ಲೋನ್ App ಸಾಲಕ್ಕೆ ದಂಪತಿ ಬಲಿ!

ಲೋನ್ App ಸಾಲಕ್ಕೆ ದಂಪತಿ ಬಲಿಯಾಗಿದ್ದಾರೆ. ಕೊಲ್ಲಿ ದುರ್ಗಾರಾವ್ ಹಾಗೂ ರಮ್ಯಾ ಲಕ್ಷ್ಮಿ ಎಂಬ ದಂಪತಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಲ್ಲಿ ದುರ್ಗಾರಾವ್ ಅವರು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಲಬ್ಬರ್ತಿ ಮೂಲದವರಾಗಿದ್ದು, 10 ವರ್ಷಗಳ ಹಿಂದೆ ಜೀವನೋಪಾಯ ಅರಸಿ ರಾಜಮಹೇಂದ್ರವರಂಗೆ ಬಂದಿದ್ದರು. ಆರು ವರ್ಷಗಳ ಹಿಂದೆ ರಮ್ಯಾ ಲಕ್ಷ್ಮಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಪೇಂಟರ್ ಆಗಿ ದುರ್ಗಾರಾವ್ ಕೆಲಸ ಮಾಡುತ್ತಿದ್ದು, ಟೈಲರ್ ಆಗಿ ರಮ್ಯಾ ಲಕ್ಷ್ಮಿ ಕಾರ್ಯನಿರ್ವಹಿಸುತ್ತಿದ್ದರು. ದಂಪತಿ ಎರಡು ಆನ್‍ಲೈನ್ ಲೋನ್ ಅಪ್ಲಿಕೇಶನ್‍ಗಳಿಂದ ಸಾಲ ಪಡೆದುಕೊಂಡಿದ್ದರು. ಸಾಲ ನೀಡಿದವರು ಕಿರುಕುಳ ನೀಡಲು ಆರಂಭಿಸಿದರು. ದಂಪತಿ ಸಾಲದ ಮೊತ್ತದ ಸಂಪೂರ್ಣ ಹಣ ಪಾವತಿ ಮಾಡಿಲ್ಲ.

ನಂತರ ಆನ್‍ಲೈನ್ ಲೋನ್ ಆಯಪ್ ಕಂಪನಿಯು ದಂಪತಿಗೆ ಹಣ ನೀಡುವಂತೆ ಸೂಚಿಸಿದೆ. ಇದಲ್ಲದೆ ರಮ್ಯಾ ಲಕ್ಷ್ಮಿ ಅವರ ಚಿತ್ರ, ಮಾರ್ಫ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದೆ.

ಎರಡು ದಿನಗಳಲ್ಲಿ ಪೂರ್ಣ ಸಾಲವನ್ನು ಮರುಪಾವತಿಸದೇ ಇದ್ದರೆ ಶೀಘ್ರದಲ್ಲೇ ಆಕೆಯ ಮಾರ್ಫ್ ಮಾಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ದಂಪತಿಗೆ ಎಚ್ಚರಿಕೆ ನೀಡಿದೆ. ಇದರಿಂದ ದಂಪತಿ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ಟೂರಿಗೆ ತೆರಳಿ ಬಂಡ್‍ನಲ್ಲಿರುವ ಹೋಟೆಲ್‍ನಲ್ಲಿ ತಂಗಿದ್ದರು. ಈ ವೇಳೆ ಮಧ್ಯರಾತ್ರಿ ರಮ್ಯಾ ತನ್ನ ಸೋದರಸಂಬಂಧಿಗೆ ಕರೆ ಮಾಡಿ ತಾನು ಮತ್ತು ತನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದು, ತಮ್ಮ ಇಬ್ಬರೂ ಮಕ್ಕಳನ್ನು ನೋಡಿಕೊಳ್ಳುವಂತೆ ಹೇಳಿದ್ದಾರೆ.

ಕೂಡಲೇ ರಮ್ಯಾ ಸೋದರ ಇತರ ಸಂಬಂಧಿಕರಿಗೆ ಮಾಹಿತಿ ನೀಡಿ ಹೋಟೆಲ್ ಗೆ ಹೋದಾಗ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ದಂಪತಿ ಸಾವನ್ನಪ್ಪಿದ್ದಾರೆ. ಇಬ್ಬರೂ ವಿಷ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.

 
 
 
 
 
 
 
 
 
 
 

Leave a Reply