ಹಿಜಾಬ್ ವಿವಾದದ ಮೂಲಕ ಶೈಕ್ಷಣಿಕ ವಾತಾವರಣ ಕದಡಲು ಯತ್ನಿಸುವವರಿಗೆ ಉತ್ತರ ನೀಡಲು ಬದ್ಧ : ಯಶ್‍ಪಾಲ್ ಸುವರ್ಣ ಆಕ್ರೋಶ

ಉಡುಪಿ ;  ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಕಾಲೇಜಿನ ಶೈಕ್ಷಣಿಕ ವಾತಾವರಣ ಕದಡಲು ಯತ್ನಿಸುವ ಕೆಲವು ಕೋಮುವಾದಿ ಸಮಾಜಘಾತಕ ಶಕ್ತಿಗಳಿಗೆ ತಕ್ಕ ಉತ್ತರ ನೀಡಲು ಬದ್ಧ ಎಂದು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ, ಬಿಜೆಪಿ ಮುಖಂಡ ಯಶ್‍ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 3 ದಿನಗಳಿಂದ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಿದ ಕಾಲೇಜಿನ ಪ್ರಾಂಶುಪಾಲರಿಗೆ ಒತ್ತಡ ಹೇರಿರುವುದು ಖಂಡನೀಯ. 

ಕಳೆದ 36 ವರ್ಷಗಳಿಂದ ಖಾಸಗಿ ಶಾಲೆಗಳಿಗೆ ಸರಿಸಮನಾಗಿ ವಿದ್ಯಾಭ್ಯಾಸ ನೀಡುತ್ತಿರುವ ಸರಕಾರಿ ಕಾಲೇಜಿನಲ್ಲಿ ಈ ವರೆಗೂ ಹಿಜಾಬ್ ಧರಿಸಲು ಅವಕಾಶವಿಲ್ಲದಿದ್ದರೂ ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ ವ್ಯವಸ್ಥಿತವಾಗಿ ಘಟನೆ ನಡೆದಿದೆ. ತಮ್ಮ ಧಾರ್ಮಿಕ ಸಂಪ್ರದಾಯಗಳ ಆಚರಣೆಯನ್ನು ಮನೆಗೆ ಸೀಮಿತಗೊಳಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಅವಕಾಶಕ್ಕಾಗಿ ಒತ್ತಡ ಹೇರುವುದು ದುರದೃಷ್ಟಕರ.

ಈಗಾಗಲೇ ಕಾಲೇಜಿನಲ್ಲಿ 100ಕ್ಕೂ ಮಿಕ್ಕಿ ಮುಸ್ಲಿಂ ವಿದ್ಯಾರ್ಥಿನಿಯರು ವ್ಯಾಸಾಂಗ ನಡೆಸುತ್ತಿದ್ದರೂ ಕೇವಲ 6 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ವಿವಾದ ಸೃಷ್ಟಿಸುತ್ತಿದ್ದಾರೆ. 

 ಶಾಸಕರು, ಸಂಸದರು ಹಾಗೂ ದಾನಿಗಳ ಸಹಕಾರದಿಂದ ಕಾಲೇಜಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದು ಈ ಘಟನೆಯಿಂದ ಕಾಲೇಜಿನ ಇತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಸಮಸ್ಯೆ ಸೃಷ್ಟಿಯಾಗಿದೆ.

ಸಮವಸ್ತ್ರ ವಿಚಾರದಲ್ಲಿ ಕಾಲೇಜಿನ ನಿಯಮವನ್ನು ಪಾಲಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದ್ದು, ಧಾರ್ಮಿಕ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ನೈತಿಕ ಸ್ಥೈರ್ಯ ಕುಗ್ಗಿಸಲು ಯತ್ನಿಸುವವರಿಗೆ ಸೂಕ್ತ ಉತ್ತರ ನೀಡಲಿದ್ದೇವೆ. 

ಪದೇ ಪದೇ ಸಮಾಜದ ಶಾಂತಿ ಸೌಹಾರ್ದತೆಗೆ ಧಕ್ಕೆ ತರಲು ಕಾರ್ಯಾಚರಿಸುತ್ತಿರುವ ಸಮಾಜದ್ರೋಹಿಗಳಿಗೆ ತಕ್ಕ ಶಾಸ್ತಿ ನಡೆಸಲು ಹಿಂದೂ ಕಾರ್ಯಕರ್ತರು ಶಕ್ತರಾಗಿದ್ದು ಇಂತಹ ಪ್ರಯತ್ನ ಮರುಕಳಿಸದಂತೆ ಎಚ್ಚರಿಕೆ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply