ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರವೇ ನಿರ್ವಹಿಸಲಿ – ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಆಗ್ರಹ

ಉಡುಪಿ: ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಖಾಸಗೀಕರಣ ಮತ್ತು ಅಸಮರ್ಥ ನಿರ್ವಹಣೆ ಯಿಂದಾಗಿ ಇದೀಗ ರೋಗಿಗಳು ಪರದಾಡುವಂತಹ ಸ್ಥಿತಿ ಏರ್ಪಟ್ಟಿದ್ದು ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಬಿ‌.ಆರ್ ವೆಂಚರ್ಸ್’ನೊಂದಿಗಿನ ಒಡಂಬಡಿಕೆ ರದ್ದುಪಡಿಸಬೇಕು.

ಮತ್ತು ಈಗಾಗಲೇ ಕುಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು Karnataka Private Medical Establishments (KPME) ಕಾಯಿದೆಯಡಿ ನೊಂದಾವಣಿಗೊಂಡಿದ್ದು ಸರಕಾರ ಈ ಕಾಯಿದೆ ಅಡಿಯಿಂದ ಆಸ್ಪತ್ರೆಯ ನೊಂದಾವಣಿಯನ್ನು ತೆಗೆದು ಹಾಕಿ ಸಂಪೂರ್ಣವಾಗಿ ಸರಕಾರವೇ ನಿರ್ವಹಣೆ ಮಾಡಬೇಕೆಂದು ಸಾಲಿಡಾರಿಟಿ ಯೂತ್’ಮೂವ್ಮೆಂಟ್, ಉಡುಪಿ ಆಗ್ರಹಿಸುತ್ತದೆ.

2017 ರಲ್ಲಿ ಕಾಂಗ್ರೆಸ್ ಸರಕಾರ ಜಿಲ್ಲೆಯ ಜನತೆಯ ಮಾತು ಕೇಳದೆ ಉದ್ಯಮಿ ಬಿ.ಆರ್ ಶೆಟ್ಟಿ ಒಡೆತನದ ಬಿ.ಆರ್ ವೆಂಚರ್ಸ್’ಗೆ ಕೊಡುಗೈ ದಾನಿ ದಿ. ಹಾಜಿ ಅಬ್ದುಲ್ಲಾರವರು ಸರಕಾರಿ ಆಸ್ಪತ್ರೆಗೆ ನೀಡಿದ್ದ ಜಾಗವನ್ನು ಒಳಂಬಡಿಕೆಯ ಮುಖಾಂತರ ನೀಡಿತ್ತು. ತದನಂತರ ಮುಂದುವರಿದು ಖಾಸಗಿ ಆಸ್ಪತ್ರೆಗಳು ನೊಂದಾಯಿಸಿಕೊಳ್ಳುವ Karnataka Private Medical Establishments (KPME) ಕಾಯಿದೆಯಡಿ ನೊಂದಾಯಿಸಿಕೊಂಡು ಆಸ್ಪತ್ರೆ ನಡೆಸಲಾಗುತ್ತಿದೆ.

ಈ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಬಾರದು. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಸರಕಾರವೇ ಸ್ವತಃ ತನ್ನ ಅನುದಾನದ ಮೂಲಕ ನೂತನ ಕಟ್ಟಡ ನಿರ್ಮಾಣ ಮಾಡಬೇಕೆಂದು ಜಿಲ್ಲೆಯ ಜನತೆ ಆಗ್ರಹಿಸಿದ್ದರು. ಆದರೆ ಅಂದಿನ ಕಾಂಗ್ರೆಸ್ ಸರಕಾರ ಜನರ ಮಾತನ್ನು ಧಿಕ್ಕರಿಸಿ ಆಸ್ಪತ್ರೆಯ ನಿರ್ಮಾಣವನ್ನು ಖಾಸಗಿಯವರ ಸುಪರ್ದಿಗೆ ವಹಿಸಿತ್ತು.

ಈಗಾಗಲೇ ಇದನ್ನು ನಿರ್ವಹಿಸುವ ಹೊಣೆ ಹೊತ್ತಿದ್ದ ಖಾಸಗಿ ಸಂಸ್ಥೆಯ ನಿರ್ವಹಣಾ ವೈಫಲ್ಯ ಎಲ್ಲರ ಕಣ್ಣ ಮುಂದೆ ಇದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಹಾಯ ಹಸ್ತ ಚಾಚಬೇಕಿದ್ದ ಬಿಜೆಪಿ ಸರಕಾರ ಕೂಡ ಕಣ್ಣು ಮುಚ್ಚಿ ಕುಳಿತಿದ್ದು ಜನರ ಸಂಕಷ್ಟದ ಕಾಲದಲ್ಲೂ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದೆ.

ಕಳೆದ ಮೂರು ನಾಲ್ಕು ತಿಂಗಳಿನಿಂದ ವೈದ್ಯರು ಸೇರಿದಂತೆ ಆಸ್ಪತ್ರೆಯ ಸರಿ-ಸುಮಾರು 200 ಸಿಬ್ಬಂದಿಗೆ ವೇತನ ಸಿಕ್ಕಿಲ್ಲ. ಲಾಂಡ್ರಿಯವರಿಗೆ 10 ರಿಂದ 15 ಲಕ್ಷ ರೂಪಾಯಿ ಆಸ್ಪತ್ರೆಯ ವತಿಯಿಂದ ಪಾವತಿಸಲು ಬಾಕಿ ಇದೆ. ಆಸ್ಪತ್ರೆಯ ಯಂತ್ರೋಪಕರಣಗಳು ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿದೆ. ಸರಿಯಾದ ಸೌಲಭ್ಯವಿಲ್ಲದೆ ಚಿಕಿತ್ಸೆಗೆ ಬಂದ ಬಾಣಂತಿಯರನ್ನು ವಾಪಸು ಕಳುಹಿಸಿದ ಆರೋಪ ಕೂಡ ಕೇಳಿ ಬರುತ್ತಿದೆ.

ಈಗಿನ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿಯವರು ಕಳೆದೆರಡು ವರ್ಷದಿಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಇರುವವರು. ಅವರಿಗೆ ಈ ಜಿಲ್ಲೆಯ ಸಮಸ್ಯೆಗಳ ಕುರಿತು ಅರಿವಿದೆ. ಇಲ್ಲಿನ ಈಗಿನ ಶಾಸಕರಾದ ರಘುಪತಿ ಭಟ್ಟರು ಬಿಜೆಪಿಯವರು. ಬಿ. ಆರ್. ಶೆಟ್ಟಿಗೆ ಆಸ್ಪತ್ರೆ ವಹಿಸಿಕೊಡಬಾರದೆಂದು ಹೋರಾಟ ಮಾಡಿದವರಲ್ಲಿ ಅವರೂ ಒಬ್ಬರು. ಆದರೆ ಇವರೆಲ್ಲ ರೂ ಇಲ್ಲಿನ ಸಮಸ್ಯೆಗಳನ್ನು ನೋಡಿಯೂ ನೋಡದಂತೆ ವರ್ತಿಸುತ್ತಿದ್ದಾರೆ.

ಕೂಡಲೇ ಈ ಕುರಿತು ಸರಕಾರ ಕ್ರಮ ತೆಗೆದುಕೊಂಡು ಸಿಬ್ಬಂದಿಗಳ ಎಲ್ಲ ಸಂಬಳವನ್ನು ಪಾವತಿಸುದರೊಂದಿಗೆ ಬಿ.ಆರ್ ವೆಂಚರ್ಸ್ನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ರದ್ದು ಮಾಡಬೇಕು. ಅದರೊಂದಿಗೆ ಈ ಆಸ್ಪತ್ರೆಯು kpme ಕಾಯಿದೆಯಡಿ ನೊಂದಾಯಿತವಾಗಿದ್ದು ಅದನ್ನೂ ಕೂಡ ರದ್ದುಗೊಳಿಸಿ ಸಂಪೂರ್ಣವಾಗಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಸರಕಾರ ಸುಪರ್ದಿಗೆ ಪಡೆದು ಮುನ್ನಡೆಸುವಂತೆ ಸಾಲಿಡಾರಿಟಿ ಯೂತ್’ ಮೂವ್ಮೆಂಟ್ ಉಡುಪಿ ಆಗ್ರಹಿಸುತ್ತದೆ.

ಮುಹಮ್ಮದ್ ಇಫ್ತಿಕಾರ್, ಸಂಘಟನಾ ಕಾರ್ಯದರ್ಶಿ ಸಾಲಿಡಾರಿಟಿ ಯೂತ್’ಮೂವ್ಮೆಂಟ್, ಉಡುಪಿ

 
 
 
 
 
 
 
 
 
 
 

Leave a Reply