ಉಡುಪಿಯಲ್ಲಿ ಯಾವುದೇ ಹಠಾವೋ ಅಭಿಯಾನ ಸಮಂಜಸವಲ್ಲ:ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ​ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿರುವ ಅನೇಕತೆಯಲ್ಲಿ ಏಕತೆಯ ಸಂಕೇತವಾಗಿರುವ ಉಡುಪಿಯಲ್ಲಿ ಯಾವುದೇ ಹಠಾವೋ ಅಭಿಯಾನಗಳು ಸಮಂಜಸವಲ್ಲ ಇದನ್ನು ​ ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುತ್ತಿರುವ ‘ಮಾರ್ವಾಡಿ ಹಠಾವೋ’ ಎಂಬ ಶೀರ್ಷಿಕೆಯ ಸಂದೇಶವನ್ನು ಉಲ್ಲೇಖಿಸಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ‘ಏಕ್ ಭಾರತ್ ಶೇಷ್ಠ ಭಾರತ್’ ಎಂಬ ಪ್ರಧಾನಿ ನರೇಂದ್ರ ಮೋದಿ ಪರಿ ಕಲ್ಪನೆಯಂತೆ ದೇಶದೆಲ್ಲೆಡೆ ವಿವಿಧ ಸಮುದಾಯಗಳ ಜನತೆ ವಿವಿಧ ರಾಜ್ಯಗಳಲ್ಲಿ ಯಶಸ್ವಿ ಉದ್ಯಮವನ್ನು ನಡೆಸಿಕೊಂಡು ಸ್ವಾವಲಂಬನೆಯ ಚಿಂತನೆಯ ಜೊತೆಗೆ ರಾಷ್ಟçದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ.
ದೇಶದ ನಾಗರಿಕನೊಬ್ಬ ದೇಶದ ಯಾವುದೇ ಪ್ರದೇಶಗಳಲ್ಲಿ ಜೀವನೋಪಾಯ ಹಾಗೂ ಅಭಿವೃದ್ಧಿಗಾಗಿ ವ್ಯವಹಾರ ನಡೆಸಲು ಅವಕಾಶವಿದೆ. ಉಡುಪಿ ಜಿಲ್ಲೆಯ ಸಾವಿರಾರು ಮಂದಿ ದೇಶ-ವಿದೇಶಗಳಲ್ಲಿ ಉದ್ದಿಮೆ, ವ್ಯವಹಾರಗಳನ್ನು ನಡೆಸುತ್ತಿರುವುದು ವಾಸ್ತವ. ಇದಕ್ಕೆ ಪೂರಕವಾಗಿ ಉಡುಪಿ ಹೋಟೆಲ್‌ಗಳು ಇಂದು ದೇಶದಾದ್ಯಂತ ಅತ್ಯಂತ ಪ್ರಸಿದ್ಧಿಯನ್ನು ಹೊಂದಿವೆ.
ಉಡುಪಿಯಾದ್ಯಂತ ಉದ್ಯಮ ನಡೆಸುತ್ತಿರುವ ವಿವಿಧ ರಾಜ್ಯಗಳ ವ್ಯವಹಾರಸ್ಥರಿಗೆ ‘ಮಾರ್ವಾಡಿ ಹಠಾವೋ’ ಎಂಬ ರೀತಿಯ ಅಭಿ ಯಾನಗಳ ಮೂಲಕ ತೊಂದರೆ ಕೊಡುವುದನ್ನು ಬಿಜೆಪಿ ಖಂಡಿಸುತ್ತದೆ. ಇಂತಹ ಯಾವುದೇ ಅನಪೇಕ್ಷಿತ ಹೇಳಿಕೆಗಳು ಅಥವಾ ಚಟುವಟಿಕೆಗಳನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಅವರು ಹೇಳಿದರು.


‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂಬ ದೇಶವಾಸಿಗಳೆಲ್ಲರೂ ಒಂದಾಗಿ ಸಮೃದ್ಧಿಯ ಸಹಬಾಳ್ವೆ ನಡೆಸುವ ತತ್ವದಲ್ಲಿ ನಂಬಿಕೆ ಇರಿಸಿರುವ ಬಿಜೆಪಿ ಜಿಲ್ಲೆಯ ಯಾವುದೇ ವ್ಯವಹಾರಸ್ಥರನ್ನು ಗುರಿಯಾಗಿಸಿ ಯಾವುದೇ ವ್ಯಕ್ತಿ ಅಥವಾ ಗುಂಪು  ನೀಡುವ ಅಸಂಬದ್ಧ ಪೊಳ್ಳು ಬೆದರಿಕೆಗಳಿಗೆ ಸೊಪುö್ಪ ಹಾಕುವುದಿಲ್ಲ. ಜಿಲ್ಲೆಯ ಯಾವುದೇ ಉದ್ದಿಮೆ ಅಥವಾ ವ್ಯವಹಾರಸ್ಥರು ಅನಗತ್ಯ ಗೊಂದಲ ಕ್ಕೀಡಾಗುವ ಅಗತ್ಯವಿಲ್ಲ.

ಬಿಜೆಪಿ ಜಿಲ್ಲೆಯ ಎಲ್ಲ ವರ್ಗದ ವ್ಯವಹಾರಸ್ಥರ ಜೊತೆಯೂ ಇದೆ. ಈ ಹಿಂದೆಯೂ ಉಡುಪಿಯಲ್ಲಿ ಬೇರೆ ಬೇರೆ ರಾಜ್ಯಗಳ ವ್ಯವಹಾರ ಸ್ಥರಿಗೆ ತೊಂದರೆ​ಯುಂಟಾದ ಸಂದರ್ಭದಲ್ಲಿಯೂ ಬಿಜೆಪಿ ಧೈರ್ಯ ತುಂಬಿದೆ. ಇಂತಹ ಪ್ರಾದೇಶಿಕವಾರು ಕ್ಷುಲ್ಲಕ ಹೇಳಿಕೆಗಳು ದೇಶದ ಏಕತೆಗೆ ಮಾರಕವಾಗಿವೆ. ಎಲ್ಲರೂ ಜಿಲ್ಲೆ ಹಾಗೂ ದೇಶದ ಅಖಂಡತೆ, ಏಕತೆ ಮತ್ತು ಸಮಗ್ರತೆಗೆ ತಮ್ಮದೇ ಆದ ಕೊಡುಗೆ ನೀಡುವುದು ಇಂದಿನ ಅಗತ್ಯತೆ ಎಂದು ಕುಯಿಲಾಡಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಉಪಸ್ಥಿತ ರಿದ್ದರು.
 
 
 
 
 
 
 
 
 
 
 

Leave a Reply