ಕಲ್ಮಾಡಿ ವೆಲಂಕಣಿ ಮಾತೆಯ ಕೇಂದ್ರ ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವಾಗಿ ಘೋಷಣೆ

ಉಡುಪಿ : ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು ಆ. 15 ರಂದು ಉಡುಪಿ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವೆಂದು ಅಧಿಕೃತವಾಗಿ ಘೋಷಿಸಲಾಗುವುದು. ಬೆಳಗ್ಗೆ 10 ಗಂಟೆಗೆ ಕೃತಜ್ಞತಾ ಪೂರ್ವಕ ದಿವ್ಯ ಬಲಿಪೂಜೆ ನಡೆಯಲಿದೆ ಎಂದು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್‌ ಧರ್ಮಗುರು ಬ್ಯಾಪ್ಟಿಸ್ಟ್ ಮಿನೇಜಸ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಮಾಡಿ ಯಲ್ಲಿರುವ ವೆಲಂಕಣಿ ಮಾತೆ ಕೇಂದ್ರ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಈ ಪ್ರತಿಮೆಯನ್ನು ತಮಿಳುನಾಡಿನ ವಲಂಕಣಿ ಪುಣ್ಯ ಕ್ಷೇತ್ರದಿಂದ ತರಲಾಗಿದೆ. 1988 ರ ಆಗಸ್ಟ್ 15 ರಂದು ಕಲ್ಮಾಡಿಯಲ್ಲಿ ಅಂದಿನ ಮಂಗಳೂರಿನ ಬಿಷಪ್ ವಂದನೀಯ ಡಾ. ಬಾಸಿಲ್‌ ಡಿಸೋಜಾ ಅವರು ವಲಂಕಣಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಟಾಪಿಸಿದರು. ಪ್ರತಿಷ್ಟಾಪನೆಯ ನಂತರ, ಇಂದಿಗೂ ಕೇಂದ್ರದಲ್ಲಿ ಅನೇಕ ಪವಾಡಗಳು ನಡೆದಿವೆ ಎಂದು ತಿಳಿಸಿದರು.

ಸ್ಟೆಲ್ಲಾ ಮಾರಿಸ್ ಚರ್ಚ್ 1972 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಚರ್ಚಿನ ಸುವರ್ಣ ಮಹೋತ್ಸವವನ್ನು ಕೂಡ ಆಚರಿಸಲಾಗುತ್ತದೆ. ದಿವ್ಯ ಬಲಿಪೂಜೆಯಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ, ಮಂಗಳೂರು ಬಿಷಪ್ ಡಾ ಪೀಟರ್ ಪೌಲ್ ಸಲ್ದನ್ಹಾ, ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜಾ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಸಮಿತಿಯ ಸಂದೀಪ ಅಂದ್ರಾದೆ, ಸಂಜಯ್ ಅಂದ್ರಾದೆ, ಶೋಭಾ ಮೆಂಡೋನ್ಸಾ, ರೋಷನ್ ಡಿಸೋಜಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply