ಕೋಟಿ ಸದಸ್ಯತ್ವದ ಗುರಿ~ ನಾಡೋಜ ಡಾ| ಮಹೇಶ್ ಜೋಶಿ

ಉಡುಪಿ: ಸಂಸ್ಕೃತಿ ಎಂಬುವುದು ನಮ್ಮ ಮಾತು, ಉಡುಗೆ ತೊಡುಗೆ, ಊಟದ ವಿಧಾನವನ್ನೊಳಗೊಂಡಿದೆ. ಅವುಗಳೆವೂ ಕನ್ನಡಕ್ಕೆ ಅಸ್ಮಿತೆಯಾಗಿವೆ. ಅದನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲಿದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದದ ಬೆಳವಣಿಗೆ, ರಕ್ಷಣೆ ಅತ್ಯಗತ್ಯ ಎಂದು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ| ಮಹೇಶ್ ಜೋಶಿ ಹೇಳಿದರು.

ಸೋಮವಾರ ಅಜ್ಜರಕಾಡು ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ ಸೇವಾ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.


ಕನ್ನಡ ಹೃದಯ ಬೆಸೆಯುವ ಭಾಷೆ. ಈ ಭಾಷೆಗೆ ದೇವರನ್ನು ಮೆಚ್ಚಿಸುವ ಶಕ್ತಿಯಿದೆ. ಹಿಂದೂ- ಮುಸಲ್ಮಾನರು ಅನ್ಯೋನ್ಯತೆಯಿಂದ ಇರುವುದನ್ನು ಸಂತ ಶಿಶುನಾಳ ಶರೀಫರಿಂದ ತಿಳಿಯಬೇಕು. ಅವರ ಊರಿನಲ್ಲಿ ಮುಸಲ್ಮಾನ, ಹಿಂದೂವನ್ನು ಗುರುವಾಗಿ ಹಾಗೂ ಹಿಂದೂ, ಮುಸಲ್ಮಾನ ವ್ಯಕ್ತಿಯನ್ನು ಗುರುವಾಗಿ ಸ್ವೀಕರಿಸಿದ್ದನ್ನು ನೋಡಿದ್ದೇನೆ. ಕನ್ನಡ ಭಾವೈಕ್ಯತೆ ಮೂಡಿಸಿದ ಭಾಷೆ ಎಂದರು.


ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ. ಅದರ ಸದಸ್ಯರ ಗುರಿಯನ್ನು ಕನಿಷ್ಠ ಒಂದು ಕೋಟಿಗೆ ಹೆಚ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಕಸಾಪ ಚುನಾವಣೆ ಎದುರಿಸಲು ಆ್ಯಪ್ ಸಿದ್ದಪಡಿಸ ಲಾಗುವುದು. ಆ ಮೂಲಕ ಪಾರದರ್ಶಕ ಹಾಗೂ ಖರ್ಚು ರಹಿತ ಚುನಾವಣೆ ನಡೆಸಲು ಆದ್ಯತೆ ನೀಡ ಲಾಗುವುದು. ತಾಲೂಕು, ಹೋಬಳಿ ಅಧ್ಯಕ್ಷರ ನೇಮಕಾತಿಗೂ ಚುನಾವಣೆ ನಡೆಸಲಾಗುವುದು. ಅದಕ್ಕೆ ಸದಸ್ಯರ ವಿಶೇಷ ಸಭೆ ಕರೆದು ಅನುಮೋದನೆ ಪಡೆಯಲಾಗುವುದು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ ಸೇವಾ ಸ್ವೀಕಾರ

ಅಜ್ಜರಕಾಡು ಕಾಲೇಜು ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಸ್ತಾವನೆಗೈದರು. ದ.ಕ. ಜಿಲ್ಲಾಧ್ಯಕ್ಷ ಶ್ರೀನಾಥ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು. ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ​ನರೇಂದ್ರ ಕೋಟ  ವಂದಿಸಿದರು. ಸತೀಶ್ ವಡ್ಡರ್ಸೆ ನಿರೂಪಿಸಿದರು 

 
 
 
 
 
 
 
 
 
 
 

Leave a Reply