ಗೋಕರ್ಣದಲ್ಲಿ ವಿದೇಶಿ ಪ್ರಜೆಗಳಿಂದ ಭಿಕ್ಷಾಟನೆ!

ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ವಿದೇಶಿ ಪ್ರಜೆಗಳ ದಂಡೇ ಹರಿದುಬರುತಿತ್ತು. ಬೀಚ್‌ನಲ್ಲಿ ಅರೆಬರೆ ಬಟ್ಟೆ ತೊಟ್ಟು ಮೋಜು-ಮಸ್ತಿಯಲ್ಲಿ ನಿರತರಾಗುತಿದ್ದ ವಿದೇಶಿಗರು, ಕೊರೊನಾ ನಂತರ ಭಿಕ್ಷೆ ಬೇಡುವುದು ಹಾಗೂ ವ್ಯಾಪಾರ ಮಾಡಲು ಇದೀಗ ಗೋಕರ್ಣದತ್ತ ಬರುತ್ತಿದ್ದಾರೆ.

ಹೌದು, ಇದು ಆಶ್ಚರ್ಯ ಎನಿಸಿದರೂ ಸತ್ಯ‌. ಈ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ವಿದೇಶಿಗರು ಗೋಕರ್ಣಕ್ಕೆ ಬಂದು ವರ್ಷಗಟ್ಟಲೇ ನೆಲೆಸಿ ಎಂಜಾಯ್ ಮಾಡುತಿದ್ದರು. ಇದರಿಂದಾಗಿ ಗೋಕರ್ಣದ ಹೋಮ್ ಸ್ಟೇ, ರೆಸಾರ್ಟ್‌ಗಳಿಗೆ ಉತ್ತಮ ಆದಾಯ ಬರುತ್ತಿತ್ತು.

ಯಾವಾಗ ಕೊರೊನಾ ಸಂಕಷ್ಟ ಎದುರಾಯಿತೊ, ಹಲವು ವಿದೇಶಿಗರು ತಮ್ಮ ದೇಶಕ್ಕೆ ತೆರಳಲು ಹಣವಿಲ್ಲದೇ ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು. ಕೆಲವರ ವೀಸಾ ಅವಧಿ ಮುಗಿದಿದ್ದರಿಂದ ವೀಸಾ ವಿಸ್ತರಣೆಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಇನ್ನೂ ಹಲವರು ಇಲ್ಲಿಯೇ ನೆಲಸಿದ್ದು, ತಮ್ಮ ದೇಶಕ್ಕೆ ಮರಳಲು ಭಿಕ್ಷಾಟನೆಯ ಮೊರೆ ಹೋಗಿದ್ದಾರೆ. ಕೆಲವರು ಸ್ಥಳೀಯರ ಸಹಾಯದಲ್ಲಿ ಭೂಮಿಯನ್ನು ಲೀಸ್‌ನಲ್ಲಿ ಪಡೆದು ಕೃಷಿ ಮಾಡಿ ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತಿದ್ದಾರೆ.

ಇದೀಗ ಗೋಕರ್ಣದ ಬೀದಿಯಲ್ಲಿ ವಿದೇಶಿ ಮಹಿಳೆಯೊಬ್ಬರು ಪ್ರತಿದಿನ ಪಿಟೀಲು ನುಡಿಸಿ ಭಿಕ್ಷೆ ಬೇಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಸಕ್ಕೆಂದು ಬರುವ ವಿದೇಶಿಗರು ಗೋಕರ್ಣದಲ್ಲಿ ಭಿಕ್ಷೆ ಬೇಡುವುದರ ಜೊತೆಗೆ ವ್ಯಾಪಾರಕ್ಕೆ ಇಳಿದಿರುವುದು ಸರಿಯಲ್ಲ. ಅವರನ್ನು ಮರಳಿ ದೇಶಕ್ಕೆ ಸರ್ಕಾರ ಕಳುಹಿಸುವ ವ್ಯವಸ್ಥೆ ಮಾಡಬೇಕು. ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಡೇರಾ ಹಾಕಿ ವಾಸಿಸುತಿದ್ದಾರೆ. ಇದರಿಂದ ಧಾರ್ಮಿಕ ಕ್ಷೇತ್ರದಲ್ಲಿ ಸ್ಥಳೀಯರು ಮುಜುಗರ ಪಡುವಂತಾಗಿದೆ ಎಂದು ಸ್ಥಳೀಯರು ಅಕ್ರೋಶ ಹೊರಹಾಕಿದ್ದಾರೆ.

 
 
 
 
 
 
 
 
 
 
 

Leave a Reply