈ ಭಾಗದ ಜನರಿಗೆ ಅನುಕೂಲವಾಗಲಿದೆ.

ಬಯಲುಸೀಮೆಯ ಪ್ರದೇಶಕ್ಕೆ ನೀರನ್ನು ಒದಗಿಸುವ ಉದ್ದೇಶದಿಂದ 24 ಸಾವಿರ ಕೋಟಿ ವ್ಯಯಿಸಿ ಎತ್ತಿನ ಹೊಳೆ ಯೋಜನೆಯಡಿ 24 ಟಿಎಂಸಿ ನೀರನ್ನು ಕೊಂಡೊಯ್ಯಲು ಕಾಮಗಾರಿ ಕೈಗೊಳ್ಳಲಾಗುತ್ತಿದೆ ಆದರೆ ಕರಾವಳಿ ಭಾಗದಲ್ಲಿ 1 ಅಥವಾ 2 ಕೋಟಿ ರೂ ವೆಚ್ದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ 1 ರಿಂದ 2 ಟಿಎಂಸಿ ನೀರು ನಿಂತು, ಈ ಭಾಗದ ಜನರಿಗೆ ಕುಡಿಯುವ ನೀರು , ಕೃಷಿಗೆ ಅನುಕೂಲವಾಗುವುದರ ಜೊತೆಗೆ ಜನರು ಸೇತುವೆಯ ಬಳಕೆಯಾಗಿ ಸುತ್ತುವರಿದು ಸಂಚರಿಸುವುದು ತಪ್ಪುತ್ತದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜಲಜೀವನ್ ಮಿಷನ್ ಯೋಜನಯಡಿ ಬೈಂದೂರು ತಾಲೂಕಿನ ಪ್ರತೀ ಮನೆಗೆ ಕುಡಿಯುವ ನೀರು ನೀಡುವ ಉದ್ದೇಶ ಹೊಂದಲಾಗಿದೆ, ಈ ಭಾಗದಲ್ಲಿ ಪ್ರವಾಸೋದ್ಯಮವನ್ನು
ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗುವುದು ಮತ್ತು ಬೈಂದೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಕ್ರಮ
ಕೈಗೊಳ್ಳಲಾಗುವುದು ಎಂದರು.

ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಬೈಂದೂರು ತಾಲೂಕಿನಲ್ಲಿ 5 ನದಿಗಳು ಹರಿದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ, ಇದನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ, ಸುಮಾರು 50 ವರ್ಷಗಳ ಬೇಡಿಕೆಯಾದ ಈ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಸ್ಥಳೀಯ ಜಿಲ್ಲಾ
ಪಂಚಾಯತ್ ಸದಸ್ಯರುಗಳಾದ ಬಾಬು ಶೆಟ್ಟಿ, ಸುರೇಶ್ ಬಟವಾಡೆ, ಶಂಕರ ಪೂಜಾರಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply