ಯಾದಗಿರಿಯಲ್ಲಿ ನಡೆದಿದೆ ಎನ್ನಲಾದ ಅಮಾನವೀಯ ಕೃತ್ಯದ ವಿಡಿಯೋ ವೈರಲ್ – ಬೆಚ್ಚಿಬಿದ್ದ ಜನತೆ

ಯಾದಗಿರಿ : ಮಹಿಳೆಯೊಬ್ಬಳನ್ನು ಸಂಪೂರ್ಣ ಬೆತ್ತಲಾಗಿಸಿದ ಗುಂಪೊಂದು ಆಕೆಯ ಮೇಲೆ ಕಬ್ಬಿನ ಜಲ್ಲೆಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಅದರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಯಾದಗಿರಿ ಸಮೀಪದಲ್ಲಿ ನಡೆದಿದೆ ಎನ್ನಲಾದ ಈ ಪೈಶಾಚಿಕ ಕೃತ್ಯ ನಿರ್ದಿಷ್ಟವಾಗಿ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದರ ಬಗ್ಗೆ ಇನ್ನು ತನಿಖೆಯಾಗಬೇಕಿದೆ.ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಮಹಿಳೆಯರ ಮೇಲೆ ಇಂತಹ ಮೃಗೀಯ ವರ್ತನೆಗಳು ನಡೆಯುವುದು ಕೆಲವೊಮ್ಮೆ ವರದಿಯಾಗುತ್ತಿದ್ದವು. ಆದರೆ, ಈ ಹೇಯ ಕೃತ್ಯವೀಗ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಆದರೆ, ಇಂತಹ ಘಟನೆ ನಡೆದ ಬಗ್ಗೆ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ಯಾರೂ ದೂರು ನೀಡಿದ ಬಗ್ಗೆ ತಿಳಿದುಬಂದಿಲ್ಲ.

ಯಾದಗಿರಿ-ಶಹಾಪುರ ಮಾರ್ಗ ಮಧ್ಯೆ ಜಮೀನೊಂದರಲ್ಲಿ ಕಗ್ಗತ್ತಲಲ್ಲಿ ನಡೆದಿದೆ ಎನ್ನಲಾಗಿರುವ ಈ ಘಟನೆಯನ್ನು ಹಲ್ಲೆಕೋರರ ಗುಂಪೇ ಮೊಬೈಲ್‌ನಲ್ಲಿ ಚಿತ್ರೀಕರಿಸಿದಂತಿದೆ. ತೀವ್ರ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಆಕೆಗೆ ಥಳಿಸಲು ಶುರು ಮಾಡುವ ನಾಲ್ಕೈದು ಜನರ ಗುಂಪು, ಆ ಮಹಿಳೆಯ ಮೈಮೇಲೆ ತುಂಡು ಬಟ್ಟೆಯನ್ನೂ ಬಿಡದೆ ಬೆತ್ತಲಾಗಿಸಿ ಥಳಿಸಿದ, ಲೈಂಗಿಕ ಹಿಂಸೆ ನೀಡಿದ ದೃಶ್ಯಗಳು ವಿಡಿಯೋದಲ್ಲಿವೆ. ಹಲ್ಲೆಕೋರರಲ್ಲೊಬ್ಬ ಮೊಬೈಲ್‌ನಲ್ಲಿ ಫೋಟೋ ತೋರಿಸಿ, ‘ಈಕೆ ನೀನೇ ಅಲ್ಲವೇ?’ ಎಂದು ಅವಾಚ್ಯವಾಗಿ ನಿಂದಿಸುತ್ತ ಥಳಿಸುತ್ತಾನೆ.

ಆಗ ಆಕೆ ‘ನಾನಲ್ಲ, ನಂಗೇನೂ ಗೊತ್ತಿಲ್ಲ’ ಎಂದು ಪರಿಪರಿಯಾಗಿ ಹೇಳುತ್ತಾಳೆ. ಆದರೂ ಬಿಡದ ಉಳಿದವರು ಮನಸೋ ಇಚ್ಛೆ ಥಳಿಸುತ್ತಾರೆ. ತನ್ನನ್ನು ಸಂಪೂರ್ಣ ಬೆತ್ತಲಾಗಿಸಿ, ಸುತ್ತುವರಿದು ಕೇಕೆ ಹಾಕುತ್ತಿದ್ದ ಗುಂಪಿಗೆ ಕೈಮುಗಿದು ಕಣ್ಣೀರು ಹಾಕಿದ ಆ ಮಹಿಳೆ, ತನ್ನನ್ನು ಬಿಡಿ ಎಂದು ಗೋಗರೆಯುತ್ತಾಳೆ.ಆಗ ಗುಂಪಲ್ಲಿದ್ದ ಒಬ್ಬ ಹೊಡೆಯುವ ನೆಪದಲ್ಲಿ ಆಕೆಯ ಅಂಗಾಂಗಗಳನ್ನು ಮುಟ್ಟಿವಿಕೃತವಾಗಿ ವರ್ತಿಸುತ್ತಾನೆ. ಹಲ್ಲೆಯ ನೋವು ತಾಳಲಾಗದ ಆಕೆ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳಾದರೂ, ಸುತ್ತುವರೆದ ಗುಂಪು ಆಕೆಯನ್ನು ಅಟ್ಟಾಡಿಸಿ ಹೊಡೆಯುತ್ತದೆ. ವಾಹನವೊಂದರ ಹೆಡ್‌ ಲೈಟ್‌ ಬೆಳಕು ಹಾಗೂ ಮೊಬೈಲ್‌ ಟಾರ್ಚ್ ಅನ್ನು ಆಕೆಯ ಮುಖಕ್ಕೆ ಹಿಡಿದು, ಹಿಂಸಿಸುವ ದೃಶ್ಯಗಳು ಕಂಡುಬರುತ್ತವೆ.

ನೋವು ತಾಳಲಾಗದೆ ಆಕೆ ಚೀರಾಡುತ್ತಿರುತ್ತಾಳೆ.ಸಹಾಯಕ್ಕೆ ಮಹಿಳೆ ಕೂಗಿದಾಗ ‘ಇಲ್ಲಿ ಯಾರೂ ಇಲ್ಲ, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುತ್ತೇವೆ’ ಎಂದು ಬೆದರಿಸಿದ ಮಾತುಗಳು ವೀಡಿಯೋದಲ್ಲಿ ಕೇಳಿಸುತ್ತವೆ. ‘ಪೊಲೀಸ್‌ ಠಾಣೆಯಲ್ಲೇ ಈ ಮಹಿಳೆ ನನ್ನಿಂದ 13-14 ಸಾವಿರ ಹಣ ಪಡೆದಿದ್ದಾಳೆ’ ಎಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಥಳಿಸುತ್ತಾನೆ. ಯಾದಗಿರಿ ಸಮೀಪದ ಚಟ್ನಳ್ಳಿ ಹಾಗೂ ಶಹಾಪುರದ ಹಳಿಸಗರ ಪ್ರದೇಶದ ಹೆಸರುಗಳು ಅವರ ಬಾಯಲ್ಲಿ ಕೇಳಿಬರುತ್ತವೆ. ‘ಬೆಳಿಗ್ಗೆ ಹಣ ವಾಪಸ್‌ ನೀಡಬೇಕು’ ಎಂದು ತಾಕೀತು ಮಾಡುವುದು ಕೇಳಿಸುತ್ತದೆ.

 
 
 
 
 
 
 
 
 
 
 

Leave a Reply