ಮೈಸೂರು ಗ್ಯಾಂಗ್‌ರೇಪ್‌ ಪ್ರಕರಣದ ಆರೋಪಿಗಳು ಅಂದರ್

ಮೈಸೂರು: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮೈಸೂರು ಗ್ಯಾಂಗ್‌ರೇಪ್‌ ಪ್ರಕರಣದ ಐವರು ಆರೋಪಿಗಳನ್ನು ತಮಿಳುನಾಡಿನಲ್ಲಿ ಪತ್ತೆ ಹಚ್ಚಿರುವ ಪೊಲೀಸರು ಕೊನೆಗೂ ಅವರನ್ನು ಹೊರ ರಾಜ್ಯದಲ್ಲಿ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಪ್ರಕರಣ ನಡೆದ ನಾಲ್ಕು ದಿನಗಳ ಬಳಿಕಪೋಲೀಸರ ಬೇಟೆ. 

ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದ ಪೊಲೀಸರು ಅತ್ಯಾಚಾರ ಆರೋಪಿಗಳು ಅಪರಾಧ ಕೃತ್ಯ ನಡೆಸಿದ ಬಳಿಕ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡಿಗೆ ತೆರಳಿದ್ದಾರೆ ಎನ್ನಲಾಗಿದ್ದು, ಎಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳೆಂಬ ಶಂಕೆ ವ್ಯಕ್ತವಾಗಿತ್ತು. ಆದರೀಗ ಯುವತಿ ಸ್ನೇಹಿತ ಕೊಟ್ಟ ಮಾಹಿತಿ  ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆ ಹಿನ್ನಲೆ :  ಮಂಗಳವಾರದಂದು ನಗರದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಮುಂಬೈ ಮೂಲದ ವಿದ್ಯಾರ್ಥಿನಿ ಮೇಲೆ ಲಲಿತಾದ್ರಿಪುರ ಗ್ರಾಮದ ಸಮೀಪದ ನಿರ್ಜನ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿದೆ.

ರಾತ್ರಿ 8 ಗಂಟೆ ಸುಮಾರಿನಲ್ಲಿ ಸ್ನೇಹಿತನ ಜತೆಗೆ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದ ಮೋರಿಯೊಂದರ ಮೇಲೆ ಕುಳಿತು ಮಾತನಾಡುತ್ತಿದ್ದಾಗ ಗುಡ್ಡದ ಕುರುಚಲು ಗಿಡಗಳ ಹಿಂಬದಿ ಯಿಂದ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಯುವತಿ ಮೇಲೆರಗಿ ಈ ದುಷ್ಕೃತ್ಯ ಎಸಗಿದ್ದಾರೆ. ಈ ವೇಳೆ ಆಕೆಯ ಸ್ನೇಹಿತ ಪ್ರತಿರೋಧ ತೋರಿಸಿದಾಗ ಆತನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.

ಪ್ರಕರಣದ ಬಗ್ಗೆ ಯುವಕ ಹೇಳಿದ್ದು ಹೀಗೆ : ‘ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿಯ ಪ್ರದೇಶ ನಾನು ವಾಕಿಂಗ್‌ ಮಾಡುವ ಸ್ಥಳ.  ಆ.24ರಂದು ಸಂಜೆ ತರಗತಿಗಳು ಮುಗಿದ ಬಳಿಕ ಬೈಕ್‌ನಲ್ಲಿ ಸ್ನೇಹಿತೆ ಜತೆ ಹೋಗಿ ಅಲ್ಲಿ ಕುಳಿತಿದ್ದೆ. 

ಏಕಾಏಕಿ 6 ಜನ ಅಲ್ಲಿಗೆ ಬಂದು ದೊಣ್ಣೆಗಳಿಂದ ಹಲ್ಲೆ ಮಾಡಿದರು. ನನ್ನ ಸ್ನೇಹಿತೆಯನ್ನು ಎಳೆದುಕೊಂಡು ಹೋದರು. ಗುಂಪಿನಲ್ಲಿದ್ದ ಒಬ್ಬ ಕಲ್ಲಿನಿಂದ ನನ್ನ ತಲೆಗೆ ಹೊಡೆದಿದ್ದರಿಂದ ನಾನು ಪ್ರಜ್ಞೆ ತಪ್ಪಿ ಅಲ್ಲೇ ಬಿದ್ದೆ. ಪ್ರಜ್ಞೆ ಬಂದಾಗ ಅವರು ಪಕ್ಕದಲ್ಲಿ ನಿಂತಿದ್ದರು. 

ನನ್ನ ತಂದೆಗೆ ಕರೆ ಮಾಡಿ  3 ಲಕ್ಷ ಹಣ ತರಿಸುವಂತೆ ಒತ್ತಾಯಿಸಿದರು. ನಾನು ನನ್ನ ಸ್ನೇಹಿತೆಯ ಬಗ್ಗೆ ಕೇಳಿದೆ. ಆಗ ಪಕ್ಕದ ಪೊದೆಯಿಂದ ಆಕೆಯನ್ನು ಕರೆದುಕೊಂಡು ಬಂದರು. ಆಕೆಯನ್ನು ನನ್ನ ಪಕ್ಕದಲ್ಲಿ ಕೂರಿಸಿದರು. ಆಕೆಗೂ ಗಾಯಗಳಾಗಿತ್ತು’ ಎಂದು ಪೊಲೀಸರ ವಿಚಾರಣೆ ವೇಳೆ ಸಂತ್ರ ಸ್ತೆಯ ಸ್ನೇಹಿತ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಆದರೆ ಈ ಅಂಶವು ಎಷ್ಟುಸತ್ಯ ಎಂಬುದು ಪೊಲೀಸರ ತನಿಖೆಯಿಂದ ಮಾತ್ರ ಸಾಬೀತಾಗಬೇಕಿದೆ.

 
 
 
 
 
 
 
 
 
 
 

Leave a Reply