ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಸರಕಾರಿ ಆಸ್ಪತ್ರೆಯ 16 ಸಿಬ್ಬಂದಿಗಳನ್ನು ಏಕಾಏಕಿ ವಜಾ ಮಾಡಿರುವುದು ಅಮಾನವೀಯ – ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ

ಉಡುಪಿ: ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹದಿನಾರು ಸಿಬ್ಬಂದಿಗಳನ್ನು ಕೋರೊನಾ ಕಾಲದ ಬಿಕ್ಕಟ್ಟಿನ ನೆಪವೊಡ್ಡಿ ಏಕಾಏಕಿ ವಜಾ ಮಾಡಿರುವುದು ಅಮಾನವೀಯವಾಗಿದೆ. ಆಡಳಿತ ಮಂಡಳಿಯ ಕ್ರಮವನ್ನು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ತೀವ್ರವಾಗಿ ಖಂಡಿಸುತ್ತದೆ.

ಸಿಬ್ಬಂದಿಗಳನ್ನು ಏಕಾಏಕಿ ವಜಾಗೊಳಿಸಿ ಅವರ ಜೀವನದೊಂದಿಗೆ ಚೆಲ್ಲಾಟವಾಡುವುದು ಸೂಕ್ತವಲ್ಲ. ಸರಕಾರ ಮಧ್ಯೆ ಪ್ರವೇಶಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಅದರೊಂದಿಗೆ ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸರಕಾರವೇ ನಿರ್ವಹಿಸಬೇಕೆಂದು ಆಗ್ರಹಿಸುತ್ತೇವೆ.

ಈಗಾಗಲೇ ಬಿ.ಆರ್ ವೆಂಚರ್ಸ್ ಈ ಆಸ್ಪತ್ರೆಯನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಬಹಳಷ್ಟು ಸಮಯದಿಂದ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡದ ಕಾರಣ ಪ್ರತಿಭಟನೆ ಕೂಡ ನಡೆದಿತ್ತು.

ಇದರಿಂದಾಗಿ ಆಸ್ಪತ್ರೆಗೆ ಆಗಮಿಸಿದ ರೋಗಿಗಳಿಗೆ ತೀವ್ರತರವಾದ ಸಮಸ್ಯೆ ಸೃಷ್ಟಿಯಾಗಿತ್ತು. ಇದೀಗ 180 ಕ್ಕಿಂತ ಅಧಿಕ ಸಿಬ್ಬಂದಿಗಳು ಕೆಲಸ ನಿಲ್ಲಿಸಿ ಪ್ರತಿಭಟಿಸಿದ್ದಾರೆ. ಈ ರೀತಿಯ ಬೆಳವಣಿಗೆ ಉಡುಪಿಗೆ ಶೋಭೆ ತರುವುದಿಲ್ಲ.

ಉಡುಪಿಯ ಜನಪ್ರತಿನಿಧಿಗಳು ಹೇಳಿಕೆಗೆ ಮಾತ್ರ ಸಿಮೀತವಾಗಿರದೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ.

ಕಾಂಗ್ರೆಸ್ ಸರಕಾರ ಮಾಡಿದ ಖಾಸಗೀಕರಣದಂತಹ ಕ್ರಮದಿಂದ ಇಂದು ಉಡುಪಿ ಜಿಲ್ಲೆಯ ಜನರು ಪರಿತಾಪಿಸುವಂತಾಗಿದೆ. ಆದರೆ ಬಿಜೆಪಿ ಕೂಡ ಅವರಿಟ್ಟ ಹೆಜ್ಜೆಯಲ್ಲೇ ಮುಂದುವರಿಯುತ್ತಿದ್ದು ಆಸ್ಪತ್ರೆಯ ಸರಕಾರಿ ನಿರ್ವಹಣೆಯ ಕುರಿತು ಹೇಳಿಕೆಯ ಮೇಲೆ ಹೇಳಿಕೆ ನೀಡುತ್ತಿದೆ. ಆದರೆ ಯಾವುದೇ ಹೇಳಿಕೆಯನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾಗುತ್ತಿದೆ.

ಆದ್ದರಿಂದ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಹಾಜಿ ಅಬ್ದುಲ್ಲಾ ಆಸ್ಪತ್ರೆಯ ಕೆ.ಪಿ.ಎಮ್.ಇ ಕಾಯಿದೆಯ ನೊಂದಾವಣಿಯನ್ನು ರದ್ದು ಮಾಡಿ ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡು ನಿರ್ವಹಣೆ ಮಾಡಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.

~ಝಕ್ರಿಯಾ ಕೋಡಿಬೆಂಗ್ರೆ, ಜಿಲ್ಲಾ ಕಾರ್ಯದರ್ಶಿ, ಸಾಲಿಡಾರಿಟಿ ಯೂತ್’ಮೂವ್ಮೆಂಟ್

 
 
 
 
 
 
 
 
 
 
 

Leave a Reply