ಬ್ರಿಟನ್ನಿನ‌ ಅತ್ಯಂತ ಸುದೀರ್ಘ ಕಾಲದ ರಾಣಿಯಾಗಿದ್ದ ಎಲಿಝಬೆತ್ ಇನ್ನಿಲ್ಲ

96 ವರ್ಷ ವಯಸ್ಸಿನ, ಬ್ರಿಟನ್ನಿನ‌ ಅತ್ಯಂತ ಸುದೀರ್ಘ ಕಾಲದ ರಾಣಿಯಾಗಿದ್ದ ಎರಡನೇ ಎಲಿಝಬೆತ್ ಅವರು ಮೃತರಾದರೆಂದು ಬಕಿಂಗ್ ಹ್ಯಾಮ್ ಅರಮನೆಯು ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ತಿಳಿಸಿದೆ.

ಟ್ವೀಟ್‌ನಲ್ಲಿ, “ರಾಣಿ ಇಂದು ಮಧ್ಯಾಹ್ನ ನೋವು-ನರಳಾಟಗಳಿಲ್ಲದೆ ನೆಮ್ಮದಿಯಿಂದ ಬಲ್ಮೋರಲ್‌ನಲ್ಲಿ ನಿಧನರಾದರು. ರಾಣಿಯ ಪಾರ್ಥಿವ ಶರೀರವನ್ನು ಬಲ್ಮೋರಲ್‌ ಎಸ್ಟೇಟ್‌ನಲ್ಲಿ ಇಡಲಿದ್ದು, ಶುಕ್ರವಾರ ಲಂಡನ್‌ಗೆ ಒಯ್ಯಲಾಗುವುದು” ಎಂದು ಅರಮನೆಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಣಿಗೆ ನಾಲ್ವರು ಮಕ್ಕಳು. ಹಿರಿಯ ಮಗ, ವೇಲ್ಸ್‌ನ ರಾಜಕುಮಾರ, 73 ವರ್ಷದ ಚಾರ್ಲ್ಸ್‌ ಅವರು ತಕ್ಷಣದಿಂದಲೇ ಅನ್ವಯವಾಗುವಂತೆ ರಾಜನಾಗಿ ಕರ್ತವ್ಯ ನಿಭಾಯಿಸುವರು ಎಂದು ಅರಮನೆಯ ಹೇಳಿಕೆ ತಿಳಿಸಿದೆ.

ಸುಮಾರು 70 ವರ್ಷಗಳ ಸುದೀರ್ಘ ಕಾಲ ಬ್ರಿಟನ್ ರಾಣಿಯಾಗಿ ಆಳ್ವಿಕೆ ನಡೆಸಿದ ಎಲಿಝಬೆತ್, 1926ರಲ್ಲಿ ಜನ್ಮ ತಾಳಿದ್ದ ಎಲಿಝಬೆತ್ ಅಲೆಕ್ಸಾಂಡ್ರಾ ಮೇರಿ, 1952ರಲ್ಲಿ ರಾಣಿಯ ಪಟ್ಟವನ್ನೇರಿದ್ದರು. ಅವರ ಪತಿ ಫಿಲಿಪ್ ಮೌಂಟ್ ಬ್ಯಾಟನ್ ಕಳೆದ ವರ್ಷ (2021)ದ ಏಪ್ರಿಲ್‌ನಲ್ಲಿ ಮರಣ ಹೊಂದಿದ್ದರು. ಇದೀಗ ಅವರ ಮಗ ಚಾರ್ಲ್ಸ್ ರಾಜನ‌‌ ಪಟ್ಟವೇರಲಿದ್ದಾರೆ. 

ರಾಣಿಯ ಮರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಬಕಿಂಗ್ ಹ್ಯಾಮ್ ಅರಮನೆಯ ಮುಂದೆ ಜನಸಾಗರವೇ ಸೇರಿರುವುದಾಗಿ ವರದಿಯಾಗಿದೆ.

ತಾಯಿಯ ನಿಧನದ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಮಗ ಹಾಗೂ ಉತ್ತರಾಧಿಕಾರಿ ಚಾರ್ಲ್ಸ್, “ನನ್ನ ಪ್ರೀತಿಯ ತಾಯಿ ರಾಣಿ ಎಲಿಝಬೆತ್ ಅವರ ಮರಣವು ನನಗೆ ಮತ್ತು ನನ್ನ ಕುಟುಂಬದ ಎಲ್ಲ ಸದಸ್ಯರಿಗೆ ಅತ್ಯಂತ ದುಃಖದ ಕ್ಷಣವಾಗಿದೆ. ಹೆಚ್ಚು ಪ್ರೀತಿಸಿದ ತಾಯಿಯ ನಿಧನಕ್ಕೆ ನಾವು ತೀವ್ರವಾಗಿ ಶೋಕಿಸುತ್ತೇವೆ. ಅವರ ಮರಣವು ದೇಶ ಸೇರಿದಂತೆ ಪ್ರಪಂಚದಾದ್ಯಂತ ಜನರಿಗೆ ನೋವನ್ನುಂಟು ಮಾಡಿದೆ ಎಂಬುದು ನನಗೆ ತಿಳಿದಿದೆ” ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply