ಮೆಲ್ಬರ್ನ್ ನಗರದಲ್ಲಿ ಉಡುಪಿ ಕೃಷ್ಣನ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ

ತಮ್ಮ ನಾಲ್ಕನೇ ಐತಿಹಾಸಿಕ ಶ್ರೀ ಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿಯಾಗಿ ವಿಶ್ವ ಪರ್ಯಟನೆ ನಡೆಸುತ್ತಿರುವ ಶ್ರೀ ಉಡುಪಿ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು 2015 ರಲ್ಲಿ ಮೆಲ್ಬರ್ನ್ ನಲ್ಲಿ ಸ್ಥಾಪಿಸಿದ ಪುತ್ತಿಗೆ ಮಠದ “ಶ್ರೀ ವೆಂಕಟ ವೃಂದಾವನ”ದಲ್ಲಿ ಜನವರಿ 15,2023ರ, ಮಕರ ಸಂಕ್ರಮಣದ ಶುಭ ಮುಹೂರ್ತದಂದು ಅತ್ಯಂತ ಆಕರ್ಷಕವಾದ ಉಡುಪಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಮಠದ ವಿದ್ವಾಂಸರು, ವೈದಿಕರು ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟರು.

 ಈ ದಿನವು ಎಷ್ಟು ವಿಶೇಷವಾಗಿತ್ತೆಂದರೆ 750 ವರ್ಷಗಳ ಹಿಂದೆ ಶ್ರೀ ಜಗದ್ಗುರು ಮಧ್ವಾಚಾರ್ಯರು ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ದಿನ ಇದೆ ಮಕರಸಂಕರಮಣದ ಪರ್ವಕಾಲವಾಗಿತ್ತು.

 ಅಂದು ಮಕರ ಸಂಕ್ರಮಣದ ಪರ್ವಕಾಲದಲ್ಲಿ ಆಚಾರ್ಯ ಮಧ್ವರು ದ್ವಾರಕೆಯಿಂದ ಕಡಲು ದಾಟಿ ಬಂದ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು. ಇಂದು ಮಧ್ವ ಪರಂಪರೆಯ ಶಿಷ್ಯರು, ಭಾವಿ ಪರ್ಯಾಯ ಪೀಠಾಧಿಪತಿಗಳೂ ಅದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣನ ಉತ್ಸವ ಮೂರ್ತಿಯನ್ನು ಕಡಲಾಚೆಯ ಮೆಲ್ಬರ್ನ್ ಮಹಾನಗರದಲ್ಲಿ, ಅದೇ ಮಕರ ಸಂಕ್ರಮಣದ ಪರ್ವಕಾಲದಲ್ಲಿ ಪ್ರತಿಷ್ಠಾಪಿಸಿದ್ದು, ಇದು ಇತಿಹಾಸ ಮರುಕಳಿಸಿದ ಅಪೂರ್ವ ಕ್ಷಣವಾಗಿ, ಈ ಐತಿಹಾಸಿಕ ಕ್ಷಣವನ್ನು ಮೆಲ್ಬೋರ್ನ್‌ನಲ್ಲಿರುವ ಸಾವಿರಾರು ಭಕ್ತರು ಕಣ್ತುಂಬಿಕೊಂಡು ಧನ್ಯರಾದರು. 

ಪ್ರತಿಷ್ಠೆಯ ಪೂರ್ವಭಾವಿಯಾಗಿ ಹಿಂದಿನ ದಿವಸ , ಕೃಷ್ಣನ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ತಂದು, ಬಿಂಬಶುದ್ಧಿ, ವಾಸ್ತು ಹೋಮ,ಅಧಿವಾಸ ಪೂಜೆ ಇತ್ಯಾದಿಗಳನ್ನು ನೆರವೇರಿಸಲಾಯಿತು.

 
 
 
 
 
 
 
 
 
 
 

Leave a Reply