​ಬೂತ್‌ಮಟ್ಟದಲ್ಲಿ ಪ್ರಜಾಪ್ರತಿನಿಧಿ ಸಮಿತಿ ​-​ಡಿ.ಕೆ ಶಿವಕುಮಾರ್

ಬದಲಾಗುವ ಕಾಲಘಟ್ಟದಲ್ಲಿ ನಾವಿದ್ದು, ಕಾಂಗ್ರೆಸ್ ಪಕ್ಷದ ಆಚಾರ -ವಿಚಾರ ಬದಲಾಗಲಿದೆ. ಕೆಪಿಸಿಸಿ ಎಲ್ಲಾ ರೀತಿಯ ಕಾರ್ಯ ಯೋಜನೆಗಳನ್ನು ರೂಪಿಸುತ್ತಿದ್ದು, ಪಕ್ಷದ ಕಾರ್ಯಕರ್ತರು ವಿನೂತನವಾಗಿ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದರು. ಭಾನುವಾರ ಬಾಸೆಲ್ ಮಿಶನ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನನಗೆ ಅನ್ಯಾಯ ಆದಾಗ ಪ್ರೀತಿ ತೊರಿದ್ದೀರಿ, ನನಗೆ ಇನ್ನೂ ಹೆಚ್ಚಿನ ಜವಬ್ಧಾರಿ ಬಂದಿದೆ. ​​

ಕೋವಿಡ್ ಸಂಕಷ್ಟದ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ.  ಜಿಲ್ಲಾ  ಕಾಂಗ್ರೇಸ್ ಅಡಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಂಘಟನೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಬಿಜೆಪಿ ಧರ್ಮ, ಜಾತಿ ಹೆಸರಲ್ಲಿ ರಾಜಕೀಯ ಮಾಡುತ್ತಿದೆ. ಇಲ್ಲಿನ ಪ್ರಜ್ಞಾವಂತ ಮತದಾರರಿಗೆ ಇದು ಅರಿವಿಗೆ ಬರುತ್ತಿದೆ. ಈ ಬಗ್ಗೆ ಹೆಚ್ಚಿನ ಒತ್ತು ನೀಡಿ ಚುನಾವಣೆಗೆ ಪೂರ್ವ ತಯಾರಿ ನಡೆಸಬೇಕು ಎಂದು ಸಲಹೆ ನೀಡಿದರು.

ಕಸ್ತೂರಿ ರಂಗನ್ ವರದಿ ಜಾರಿಗೆ ಕಾಲವಕಾಶ ಮುಗಿಯುತ್ತಿದೆ, ರಾಜ್ಯ, ಕೇಂದ್ರ ಸರ್ಕಾರ ಈ ಬಗ್ಗೆ ಏನನ್ನೂ ಮಾಡಿಲ್ಲ. ಕೋಟ್ಯಾಂತರ ರೈತರು ಇದರಿಂದ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ತಮ್ಮ ಭೂಮಿಯ ಹಿಡಿತವನ್ನೇ ರೈತ ಕಳೆದುಕೊಳ್ಳಲಿದ್ದಾರೆ. ಈ ಬಗ್ಗೆ ರಾಜ್ಯದ 25 ಬಿಜೆಪಿ ಸಂಸದರು ಇದ್ದರೂ ಪ್ರಯೋಜನ ಇಲ್ಲ. ಕಸ್ತೂರಿ ರಂಗನ್ ವರದಿಯನ್ನು ಕಾಂಗ್ರೆಸ್ ಸರ್ಕಾರ ತಿದ್ದುಪಡಿ ಮಾಡಲು ಶಿಫಾರಸ್ಸು ಮಾಡಿದರೂ ಅದನ್ನು ಬಿಜೆಪಿ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿತ್ತು ಎಂದು ಆರೋಪಿಸಿದರು.

ಎಪಿಎಂಸಿ ಹೋಯ್ತು, ಭೂಮಿ ಖಾಸಗಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಒಟ್ಟಾರೆ ರೈತರನ್ನು ಸಂಪೂರ್ಣ ಸಂಕಷ್ಟಕ್ಕೆ ಬಿಜೆಪಿ ಸರ್ಕಾರ ಸಿಲುಕಿಸಿದೆ ಎಂದು ಟೀಕಿಸಿದರು. ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಹಣ ಎಲ್ಲಿ ಹೋಯ್ತು. ಇದರಿಂದ ಸಮಾನ್ಯ ಜನರಿಗೆ ಅನುಕೂಲವಾಗಿಲ್ಲ. ಕೈಗಾರಿಕೋದ್ಯಮಿಗಳಿಗೆ ಮಾತ್ರ ಇದರಿಂದ ಅನುಕೂಲವಾಗಿದೆ ಎಂದರು.

ಬೂತ್‌ಮಟ್ಟದಲ್ಲಿ ಮಹಿಳಾ, ವಿದ್ಯಾರ್ಥಿ, ಕಾರ್ಮಿಕ, ಹಿಂದುಳಿದ ಘಟಕಗಳ 24 ಮಂದಿ ಸದಸ್ಯರುಳ್ಳ ಪ್ರಜಾಪ್ರತಿನಿಧಿ ಸಮಿತಿ ರಚಿಸಬೇಕು. ಎಲ್ಲೋ ಕುಳಿತು ಸಭೆ-ಚರ್ಚೆ ಮಾಡಿ ಸದಸ್ಯರ ನೇಮಿಸುವುದಲ್ಲ. ಈ ಬಗ್ಗೆ ಜಿಪಿಎಸ್ ಆಧರಿತ ವ್ಯವಸ್ಥೆ ಜಾರಿಗೆ ತರಲಾಗುವುದು. ಬೂತ್‌ಮಟ್ಟದ ಚಟುವಟಿಕೆ ಬಗ್ಗೆ ನಿಗಾ ವಹಿಸಲಾಗುವುದು. ವ್ಯವಸ್ಥಿತವಾಗಿ ಪಕ್ಷ ಸಂಘಟನೆ ಆಗಿದ್ದದ್ದರೇ ಪಕ್ಷಕ್ಕೆ ಅಧಿಕಾರ ಸಿಗುವುದಿಲ್ಲ. ಕಾರ್ಯಕರ್ತರ ಧ್ವನಿ ಡಿಕೆಶಿ ಧ್ವನಿಯಾಗಬೇಕು. ಬೂತ್ ಮಟ್ಟದಲ್ಲಿ ಡಿಜಿಟಲ್ ಯೂಥ್ ಕಮಿಟಿ ರಚನೆಯಾಗಬೇಕು. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿಯಾಗಿದ್ದು, ನನ್ನಿಂದ ಪಕ್ಷ ಎಂಬ ಭ್ರಮೆಯಿಂದ ಹೊರಬರಬೇಕು. ಪಕ್ಷದೊಳಗಿನ ಅಧಿಕಾರಕ್ಕಾಗಿ ಬ್ಲಾಕ್‌ಮೇಲ್ ತಂತ್ರಗಳು, ಚಾಡಿ ಹೇಳುವುದು ಇನ್ನೂ ಮುಂದೆ ನಡೆಯಲ್ಲ ಎಂದು ಡಿ.ಕೆ ಶಿವಕುಮಾರ್ ಪಕ್ಷದೊಳಗಿನ ಭಿನ್ನಮತೀಯರಿಗೆ ಛಾಟಿ ಬೀಸಿದರು. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಯು. ಆರ್ ಸಭಾಪತಿ, ಗೋಪಾಲ ಪೂಜಾರಿ, ಮುಖಂಡರಾದ ಎಂ.ಎ ಗಫೂರ್, ಮಿಥುನ್ ರೈ, ಪುಷ್ಪ ಅಮರನಾಥ್, ಗೀತಾ ವಾಗ್ಳೆ, ವೆರೋನಿಕಾ ಕರ್ನೆಲಿಯೋ, ಪ್ರವೀಣ್ ಶೆಟ್ಟಿ, ಸತೀಶ್ ಅಮಿನ್ ಪಡುಕೆರೆ, ದಿನಕರ ಹೇರೂರು, ಹರಿಪ್ರಸಾದ್ ಶೆಟ್ಟಿ, ಶಂಕರ್ ಕುಂದರ್, ಮದನ್‌ಕುಮಾರ್, ಪ್ರದೀಪ್‌ಕುಮಾರ್ ಶೆಟ್ಟಿ,ಜನಾರ್ಧನ ತೋನ್ಸೆ, ಸಚಿನ ಮಿಗಾ, ರಾಜಶೇಖರ್ ಕೋಟ್ಯಾನ್, ಪ್ರಖ್ಯಾತ್ ಶೆಟ್ಟಿ, ವಿಶ್ವಾಸ್ ಅಮೀನ್, ದಿನೇಶ್ ಪುತ್ರನ್,  ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ನವೀನ್‌ಚಂದ್ರ ಸುವರ್ಣ ಮತ್ತಿತರರಿದ್ದರು.

 
 
 
 
 
 
 
 
 
 
 

Leave a Reply