ಗೋದಲಿ ನೀಡುವ ಸಂದೇಶ ~ ಶಾಂತಿ ಮತ್ತು ಪ್ರೀತಿ

ಉಡುಪಿ: ಎಲ್ಲಿ ಪ್ರೀತಿ ಶಾಂತಿ ಮತ್ತು ಸಹಬಾಳ್ವೆ ಇದೆಯೋ ಅಲ್ಲಿ ದೇವರ ವಾಸ ಇರುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಶುಕ್ರವಾರ ಉಡುಪಿ ಶೋಕಮಾತಾ ದೇವಾಲಯದ ಸಭಾಂಗಣದಲ್ಲಿ ಧರ್ಮಪ್ರಾಂತ್ಯದ ವತಿಯಿಂದ ಆಯೋಜಿಸಿದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ರಿಸ್ಮಸ್ ಎಂದಾಕ್ಷಣ ನೆನಪಿಗೆ ಬರುವುದು ಗೋದಲಿಯ ಚಿತ್ರಣ ಈ ಗೋದಲಿಯಲ್ಲಿ ದೇವಪುತ್ರ ಯೇಸು ಕ್ರಿಸ್ತರ ಜನನವಾಯಿತು ಈ ವೇಳೆ ಎಲ್ಲರೂ ಆ ಗೋದಲಿಯ ಸುತ್ತ ನೆರೆದಿದ್ದರು. ಗೋದಲಿ ನಮಗೆ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಸಾರುತ್ತದೆ. ಪ್ರೀತಿಯ ನೈಜ ಅರ್ಥ ತ್ಯಾಗ ಮತ್ತು ಅದನ್ನು ಯೇಸು ಸ್ವಾಮಿ ಪುಟ್ಟ ಗೋದಲಿಯಲ್ಲಿ ಜನಿಸಿ ಶಿಲುಬೆಯಲ್ಲಿ ಸಾವನಪ್ಪುವ ಮೂಲಕ ತ್ಯಾಗ ಮತ್ತು ಪ್ರೀತಿಯ ನಿಜ ಅರ್ಥವನ್ನು ತೋರಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಇಂದು ನಾವೆಲ್ಲ ಸಹೋದರ ಸಹೋದರಿ ಯರಾಗಿ ಜಾತಿ ಧರ್ಮದ ಗೋಡೆಗಳನ್ನು ಅಳಿಸಿ ಹಾಕಿ ಒಂದಾಗಿ ಬಾಳುವುದರ ಮೂಲಕ ಎಲ್ಲರನ್ನೂ ಪ್ರೀತಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಶರ್ಮಿಳಾ ಅವರು ಮಾತನಾಡಿ ಕ್ರಿಸ್ಮಸ್ ಹಬ್ಬ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಜಗತ್ತಿಗೆ ಸಾರಿದೆ. ಯೇಸು ಕ್ರಿಸ್ತರು ನೀಡಿದ ಸಂದೇಶದಂತೆ ಬಾಳಲು ಪ್ರತಿಯೊಬ್ಬರು ಪ್ರಯತ್ನಿಸೋಣ ಎಂದರು.

ಉಡುಪಿ ಪತ್ರಿಕಾ ಭವನದ ನೂತನ ಸಂಚಾಲಕ ಹಾಗೂ ಸಹ ಸಂಚಾಲಕರಾದ ಅಜಿತ್ ಆರಾಡಿ ಮತ್ತು ಅಂಕಿತ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಬಿ ಮಂಜುನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಧರ್ಮಪ್ರಾಂತ್ಯದ ಕುಲಪತಿ ವಂ|ರೋಶನ್ ಡಿ’ಸೋಜಾ, ಮಿಲಾಗ್ರಿಸ್ ಕ್ಯಾಥೆಡ್ರಲ್ ನ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಸ್ವಾಗತಿಸಿ, ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ವಂದಿಸಿದರು. ಉಜ್ವಾಡ್ ಪತ್ರಿಕೆಯ ಸಂಪಾದಕ ವಂ|ರೊಯ್ಸನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಫೇಡರಲ್ ಬ್ಯಾಂಕ್ ಸಹಕಾರ ನೀಡಿತ್ತು.

 
 
 
 
 
 
 
 
 
 
 

Leave a Reply