ಕರ್ತವ್ಯ ಲೋಪವೆಸಗಿದ ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು

ಉಡುಪಿ: ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುಳರನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತು ಮಾಡಲಾಗಿದ್ದು, ಮಂಗಳೂರಿನ ಡಯಟ್ ಸಂಸ್ಥೆಯಲ್ಲಿರುವ ಹಿರಿಯ ಉಪನ್ಯಾಸಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಮಂಜುಳಾ ವಿರುದ್ಧದ ಕರ್ತವ್ಯ ಲೋಪದ ಆರೋಪಗಳ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ವರದಿಯೊಂದನ್ನು ಸಲ್ಲಿಸಿದ್ದಾರೆ. ಅದರಲ್ಲಿ ಮಂಜುಳಾ ಕಛೇರಿ ಕರ್ತವ್ಯ ನಿರ್ವಹಣೆ ಕುರಿತು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆ ಹಾಗೂ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಇವರ ಕಛೇರಿಯ ಕರ್ತವ್ಯ ನಿರ್ವಹಣೆ ಅತಿಥಿ ಶಿಕ್ಷಕರ ನಿಯೋಜನೆ ಮತ್ತು ಅಕ್ಷರ ದಾಸೋಹ ಕಾರ್ಯಕ್ರಮ ಸರಿಯಾಗಿ ನಿರ್ವಹಿಸದೇ ಕುರಿತು ತನಿಖಾ ಸಮಿತಿ ಸಲ್ಲಿಸಿರುವ ವರದಿಯ ಮಾಹಿತಿ ತಿಳಿದು ಬಂದಿದೆ. ಅದರಂತೆ ಉಡುಪಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮೂಲ ಶಾಲೆಯಿಂದ ಅಗತ್ಯವಿರುವ ಶಾಲೆಗಳಿಗೆ ನಿಯೋಜನೆ ಮಾಡಿ ಆ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನಿಯಮಗಳಿಗೆ ವಿರುದ್ಧವಾಗಿ ನೇಮಕಾತಿ ಮಾಡಿ ಕರ್ತವ್ಯ ಲೋಪವೆಸಗಿರುತ್ತಾರೆ. ಕಛೇರಿಯ ವಾಹನದ ದುರಸ್ಥಿಗೆ ಆರ್.ಟಿ.ಓ ದಿಂದ ಪೂರ್ವಾನುಮತಿ ಪಡೆಯದೇ ವಾಹನ ದುರಸ್ಥಿ ಮಾಡಿಸಿ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ. 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎರ್ಮಾಳು ಈ ಶಾಲಾ ಮೈದಾನದ 0.1 ಎಕರೆ ಸ್ಥಳವನ್ನು ರಾಷ್ಟ್ರೀಯ ಹೆದ್ದಾರಿಗೆ ನೀಡಿದ್ದ ಕಾರಣ ಪರಿಹಾರದ ಮೊತ್ತ ರೂ 15.03 ಲಕ್ಷ ಖಾತೆಗೆ ಜಮೆಯಾಗಿದ್ದು, ಸದರಿ ಮೊತ್ತದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ರೂ 8.00 ಲಕ್ಷ ಹಾಗೂ ಕಾಂಪೌಂಡ್ ನಿರ್ಮಾಣಕ್ಕಾಗಿ ರೂ 7,03,184 ಗಳನ್ನು ಶಾಲಾ ಎಸ್.ಡಿ.ಎಂ.ಸಿ ಖಾತೆಗೆ ಪಾವತಿಸಿದ್ದು, ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ಪಂಚಾಯತ್, ಉಡುಪಿರವರ ವರದಿ ಅನ್ವಯ ಸಂಬಂಧಿಸಿದ ಆಸ್ತಿಯ ಮಾಲೀಕತ್ವವು ಶಿಕ್ಷಣ ಇಲಾಖೆ/ ತಾ.ಪಂ/ಜಿ.ಪಂ/ ಕರ್ನಾಟಕ ಸರ್ಕಾರ ಇದ್ದಲ್ಲಿ ಸದರಿ ಮೊತ್ತವನ್ನು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಿ ನಂತರ ಮರು ಬಳಕೆಗೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದು ವಿನಿಯೋಗಿಸಬೇಕಾಗಿದ್ದು, ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಪೂರ್ವಾನುಮತಿ ಪಡೆಯದೇ ನಿಯಮಬಾಹಿರವಾಗಿ ಎಸ್.ಡಿ.ಎಂ.ಸಿ ಖಾತೆಗೆ ಹಣ ಜಮೆ ಮಾಡಿರುತ್ತಾರೆ ಎಂಬುದಾಗಿ ಅಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

 

ಈ ಕಾರಣದಿಂದ ಕೆ.ಮಂಜುಳ ಅವರ ವಿರುದ್ಧದ ಕರ್ತವ್ಯ ಲೋಪದ ಆರೋಪಗಳ ಕುರಿತಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಈ ಕೂಡಲೇ ಜಾರಿಗೆ ಬರುವಂತೆ ಕರ್ನಾಟಕ ನಾಗರಿಕ ಸೇವಾ (ಸಿ.ಸಿ.ಎ.) ನಿಯಮಾವಳಿ 1957ರ ನಿಯಮ-10(1)ಡಿ ಮತ್ತು 10(3)ರ ಅಡಿಯಲ್ಲಿ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ರಾಜ್ಯಪಾಲರ ಆದೇಶದಂತೆ ಶಿಕ್ಷಣ ಇಲಾಖೆಯ ಅದೀನ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.

 
 
 
 
 
 
 
 
 
 
 

Leave a Reply