ಸಾಮಾಜಿಕ ಕಾರ್ಯಕರ್ತ ಫಿರೋಝ್ ಮನ್ನಾ ನಿಧನಕ್ಕೆ ವೆಲ್ಫೇರ್ ಪಾರ್ಟಿ ಸಂತಾಪ.

ಸದಾ ಸಮಾಜಸೇವಾ ಚಟುವಟಿಕೆಗಳಲ್ಲಿ ನಿರತರಾಗಿರುತ್ತಿದ್ದ ನಿನ್ನೆಯಷ್ಟೇ ನಿಧನರಾದ ಜನಾಬ್ ಫಿರೋಝ್ ಮನ್ನಾರವರ ನಿಧನಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ವೆಲ್ಫೇರ್ ಪಾರ್ಟಿ 2011ರಲ್ಲಿ ಉಡುಪಿಯಲ್ಲಿ ತನ್ನ ಜಿಲ್ಲಾ ಸಮಿತಿಯನ್ನು ಆರಂಭಿಸಿದಾಗಲೇ ಅದರೊಂದಿಗೆ ಸೇರಿ ಪಕ್ಷದ ಬೆಳವಣಿಗೆಗೆ ಶ್ರಮವಹಿಸಿ ಅವರು ದುಡಿದಿದ್ದರು.

ಸಮಾಜಸೇವೆಯ ಹೆಚ್ಚಿನೆಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುತ್ತಿದ್ದ ಕುಟುಂಬದ ಹಿನ್ನೆಲೆಯಿಂದ ಬಂದ ಫಿರೋಝ್ ಮನ್ನಾ ನಾಲ್ಕು ದಶಕಗಳ ಹಿಂದೆ ಉಡುಪಿ ನಾಯರ್ ಕೆರೆ ಕೇಂದ್ರವಾಗಿಟ್ಟು ಸಮಾಜ ಮತ್ತು ಸಮುದಾಯ ಸೇವಾ ಚಟುವಟಿಗಳಿಗಾಗಿ ಅಂದಿನ ಯುವಕರು ಆರಂಭಿಸಿದ ಹಾಶ್ಮಿ ಫ್ರೆಂಡ್ಸ್ ಸರ್ಕಲ್’ನ ಆರಂಭಿಕ ಸದಸ್ಯರಾಗಿದ್ದರು. ಈ ಹಾಶ್ಮಿ ಫೆಂಡ್ಸ್ ಸರ್ಕಲ್ ಸಂಸ್ಥೆಯ ಪ್ರಯತ್ನಗಳಿಂದ ಎಂಬತ್ತರ ದಶಕದಲ್ಲೆ ನಾಯರ್ ಕೆರೆಯಲ್ಲಿ ಹಾಶ್ಮಿ ಮಸೀದಿ ಅಸ್ಥಿತ್ವಕ್ಕೆ ಬಂದಿತ್ತು. ಸಂಸ್ಥೆಯ ಇತರ ಸೇವಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಅವರ ತಂದೆ ಹಾಗೂ ತಂದೆಯ ಸಹೋದರರು ವಾಸಿಸುತ್ತಿದ್ದ ನಾಯರ್ ಕೆರೆಯ ಕೆಲವು ಮನೆಗಳ ಸಮೂಹ ಮನ್ನಾ ಕಾಂಪೌಂಡ್ ಎಂದು ಕರೆಸಿಕೊಳ್ಳುತ್ತಿತ್ತು. ಫಿರೋಝ್ ಮತ್ತು ದಾಯಾದಿಗಳು ಆ ಪ್ರದೇಶದಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ಸಹಾಯಕ್ಕೆ ಸದಾ ಸಿದ್ದರಿರುತ್ತಿದ್ದರು. ಅವರ ದೊಡ್ಡಪ್ಪ ಮನ್ನಾ ಸಾಹೇಬ್ ಎಂದು ಕರೆಸಿಕೊಳ್ಳುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ನಸ್ರುಲ್ಲಾ ಮನ್ನಾ ಸಾಹೇಬ್ ಅವರಿಂದ ಪಿರೋಝ್ ಪ್ರಭಾವಿತರಾಗಿದ್ದರು.

ಅವರ ತಂದೆ ಅಬು ಸಯೀದ್ ಮನ್ನಾ ಜಮಾಅತೆ ಇಸ್ಲಾಮಿ ಹಿಂದ್’ನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು ಮುಂದೆ ಫಿರೋಝ್ ಮನ್ನಾ ಕೂಡಾ ತಂದೆಯಂತೆಯೇ ತನ್ನನ್ನು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಸೇರಿ ಕಾರ್ಯಕರ್ತರಾಗಿ ಅದರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು. ಮುಸ್ಲಿಮ್ ಲೇಖಕರ ಸಂಘದ ಸದಸ್ಯರಾಗಿದ್ದ ಅವರು ತನ್ನ ಆಸಕ್ತಿಯ ವಿಷಯದಲ್ಲಿ ವಿವಿಧ ಪತ್ರಿಕೆಗಳಲ್ಲಿ ಆಗಾಗ ಬರಹಗಳನ್ನು ಬರೆಯುತ್ತಿದ್ದರು.

ಸೌಮ್ಯ ಸ್ವಭಾವ ಹಾಗೂ ಬಹುಮುಖ ಪ್ರತಿಭೆಯ ಸಾಮಾಜಿಕ ಕಾರ್ಯಕರ್ತ ಫಿರೋಝ್ ಮನ್ನಾ ಅವರ ನಿರ್ಗಮನ ದುಃಖದಾಯಕ ಎಂದು ವೆಲ್ಫೇರ್ ಪಾರ್ಟಿಯ ಉಡುಪಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 

Leave a Reply