ಇನ್ನ ಪ್ರೌಢಶಾಲೆಗೆ ಅನನ್ಯ ಕೊಡುಗೆ.

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಆಯುರ್ವೇದ ಭೂಷಣ ಎಂ. ವಿ. ಶಾಸ್ತ್ರಿ ಪ್ರೌಢಶಾಲೆಗೆ ಮೂಲತಃ ಇನ್ನಾ ಗ್ರಾಮದವರೇ ಆದ ಮತ್ತು ಈಗ ಮುಂಬೈಯಲ್ಲಿ ನೆಲೆಸಿರುವ ಸುಜಯಾ ಶೆಟ್ಟಿ ಅವರು ತಮ್ಮ ಸುಜಯ ಫೌಂಡೇಶನ್ ಮತ್ತು ರೋಟರಿ ಸಂಸ್ಥೆಯ ಪರವಾಗಿ 50,000 ರೂ.ಗಳ ಕೊಡುಗೆಯನ್ನು ನೀಡಿದ್ದಾರೆ.

ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಕೊಡುಗೆಯನ್ನು ಚೆಕ್ ಮೂಲಕ ಅವರು ಶಾಲೆಯ ಮುಖ್ಯ ಶಿಕ್ಷಕರಾದ ಪ್ರಕಾಶ್ ರಾವ್ ಪಿ ಎನ್ ಅವರಿಗೆ ಹಸ್ತಾಂತರ ಮಾಡಿದರು. ತನ್ನ ಹುಟ್ಟೂರಾದ ಇನ್ನಾ ಗ್ರಾಮಕ್ಕೆ ಕೊಡುಗೆಯನ್ನು ನೀಡುವುದರ ಮೂಲಕ ಹುಟ್ಟೂರ ಋಣವನ್ನು ತೀರಿಸಲು ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಹಾಗೆಯೇ ತನ್ನ ಅಕ್ಕನ ಹೆಸರಿನಲ್ಲಿ ಶಾಲೆಯ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಗೆ ಇನ್ನೂ 22,500 ರೂ.ಗಳ ಕೊಡುಗೆಯನ್ನು ನೀಡುವುದಾಗಿ ಅವರು ಘೋಷಣೆ ಮಾಡಿದರು. ಹಾಗೆಯೇ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಕಲಿಕೆಗೆ ನೆರವು ನೀಡುವ ಭರವಸೆ ಕೂಡ ಕೊಟ್ಟರು.

ಕೊಡುಗೆಯನ್ನು ಸ್ವೀಕಾರ ಮಾಡಿ ಮಾತಾಡಿದ ಮುಖ್ಯ ಶಿಕ್ಷಕ ಪ್ರಕಾಶ್ ರಾವ್ ಪಿ.ಎನ್ ಅವರು ಸುಜಯಾ ಅಂತಹ ದಾನಿಗಳು ಮುಂದೆ ಬಂದು ಶಾಲೆಗೆ ನೆರವಾಗಬೇಕು ಎಂದು ಹೇಳಿದರು.

ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶ ಆರ್ ಮೂಲ್ಯ, ಇನ್ನಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಗುರುದತ್, ಮೂಲ್ಕಿ ಕುಬೇವೂರು ನರೇಶ್ ಶೆಟ್ಟಿ ಅವರು ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಕ್ಷಕ ರಾಜೇಂದ್ರ ಭಟ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕನ್ನಡ ಅಧ್ಯಾಪಕರಾದ ಸುಧಾಕರ್ ಆಚಾರ್ಯ ಅವರು ಸ್ವಾಗತ ಮಾಡಿದರು. ವಿಜ್ಞಾನ ಶಿಕ್ಷಕರಾದ ಪೊನ್ನುತುರೈ ಅವರು ಧನ್ಯವಾದ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾದ ಕೋವಿಡ್ ಲಸಿಕೆ ಕೊಡುವ ಕಾರ್ಯಕ್ರಮವು ಕೂಡ ಜರಗಿತು.

 
 
 
 
 
 
 
 
 
 
 

Leave a Reply