ಕೂಳೂರು ಜಗದೀಶ್ ನಾಯಕ್ ಇನ್ನಿಲ್ಲ 

ಗೋವಿನ ಸೇವೆಯಲ್ಲಿ ಜೀವನ ಸಾರ್ಥಕ್ಯ ಕಂಡ ಜೀವವೊಂದು ಇಹದ ಯಾತ್ರೆ ಮುಗಿಸಿತು

ಈ ವ್ಯಕ್ತಿ ನಿಧನರಾದರು ಎಂದಾಕ್ಷಣ ಒಂದು ದೃಶ್ಯ ಕಣ್ಣೆದುರು ಧುತ್ತೆಂದು ಬಂದು ನಿಂತಿತು..ಅದೇನಂದ್ರೆ ಉಡುಪಿ ಕೃಷ್ಣ ಮಠದ ಪವಿತ್ರ ರಥಬೀದಿ ಅಥವಾ ಆಸುಪಾಸಿನ ತೆಂಕಪೇಟೆ ವಾದಿರಾಜ ರಸ್ತೆ ಬಡಗಪೇಟೆ ಅಥವಾ ಪಡುಪೇಟೆ ( ಕನಕದಾಸ ರಸ್ತೆ )ಯಲ್ಲಿ ಒಂದಷ್ಟು ( ಈಗ ತೀರಾ ಬೆರಳೆಣಿಕೆಯ ಮಾತ್ರ ಅನ್ನೋದು ತುಂಬ ನೋವಿನ ಬೇಸರದ ಸಂಗತಿ ) ಬೀಡಾಡಿ ಹಸುಗಳು ಅಲ್ಲಲ್ಲಿ ಚದುರಿಕೊಂಡು ಅಡ್ಡಾಡಿಕೊಂಡಿದ್ದವುಗಳು ಈ ವ್ಯಕ್ತಿಯನ್ನು ಕಂಡಾಕ್ಷಣ ಒಟ್ಟಾಗಿ ಇವರೆಡೆಗೆ ಧಾವಿಸುತ್ತಿದ್ದ ದೃಶ್ಯ ಯಾಕಂದ್ರೆ ಅವುಗಳಿಗೂ ಗೊತ್ತಿತ್ತು ಕೃಷ್ಣ ಮಠಕ್ಕೆ ಬರುವ ಅಥವಾ ಉಡುಪಿ ಪೇಟೆಗೆ ಬರುವ ನೂರಾರು ಸಾವಿರಾರು ಭಕ್ತರು ನಾಗರಿಕರಲ್ಲಿ ತಮಗಾಗಿ ಏನನ್ನಾದರೂ ತಿನ್ನಲು ಕೈಯಲ್ಲಿ ಹಿಡ್ಕೊಂಡು ಬಂದು ಶ್ರದ್ಧೆಯಿಂದ ಬಾಯಿಗಿಡುವ ತೀರಾ ಬೆರಳೆಣಿಕೆಯ ಮಂದಿಯಲ್ಲಿ ಇವರೂ ಒಬ್ಬರು .‌.

ಹೌದು, ಈ ದೃಶ್ಯ ನಾನಂತೂ ಅನೇಕ ಬಾರಿ ಕಂಡಿದ್ದೇನೆ ಆ ಹಸುಗಳಲ್ಲಿ ಇವರಿಗಿದ್ದ ಪ್ರೀತಿ ; ಪ್ರತಿಯಾಗಿ ಅವುಗಳು ಇವರೆಡೆಗೆ ಧಾವಿಸುತ್ತಿದ್ದ ರೀತಿಯಲ್ಲಿ ಯಾವುದೋ ಒಂದು ಅವ್ಯಕ್ತ ನಂಟು ಎಂದೇ ನಾನು ಭಾವಿಸಿದ್ದೇನೆ . ನನ್ನಂತೆ ಅನೇಕರು ಈ ದೃಶ್ಯಕಂಡವರು ಅಥವಾ ಗಮನಿಸಿದವರು ಇರಬಹುದು . 

ಇವರು ಕೂಳೂರು ಜಗದೀಶ ನಾಯಕ್ , ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಬಳಿಯ ನಿವಾಸಿ . ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ . ಅವಿವಾಹಿತರು . ಇವರು ಮಾತ್ರ ಅಲ್ಲ ಇವರ ಒಡಹುಟ್ಟಿದವರ ಪೈಕಿ ಒಬ್ಬರು ತಂಗಿ ಮಾತ್ರ ವಿವಾಹಿತರು ಉಳಿದೊಬ್ಬ ಸಹೋದರ ಮತ್ತಿಬ್ಬರು ಸಹೋದರರೂ ಅವಿವಾಹಿತರೆಂದು ಇವತ್ತಷ್ಟೆ ತಿಳಿದು ಅಚ್ಚರಿಯಾಯಿತು.ಅಲ್ಪಕಾಲದ ಅಸೌಖ್ಯದಿಂದ ಎರಡು ದಿನಗಳ ಹಿಂದೆ ( 78 ವರ್ಷ ) ಇವರು ನಿಧನಹೊಂದಿದರೆಂಬ ವಿಷಯ ತಿಳಿದು ತೀವ್ರ ವಿಷಾದವಾಯಿತು .

ಉಡುಪಿ ಕೃಷ್ಣ ಮುಖ್ಯಪ್ರಾಣರ ವಿಶೇಷ ಭಕ್ತರಾಗಿದ್ದರು . ವೃತ್ತಿ ಮತ್ತು ನಿವೃತ್ತಿಯ ಬದುಕಿನಲ್ಲಿ ಕೊನೆಯ ವರೆಗೂ ತಮ್ಮ ಆದಾಯದ ದೊಡ್ಡಪಾಲನ್ನು ಗೋವಿನ ಸೇವೆಗಾಗಿಯೇ ವಿನಿಯೋಗಿಸಿ ಸಾರ್ಥಕ್ಯ ಅನುಭವಿಸಿದ ಓರ್ವ ಸಜ್ಜನ . ಅನನ್ಯ ಗೋ ಪರಿಪಾಲಕ .

ಕೃಷ್ಣ ಮಠದ ಗೋಶಾಲೆ ಇವರ ಮೆಚ್ಚಿನ ತಾಣ, ನೀಲಾವರ ಕೊಡವೂರುಗಳಲ್ಲಿರುವ ಶ್ರೀ ಪೇಜಾವರ ಮಠದ ಗೋಶಾಲೆಗಳಿಗೆ ದೊಡ್ಡ ಮೊತ್ತದ ರೂ ದೇಣಿಗೆ ನೀಡುತ್ತಾ ಮೌನದಿಂದ ಗೋಪಾಲಕೃಷ್ಣನ ಆರಾಧನೆ ಮಾಡಿದ್ದಾರೆ .‌

ತಮ್ಮ ಸಹೋದರಿಯೊಡನೆ ಪ್ರತಿ ನಿತ್ಯ ಕೃಷ್ಣ ಮಠ ಅನಂತೇಶ್ವರ ಚಂದ್ರಮೌಳೀಶ್ವರ ದೇವಳಗಳ ಭೇಟಿ ಬಳಿಕ ಉಡುಪಿ ಮಠದ ಆನೆ ಹಾಗೂ ರಥಬೀದಿಯ ಹಸುಗಳಿಗೆ ಏನಾದರೂ ಗ್ರಾಸ ನೀಡವುದನ್ನು ನಿತ್ಯದ ಪರಿಪಾಠವಾಗಿಸಿಕೊಂಡವರು . 

ತಮ್ನ ಚಿಕ್ಕ ನಿವೇಶನದ ಮನೆಯಲ್ಲಿ ಹಸುವನ್ನು ಸಾಕಲಾಗದಿದ್ದರೂ ನೂರಾರು ಹಸುಗಳ ಪೋಷಣೆ ನಡೆಯುವಲ್ಲಿಗೆ ಸಹಾಯ ನೀಡಿ ತನ್ನ ಗೋ ಕರ್ತವ್ಯ ಗಳನ್ನು ನಿರ್ವಂಚನೆಯಿಂದ ನಿರ್ವಹಿಸಿದ ಓರ್ವ ಅಪ್ಪಟ ಕೃಷ್ಣ ಭಕ್ತ . ತನ್ನ ವೈಯಕ್ತಿಕ ಜೀವನದ ನೋವು ಚಿಂತೆಗಳನ್ನೆಲ್ಲ ಗೋವಿನ ಸೇವೆಯಲ್ಲಿ ಮರೆಯಲು ಯತ್ನಿಸುತ್ತಿದ್ದರೇನೋ ಕೃಷ್ಣನೇ ಬಲ್ಲ… !!!

ತಮ್ಮ ಈ ವಿಶಿಷ್ಟ ಉಡುಪಿ ಕೃಷ್ಣನ ಸೇವೆ ಮತ್ತು ಗೋ ಸೇವೆಗಾಗಿ ಶ್ರೀ ನಾಯಕ್ ಅವರು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ,‌ನೀಲಾವರ ಗೋಶಾಲೆಯ ಅಧ್ವರ್ಯು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಅನೇಕ ಮಠಾಧೀಶರಿಂದ ಅನುಗ್ರಹಿಸಲ್ಪಟ್ಟಿದ್ದರು .

-ಜಿ ವಾಸುದೇವ ಭಟ್ ಪೆರಂಪಳ್ಳಿ

 
 
 
 
 
 
 
 
 
 
 

Leave a Reply