ಜುಲೈ 1 ರಂದು ರಾಜ್ಯ ಸರ್ಕಾರಿ ನೌಕರರ ಶತಮಾನೋತವ ಭವನ ಲೋಕಾರ್ಪಣೆ

ಉಡುಪಿ : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಆಧುನಿಕ ಮಾದರಿಯಲ್ಲಿ ಸುಸಜ್ಜಿತವಾಗಿ ನವೀಕೃತವಾಗಿರುವ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಕಚೇರಿಯಾಗಿರುವ ನೌಕರರ ನವೀಕೃತ ಕಟ್ಟಡವು ಜುಲೈ 01 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯರರವರಿ೦ದ ಲೋಕಾರ್ಪಣೆಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಸರ್ಕಾರಿನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಎಂ.ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಸೇರಿದಂತೆ ಸರ್ಕಾರದ ಉನ್ನತ ಅಧಿಕಾರಿಗಳು, ಗಣ್ಯರು ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು 1920 ರಲ್ಲಿ ಸ್ಥಾಪನೆ ಗೊಂಡು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಹಾಗೂ ರಾಷ್ಟ್ರದಲ್ಲೇ ಮಾದರಿ ಸಂಘಟನೆಯಾಗಿದ್ದು, ಹಲವು ವೃಂದ ಸಂಘಗಳಿಗೆ ಸಂಯೋಜನೆ ನೀಡಿರುತ್ತದೆ ಎಂದಿದ್ದಾರೆ.

ನೌಕರರ ಭವನವನ್ನು ಆಧುನಿಕ ಮಾದರಿಯಲ್ಲಿ ನವೀಕರಿಸಲು ಸರ್ಕಾರವು ರೂ. 12.00 ಕೋಟಿಗಳ ಅನುದಾನವನ್ನು ಮಂಜೂರು ಮಾಡಿತ್ತು. ಪ್ರಸ್ತುತ ಪೂರ್ಣಗೊಂಡಿರುವ ಭವ್ಯ ಹಾಗೂ ನವೀಕೃತ ಭವನದಲ್ಲಿ ಕಾನೂನು ಸಲಹಾ ಕೇಂದ್ರ, ಬೋರ್ಡ್ ಹಾಲ್, ಅತ್ಯಾಧುನಿಕ ಮಾದರಿಯ ಮೀಟಿಂಗ್ ಹಾಲ್, ಸುಸಜ್ಜಿತವಾದ ಸುಮಾರು 350 ಆಸನವುಳ್ಳ ಸಭಾಂಗಣ, 08 ಹವಾ ನಿಯಂತ್ರಿತ ವಿ.ವಿ.ಐ.ಪಿ. ಕೊಠಡಿಗಳು, 40 ಸುಸಜ್ಜಿತ ವಸತಿಗೃಹ, ವಿಶಾಲವಾದ ವಾಹನ ನಿಲುಗಡೆ ಪ್ರದೇಶ ಹಾಗೂ ವಿಶಾಲವಾದ ಪ್ರಾಂಗಣವನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply