ಗಾಂಧಿ ಆಸ್ಪತ್ರೆಯ ಸ್ವಚ್ಛ್ ಭಾರತ್ ಅಭಿಯಾನದ ಪಂಚಮ ವರ್ಷದ ಸಂಭ್ರಮ

ಸ್ವಚ್ಛ ಭಾರತ್ ಅಭಿಯಾನ ಮತ್ತು ಸ್ವಚ್ಛ ಸುಂದರ ಉಡುಪಿ ನಗರ ಜನಾರೋಗ್ಯಕ್ಕೆ ಆಧಾರ ಎಂಬ೦ತೆ ನಮ್ಮ ನಗರ ಸ್ವಚ್ಛ ಸುಂದರವಾಗಿದ್ದರೆ ನಾವೆಲ್ಲರೂ ಆರೋಗ್ಯವಂತರಾಗಿ ಬಾಳಲು ಸಾಧ್ಯ ಎಂಬ ಧ್ಯೇಯ ವಾಕ್ಯದೊಂದಿಗೆ 12 ಜನವರಿ 2017, ಶ್ರೀ ವಿವೇಕಾನಂದರ ಜನ್ಮ ದಿನದಂದು ಆರಂಭವಾಗಿ 262 ವಾರಗಳಿಂದ ಸತತವಾಗಿ ನಡೆಯುವ ವಿನೂತನ ಪರಿಕಲ್ಪನೆಯ ಜನ ಜಾಗೃತಿ ಪರಿಸರ ಸ್ವಚ್ಛತಾ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ಗಾಂಧಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಪ್ರತೀ ಭಾನುವಾರ ಬೆಳಿಗ್ಗೆ 6ರಿಂದ 7 ಗಂಟೆ ತನಕ ಉಡುಪಿ ಸಿಟಿಬಸ್ ನಿಲ್ದಾಣದ ಗಾಂಧಿ ಆಸ್ಪತ್ರೆಯ ಎದುರಿನ ರಸ್ತೆಯಿಂದ ಕಲ್ಸಂಕ ವೃತ್ತದ ವರೆಗಿನ ರಾಜ ಮಾರ್ಗದ ಇಕ್ಕೆಲಗಳಲ್ಲಿಯೂ ಸ್ವಚ್ಛತೆ ಕಾರ್ಯಕ್ರಮ ನಡೆಯುತ್ತಿದೆ. 
ಇದರೊಂದಿಗೆ ಜನ ಜಾಗೃತಿ ಅಂಗವಾಗಿ ಪರಿಸರದ ಸ್ವಚ್ಛತೆ ಕಾಪಾಡಲು ಮಾರ್ಗದ ಇಕ್ಕೆಲಗಳಲ್ಲಿ ಕಸದ ಬುಟ್ಟಿಗಳನ್ನು (ಕಾಗದ ಮತ್ತು ಪ್ಲಾಸ್ಟಿಕ್ ಪೊಟ್ಟಣ ಹಾಕಲು) ಒದಗಿಸಿದ್ದು, ರಸ್ತೆಯ ವಿಭಾಜಕಗಳಲ್ಲಿ ಗಿಡಗಳನ್ನು ನೆಟ್ಟು ಪಂಚಮಿ ಟ್ರಸ್ಟ್ ಮೂಲಕ ಪೋಷಿಸಲಾಗುತ್ತಿದೆ.
5ವರ್ಷ ಪೂರ್ಣಗೊಂಡ ಸ್ವಚ್ಛ್ ಭಾರತ್ ಅಭಿಯಾನದ ಈ ಆಚರಣೆಯ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಉಡುಪಿಯ ಪ್ರಖ್ಯಾತ ಮನೋವೈದ್ಯ, ಬಾಳಿಗ ಆಸ್ಪತ್ರೆಯ ನಿರ್ದೇಶಕ ಡಾ. ಪಿ. ವಿ. ಭಂಢಾರಿಯವರು ಭಾಗವಹಿಸಿ ಫುಟ್‌ಪಾತ್‌ಗಳಿಗೆ ಸುಣ್ಣ-ಬಣ್ಣವನ್ನು ಬಳಿಯುವ ಮೂಲಕ ಸ್ವಯಂ ಸೇವಕರನ್ನು ಹುರಿದಂಬಿಸಿದರು ಮತ್ತು ಗಾಂಧಿ ಆಸ್ಪತ್ರೆಯ ಈ ಸುಧೀರ್ಘ, ನಿರಂತರ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ಇಂತಹ ಕಾರ್ಯವು ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದರೆ ಉಡುಪಿ ನಗರವು ಸ್ವಚ್ಚ ನಗರವಾಗಿ ಮಾದರಿಯಾಗುತ್ತದೆ ಎಂದರು. ನಿರಂತರವಾಗಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಸ್ವಯಂ ಸೇವಕರನ್ನು ಮತ್ತು ಗಾಂಧಿ ಆಸ್ಪತ್ರೆಯ ಸಿಬ್ಬಂದಿಗಳನ್ನು ಅಭಿನಂದಿಸಿದರು.
 
ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಎಂ. ಹರಿಶ್ಚಂದ್ರರವರು ಪ್ರಸ್ತಾವಿಕವಾಗಿ ಮಾತನಾಡಿ ಕೇವಲ ಪ್ರಚಾರಕ್ಕೆ ಈ ಸೇವೆಯನ್ನು ಸೀಮಿತಗೊಳಿಸದೆ ಇಡೀ ವಿಶ್ವದಲ್ಲಿ ಭಾರತ ಸ್ವಚ್ಛ ಭಾರತವಾಗಿ ಪರಿವರ್ತಿತಗೊಳ್ಳಲು ಪ್ರೇರಣೆ ಮಾಡುವ ನಮ್ಮ ಒಂದು ಸಣ್ಣ ಜನ ಜಾಗೃತಿ ಅಭಿಯಾನಕ್ಕೆ ವೈದ್ಯ ಮಿತ್ರರು, ಸಿಬ್ಬಂದಿ, ಸಾರ್ವಜನಿಕರು ಒಟ್ಟಾಗಿ ಖುದ್ದು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುತ್ತೇವೆ. 
ಈ ಮೂಲಕ ಸ್ವಚ್ಛ್ ಭಾರತ್ ಅಭಿಯಾನದ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸುವುದರೊಂದಿಗೆ, ನಗರಸಭೆಯ ಅಧಿಕಾರಿಗಳು ಶಾಲಾ-ಕಾಲೇಜಿನ ವಿಧ್ಯಾರ್ಥಿಗಳನ್ನು ಇಂತಹ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದೊರೊಂದಿಗೆ ಸ್ವಚ್ಛ ಸುಂದರ ಉಡುಪಿ ನಗರ ಜನಾರೋಗ್ಯಕ್ಕೆ ಆಧಾರವಾಗಲಿ ಎಂದು ಹಾರೈಸಿ, ಸ್ವಚ್ಛ್ ಭಾರತ್ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವವರಿಗೆ ಕೃತಜ್ಞತೆ ಸಲ್ಲಿಸಿದರು.
 
ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ವ್ಯಾಸರಾಜ ತಂತ್ರಿಯವರು ಮಾತಾನಾಡುತ್ತ ಆಸ್ಪತ್ರೆಯ ಸಿಬ್ಬಂದಿಗಳ ಮತ್ತು ಸ್ವಯಂಸೇವಕರ ಕರ್ತವ್ಯ ನಿಷ್ಠೆ, ಛಲ ಹಾಗೂ ಪರಿಸರ ಕಾಳಜಿಯಿಂದಲೇ ಇಂತಹ ಸುಧೀರ್ಘ ಅಭಿಯಾನ ನೆರವೇರಲು ಸಾಧ್ಯವಾಗಿದೆ ಹಾಗೂ ಉಡುಪಿಯ ಈ ಕಲ್ಸಂಕ ವೃತ್ತದವರೆಗಿನ ಹೆದ್ದಾರಿಯೂ ಹೂ-ಗಿಡಗಳಿಂದ ಅಲಂಕೃತಗೊ೦ಡು ಸ್ವಚ್ಛತೆಯಿಂದ ನಿಜವಾಗಿಯೂ ರಾಜಮಾರ್ಗವಾಗಿದೆಯಂದರು.
 
ಸ್ವಚ್ಛ್ ಭಾರತ್ ಅಭಿಯಾನದಲ್ಲಿ ಸತತವಾಗಿ ಭಾಗವಹಿಸಿದ ಆಸ್ಪತ್ರೆಯ ಸಿಬ್ಬಂದಿ ಮೂಂಡ್ಕೂರು ಧೀರನಾಥ್ ಮೂಲ್ಯರವರನ್ನು ಶಾಲು ಹೊದಿಸಿ ಡಾ. ಪಿ. ವಿ. ಭಂಢಾರಿ ಯವರು ಗೌರವಿಸಿದರು. ಸಾರ್ವಜನಿಕವಾಗಿ ನಿರಂತರ ಭಾಗವಹಿಸುವ ಸಿಂಡೀಕೆಟ್ ಬ್ಯಾಂಕಿನ ನಿವೃತ ಅಧಿಕಾರಿ ನರಸಿಂಹಮೂರ್ತಿ, ಮಾಹೆ ಉದ್ಯೋಗಿ ರಾಜೇಶ್ ಪಣಿಯಾಡಿ ಮತ್ತು ಡಾ. ಶುಭ ರವಿ ರಾವ್‌ರವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಜನಾರ್ದನ್ ಕೊಡವೂರು, ಪೂರ್ಣಿಮ ಜನಾರ್ದನ್, ರವಿರಾಜ್ ಹೆಚ್. ಪಿ., ಮತ್ತು ಗಾಂಧಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.  
 
 
 
 
 
 
 
 
 
 
 

Leave a Reply