Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

ಜೂನ್ 1 ರಿಂದ ಜೂನ್ 10 ಕಡಿಯಾಳಿ ಬ್ರಹ್ಮಕಲಶೋತ್ಸವ

ಉಡುಪಿ: ಸಮಗ್ರ ಜೀರ್ಣೋದ್ಧಾರ ಗೊಳ್ಳುತ್ತಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವವನ್ನು ಜೂನ್ 1 ರಿಂದ ಪ್ರಾರಂಭಗೊಂಡು ಜೂನ್ 10 ರ ತನಕ ನಡೆಸಲಾಗುವುದು ಎಂದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ಕಟ್ಟೆ ರವಿರಾಜ್ ಆಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಜೂನ್ 1 ಮಧ್ಯಾಹ್ನ 4:00 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಬಿರುದಾವಳಿ, ಕೀಲುಕುದುರೆ ನಾಡಿನ ಸಾಂಸ್ಕೃತಿಕ ವಿವಿಧ ತಂಡಗಳೊಂದಿಗೆ ಬೃಹತ್ ಹೊರಕಾಣಿಕೆಯ ಮೆರವಣಿಗೆ ನಡೆಸಲಾಗುವುದು. ಜೂನ್ 2 ರಂದು ಬೆಳಿಗ್ಗೆ ಉಷಃಕಾಲದಲ್ಲಿ ಪ್ರಾರ್ಥನೆ ಮಾಡಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಭಜನಾ ಮಂಡಳಿಗಳು ಮತ್ತು ಅತಿಥಿ ಭಜನಾ ತಂಡಗಳಿಂದ ನಿರಂತರ ಅಖಂಡ ಅಹೋರಾತ್ರಿ ಭಜನೆ ನಡೆಯಲಿದೆ. ಜೂನ್ 3 ರಂದು ಋತ್ವಿಜರ ಆಗಮನದಿಂದ ಪ್ರಾರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಲಾಶಭಿಷೇಕ ಪಂಚ ದುರ್ಗ ಮಂತ್ರ ಹೋಮದೊಂದಿಗೆ ದಿನಾಂಕ 8/06/2022 ರ ಜೇಷ್ಠ ಶುದ್ಧ ಅಷ್ಟಮಿ ಬೆಳಿಗ್ಗೆ 7.50 ಕ್ಕೆ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಅಂದು ರಾತ್ರಿ ರಥೋತ್ಸವ ನಡೆಯಲಿದೆ.

ಜೂನ್ 9 ರಂದು ಸಾಯಂಕಾಲ 7 ರಿಂದ ಪಿಲಿಚಂಡಿ ಮತ್ತು ಪರಿವಾರ ದೈವಗಳ ಬಾಳು ಭಂಡಾರ ಶ್ರೀ ಕ್ಷೇತ್ರದಿಂದ ಹೊರಟು ರಾತ್ರಿ ದೈವಗಳ ಕೋಲ ನಡೆಯಲಿದೆ. ಜೂನ್ 10ರಂದು ಧಾರ್ಮಿಕ ಕಾರ್ಯಕ್ರಮ ಸಮಾಪನೆ ಗೊಳ್ಳಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗೇಶ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ ಪಿ. ಶೆಟ್ಟಿ, ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಕಾಮತ್, ಹೊರಕಾಣಿಕೆ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಶೇರಿಗಾರ್, ಜೀರ್ಣೋದ್ಧಾರ ಸಮಿತಿಯ ಜೊತೆ ಕಾರ್ಯದರ್ಶಿಗಳಾದ ಕೆ. ಸತೀಶ್ ಕುಲಾಲ್ , ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಂಜುನಾಥ್ ಹೆಬ್ಬಾರ್, ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಮೇ 6 ಕಡಿಯಾಳಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ .

ಜೂನ್ 1ರಿಂದ 10 ರ ನಡೆಯುವ ಕಡಿಯಾಳಿ ಬ್ರಹ್ಮಕಲಶೋತ್ಸವದ ಪೂರ್ವಭಾಗಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮೇ 6 ರಂದು ಸಾಯಂಕಾಲ 7.00 ಗಂಟೆಗೆ ನಡೆಯಲಿದೆ. ಇದರ ಬಿಡುಗಡೆಯನ್ನು ಕೇಂದ್ರ ರಾಜ್ಯ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆ ನಡೆಸಲಿದ್ದು ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾಯಕ್ ಭಾಗವಹಿಸಲಿದ್ದಾರೆ. ಆಮಂತ್ರಣ
ಪತ್ರಿಕೆಯ ಬಿಡುಗಡೆಯ ನಂತರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ಶ್ರೀದೇವಿ ಲಲಿತೋಪಾಖ್ಯಾನ ಎಂಬ ಯಕ್ಷಗಾನವನ್ನು ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನಡೆಸಿಕೊಡಲಿದ್ದಾರೆ.

ಕಡಿಯಾಳಿಯಲ್ಲಿ ಸಾಂಸ್ಕೃತಿಕ ಹಬ್ಬ

ಬ್ರಹ್ಮಕಲಶೋತ್ಸವದ ಪ್ರಯುಕ್ತ ನಾಡಿನ ವಿವಿಧ ಕಲಾವಿದರ ಸಾಂಸ್ಕೃತಿಕ ಹಬ್ಬ ನಡೆಯಲಿದೆ. ದಿನನಿತ್ಯವೂ ಸಾಯಂಕಾಲ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ .ಶಿವದೂತ ಗುಳಿಗ, ಸಾಲಿಗ್ರಾಮ ಮೇಳದಿಂದ ದಕ್ಷಯಜ್ಞ ಶಶಿಪ್ರಭಪರಿಣಯ ಯಕ್ಷಗಾನ ರಾಘವೇಂದ್ರ ಜನ್ಸಾಲೆ ನೇತೃತ್ವದಲ್ಲಿ
ನಡೆಯಲಿದೆ. ಪುತ್ತೂರು ಜಗದೀಶ್ ಆಚಾರ್ಯರ ಸಂಗೀತಗಾನ ಸಂಭ್ರಮ, ವಿದ್ಯಾನಿಧಿ ಬಿರುದಾಂಕಿತ ಡಾ. ಶ್ರೀವಿದ್ಯಾ ಭೂಷಣ್ ಸಂಗೀತ ಕಾರ್ಯಕ್ರಮ ನಡೆಯಲಿದೆ

ರಾಷ್ಟ್ರದ ವಿವಿಧ ತಂಡಗಳಿಂದ ವಂದೇಭಾರತ ಕಾರ್ಯಕ್ರಮ, ತುಳುನಾಡ ವೈಭವ , ಪುಣ್ಯ ಡ್ಯಾನ್ಸ್ ಗ್ರೂಪ್ ಕಂಪೆನಿ ನಡೆಯಲಿದೆ. ದಿನನಿತ್ಯವೂ ಮಧ್ಯಾಹ್ನ 12 ರಿಂದ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ

ಜೂನ್ 1ರಿಂದ ದಿನನಿತ್ಯ ಅನ್ನಸಂತರ್ಪಣೆ

ಜೂನ್ 1ರಿಂದ ಜೂನ್ 9 ರ ತನಕ ದಿನನಿತ್ಯವೂ ಸಾವಿರಾರು ಜನರಿಗೆ ಮಧ್ಯಾಹ್ನ 12.00 ರಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು ಬ್ರಹ್ಮಕಲಶೋತ್ಸವದಂದು ಮಧ್ಯಾಹ್ನ 12ರಿಂದ ರಾತ್ರಿ ಉತ್ಸವದ ತನಕ ಮಹಾ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.

ಧರ್ಮ ವೇದಿಕೆಯಲ್ಲಿ ರಾಷ್ಟ್ರ /ಧರ್ಮದ ಚಿಂತನೆ

ದಿನನಿತ್ಯವೂ ಸಾಯಂಕಾಲ 5.30 ರಿಂದ ಧರ್ಮ ವೇದಿಕೆಯಲ್ಲಿ ರಾಷ್ಟ್ರದ ವಿವಿಧ ನಾಯಕರುಗಳಿಂದ ಮತ್ತು ಪೂಜ್ಯ ಅಷ್ಟ ಮಠಾಧೀಶರ ಗಳು ಮತ್ತು ವಿವಿಧ ಸಮಾಜದ ಮಠಾಧೀಶರಿಂದ ರಾಷ್ಟ್ರ ಚಿಂತನೆ ಮತ್ತು ಧರ್ಮ ಚಿಂತನೆ ನಡೆಯಲಿದೆ. ಅದರಲ್ಲೂ ವಿಶೇಷವಾಗಿ ದೇವಸ್ಥಾನಗಳನ್ನು ಸರ್ಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆ ಸ್ವಾಯತ್ತತೆ ಮತ್ತು ಪಾರದರ್ಶಕ ಆಡಳಿತ ನಡೆಸಲು ಉಡುಪಿ ದಕ್ಷಿಣ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಸಹಿತ ಕನಿಷ್ಠ ಮೂರು ಮಂದಿ ವ್ಯವಸ್ಥಾಪನ ಸಮಿತಿಯ ಸದಸ್ಯರು ಭಾಗವಹಿಸಿ ಎಲ್ಲರ ಅಭಿಪ್ರಾಯವನ್ನು ಒಟ್ಟುಗೂಡಿಸಿ ಸರಕಾರಕ್ಕೆ ಹಕ್ಕೊತ್ತಾಯ ಮಾಡಲು ನಿಶ್ಚಯಿಸಲಾಗಿದೆ. ಅದೇ ರೀತಿ ದೇವಸ್ಥಾನಗಳ ಪರಿಚಾರಕರು ದೈವಸ್ಥಾನಗಳ ಪರಿಚಾರಕರ ಸಮಾವೇಶ ,ಅರ್ಚಕರ ಸಮಾವೇಶ, ಮೂಲಕ ಅರ್ಥಪೂರ್ಣ ಧಾರ್ಮಿಕ ಚಿಂತನೆಗಳನ್ನು ನಡೆಸಿ ಸರಕಾರಕ್ಕೆ ದೇವಸ್ಥಾನಗಳ ಸಮಸ್ಯೆಗಳನ್ನು ತಿಳಿಸಿ ಅದನ್ನು ಪರಿಹರಿಸಲು ಶ್ರೀಕ್ಷೇತ್ರದಿಂದ ದಿಟ್ಟ ಹೆಜ್ಜೆ ಇಡಲು ನಿರ್ಧರಿಸಲಾಗಿದೆ. ಈ ಮೂಲಕ ದೇವಸ್ಥಾನಗಳು ಸಮಾಜಮುಖಿ ಮತ್ತು ಧಾರ್ಮಿಕ ರಾಷ್ಟ್ರೀಯ ಚಿಂತನೆಗಳ ಮೂಲಕ ನಡೆಸಲು ಸಹಕಾರಿಯಾಗುವಂತೆ ಮಾಧ್ಯಮ ಮಿತ್ರರು ಸರಿಸುವಂತೆ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ವಿನಂತಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!